More

    ಕೆಲಸದತ್ತ ಸಾರಿಗೆ ನೌಕರರು

    ಮಂಗಳೂರು: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮೂರನೇ ದಿನ ಮುಂದುವರಿದರೂ, ದ.ಕ.ಜಿಲ್ಲೆಯಲ್ಲಿ ನೌಕರರು ವಿರಳವಾಗಿಯಾದರೂ ನಿಧಾನವಾಗಿ ಕೆಲಸದತ್ತ ಮುಖ ಮಾಡುತ್ತಿರುವುದು ಕಂಡುಬಂದಿದೆ.

    ಶುಕ್ರವಾರ 70ಕ್ಕೂ ಅಧಿಕ ಸರ್ಕಾರಿ ಬಸ್‌ಗಳು ಸಂಚರಿಸಿವೆ. ಮಂಗಳೂರು ವಿಭಾಗದಲ್ಲಿ 57 ಹಾಗೂ ಪುತ್ತೂರಿನಲ್ಲಿ 20ಕ್ಕೂ ಅಧಿಕ ಸರ್ಕಾರಿ ಬಸ್ ರಸ್ತೆಗೆ ಇಳಿದಿದೆ. ಗುರುವಾರ ಸಂಚಾರ ನಡೆಸಿದ್ದ 40 ಬಸ್‌ಗಳು ಶುಕ್ರವಾರವೂ ರಸ್ತೆಗಿಳಿದವು. ಖಾಸಗಿ ಬಸ್‌ಗಳು ಕೂಡ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಇನ್ನಷ್ಟು ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್, ಟೆಂಪೋಗಳು ರಸ್ತೆಗೆ ಇಳಿದಿವೆ.

    ಮಂಗಳೂರಿನಿಂದ ಶುಕ್ರವಾರ 25 ಬಸ್‌ಗಳು ರಸ್ತೆಗೆ ಇಳಿದಿವೆ. ಸ್ಥಳೀಯ ಚಾಲಕ-ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕೊಯಮತ್ತೂರಿಗೆ ವೋಲ್ವೋ ಬಸ್ಸನ್ನು ಓಡಿಸಲಾಗಿದೆ. ಮೈಸೂರು, ಬೆಂಗಳೂರು, ಸೋಮವಾರಪೇಟೆ ಅಲ್ಲದೆ ಧರ್ಮಸ್ಥಳ, ಸುಬ್ರಹ್ಮಣ್ಯ, ಕಾಸರಗೋಡು ಮಾರ್ಗಗಳಲ್ಲಿ ಬಸ್ ಸಂಚಾರ ನಡೆಸಿದೆ.
    ಪುತ್ತೂರು ವಿಭಾಗದಿಂದ 15 ಬಸ್‌ಗಳು ಸಂಚಾರ ನಡೆಸಿವೆ. ಧರ್ಮಸ್ಥಳ-ಸುಬ್ರಹ್ಮಣ್ಯ, ಬೆಳ್ತಂಗಡಿ-ಧರ್ಮಸ್ಥಳ, ಸ್ಟೇಟ್‌ಬ್ಯಾಂಕ್, ಉಪ್ಪಿನಂಗಡಿ ಮಾರ್ಗಗಳಲ್ಲಿ ಬಸ್ ಸಂಚಾರ ನಡೆಸಲಾಗಿದೆ. ಆದರೆ ಎರಡೂ ವಿಭಾಗದಿಂದ ರಾತ್ರಿ ಬಸ್‌ಗಳು ಸಂಚರಿಸಿಲ್ಲ. ಖಾಸಗಿ ಬಸ್‌ಗಳು ರಾತ್ರಿ ವೇಳೆ ಬೆಂಗಳೂರು, ಮೈಸೂರು ನಡುವೆ ನಿರಾತಂಕವಾಗಿ ಸಂಚರಿಸಿವೆ.

    ಕೆಎಸ್‌ಆರ್‌ಟಿಸಿ ಬಿಜೈ ನಿಲ್ದಾಣದಿಂದ ಏಳೆಂಟು ಖಾಸಗಿ ಬಸ್‌ಗಳು ಮೈಸೂರು ಹಾಗೂ ಚಿಕ್ಕಮಗಳೂರಿಗೆ ಸಂಚಾರ ನಡೆಸಿವೆ. ಈಗಾಗಲೇ ಜಿಲ್ಲೆಯಲ್ಲಿ 150ಕ್ಕೂ ಅಧಿಕ ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿರುವುದರಿಂದ ಪ್ರಯಾಣಿಕರಿಗೆ ಅಷ್ಟಾಗಿ ತೊಂದರೆಯಾಗಿಲ್ಲ. ಆದರೆ ಕೆಎಸ್ಸಾರ್ಟಿಸಿ ಬಸ್ ಹಂತ ಹಂತವಾಗಿ ಆರಂಭವಾದರೂ ಜನತೆ ಮಾತ್ರ ಮುಷ್ಕರ ಗುಂಗಿನಿಂದ ಹೊರಬಂದಿಲ್ಲ.

