More

    ಜಿಲ್ಲೆಯೊಳಗೆ ಮಾತ್ರ ಪ್ರಯಾಣ

    ಜಿಲ್ಲೆಯೊಳಗೆ ಮಾತ್ರ ಪ್ರಯಾಣ

    ಚಿಕ್ಕಮಗಳೂರು: ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಲಾಕ್​ಡೌನ್ ಕೊಂಚ ಸಡಿಲಿಕೆ ಆಗಿದ್ದರಿಂದ ಮೇ 4ರಂದು ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭಿಸಲು ಭಾನುವಾರ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಸಿದ್ಧಗೊಳಿಸಿದರು.

    ಬಸ್​ಗಳಿಗೆ ರಾಸಾಯನಿಕ ಸಿಂಪಡಿಸುವ ಕಾರ್ಯ ಭರದಿಂದ ನಡೆಯಿತು. ಪ್ರಯಾಣಿಕರು ಕೈಗಳನ್ನು ಇರಿಸುವ ಬಾಗಿಲ ಹಿಡಿಕೆ, ಕಂಬಿಗಳು, ಆಸನಗಳು, ಚಾಲಕ, ನಿರ್ವಾಹಕರ ಆಸನಗಳು ಸೇರಿ ಬಸ್​ಗೆ ರಾಸಾಯನಿಕ ಸಿಂಪಡಿಸಲಾಯಿತು.

    ಪ್ರಯಾಣಿಕರ ಸಂಖ್ಯಗೆ ಅನುಗುಣವಾಗಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಬಸ್​ಗಳನ್ನು ಬಿಡಲು ನಿರ್ಧರಿಸಲಾಗಿದೆ. ಚಾಲಕರು ಹಾಗೂ ನಿರ್ವಾಹಕರಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ಅಂತರ ಕಾಯ್ದುಕೊಂಡು ನಿಲ್ಲಲು ವೃತ್ತಾಕಾರದ ಗುರುತು ಹಾಕಲಾಗಿದೆ. ಈಗಾಗಲೇ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯಾಪ್ತಿಯ ಎಲ್ಲ ಆರು ಡಿಪೋಗಳಿಂದ 100 ವಾಹನಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.

    ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಸಮ್ಮುಖದಲ್ಲಿ ಎಲ್ಲ ಸಿದ್ಧತೆ ನಡೆಸಲಾಗಿದೆ. ವಿಭಾಗೀಯ ಟೆಕ್ನಿಕಲ್ ಇಂಜಿನಿಯರ್ ಬಿ.ಎಸ್.ರಮೇಶ್, ಘಟಕ ವ್ಯವಸ್ಥಾಪಕ ಕರುಣಾಕರ್, ಸಹಾಯಕ ಸಂಚಾರ ವ್ಯವಸ್ಥ್ಥಾಪಕಿ ಬೇಬಿ ಬಾಯಿ ರಾಸಾಯನಿಕ ಸಿಂಪಡಣೆ ವೇಳೆ ಇದ್ದರು.

    ವಿಜಯವಾಣಿ ಜತೆ ಮಾತನಾಡಿದ ಎಚ್.ಟಿ.ವೀರೇಶ್, ಜಿಲ