    ತರಬೇತಿ ಸಿಬ್ಬಂದಿಯೂ ಗೈರು: ಮಂಗಳೂರು ವಿಭಾಗದಲ್ಲಿ ಸುಮಾರು 212 ತರಬೇತಿ ಸಿಬ್ಬಂದಿ ಇದ್ದಾರೆ. ಇವರೆಲ್ಲರಿಗೆ ನೋಟಿಸ್ ನೀಡಲಾಗಿದೆ. ಅನಧಿಕೃತ ರಜೆಯಲ್ಲಿ ತೆರಳಿದ ಕಾಯಂ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗಕ್ಕೂ ನೋಟಿಸ್ ನೀಡಲಾಗಿದ್ದು, ಕೆಲವು ಮಂದಿ ನೋಟಿಸ್‌ಗೆ ಸ್ಪಂದಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸಿಬ್ಬಂದಿಗೆ ಮುಷ್ಕರ ನಡೆಸದಂತೆ, ಸಾರ್ವಜನಿಕ ಸೇವೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮನ ಒಲಿಸಲಾಗುತ್ತಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ. ಮುಷ್ಕರವನ್ನು ನೆಪವಾಗಿಟ್ಟುಕೊಂಡು ಕರ್ತವ್ಯ ನಿರ್ವಹಿಸುವ ತಮ್ಮದೇ ಸಿಬ್ಬಂದಿಗೆ ನೌಕರರು ಬೆದರಿಸಿ ಅಡ್ಡಿಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎರಡೂ ವಿಭಾಗಗಳ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ತರಬೇತಿ ಚಾಲಕ, ನಿರ್ವಾಹಕರಿಗೆ ನೋಟಿಸ್: ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಐದು ಡಿಪೋಗಳ ಒಟ್ಟು 224 ತರಬೇತಿ ಚಾಲಕ, ನಿರ್ವಾಹಕರಿಗೆ ಶುಕ್ರವಾರ ಇಲಾಖಾ ಮೇಲಧಿಕಾರಿಗಳ ನಿರ್ದೇಶನದಂತೆ ಕೆಎಸ್‌ಆರ್‌ಟಿಸಿ ನೋಟಿಸ್ ನೀಡಿದೆ. ತರಬೇತಿ ಚಾಲಕ, ನಿರ್ವಾಹಕರೂ ಸಾರಿಗೆ ನೌಕರರ ಒಕ್ಕೂಟಕ್ಕೆ ಬೆಂಬಲ ಸೂಚಿಸಿ ಕರ್ತವ್ಯಕ್ಕೆ ಗೈರಾಗಿದ್ದರು. ನಿಯಮ ಪ್ರಕಾರ ತರಬೇತಿ ಚಾಲಕ, ನಿರ್ವಾಹಕರು ಸಂಸ್ಥೆ ವಿರುದ್ಧ, ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ. ಈ ಹಿನ್ನೆಲೆ ಪುತ್ತೂರು ಘಟಕದ 56, ಸುಳ್ಯ 30, ಬಿ.ಸಿ.ರೋಡ್ 62, ಧರ್ಮಸ್ಥಳ 47, ಮಡಿಕೇರಿ 48 ಹಾಗೂ 1 ತರಬೇತಿ ತಾಂತ್ರಿಕ ಸಹಾಯಕರಿಗೆ ಕರ್ತವ್ಯಕ್ಕೆ ತಕ್ಷಣ ಹಾಜರಾಗಬೇಕು. ಹಾಜರಾಗದಿದ್ದರೆ ಆಯ್ಕೆ ಪಟ್ಟಿಯಿಂದ ಕೈಬಿಡುವ ನೋಟಿಸ್ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಅಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

    ಉಡುಪಿಯಲ್ಲಿ ರಸ್ತೆಗಿಳಿದ 5 ಸಾರಿಗೆ ಬಸ್: ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಐದು ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸಿವೆ. ಕಾರ್ಕಳಕ್ಕೆ 3, ಮೈಸೂರು, ಹುಬ್ಬಳ್ಳಿಗೆ ತಲಾ 1 ಬಸ್ಸು ಸಂಚರಿಸುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ಭಾಗಿಯಾದವು. ಸದ್ಯಕ್ಕೆ ನೌಕರರ ಮನವೊಲಿಕೆ ಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರದ ಊರಿಗೆ ತೆರಳುವವರಿಗೆ ಸಮಸ್ಯೆಯಾಗದಂತೆ ಖಾಸಗಿ ಬಸ್ ಒಕ್ಕೂಟ ಸಹಕಾರ ಮುಂದುವರಿದಿದೆ. ಜಿಲ್ಲೆಯಲ್ಲಿ ಹೆಚ್ಚುವರಿ 30 ಖಾಸಗಿ ಬಸ್ಸುಗಳು ಇತರೆ ಜಿಲ್ಲೆಗಳಿಗೆ ಸಾರಿಗೆ ಸೇವೆ ಕಲ್ಲಿಸಿದೆ. ಉಡುಪಿಯಿಂದ ಬೆಂಗಳೂರು, ಹುಬ್ಬಳ್ಳಿ, ಉತ್ತರಕನ್ನಡ, ಹುಬ್ಬಳ್ಳಿ, ಶಿರಸಿ, ಬಿಜಾಪುರಕ್ಕೆ ಖಾಸಗಿ ಬಸ್ಸು ಸೇವೆ ನೀಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts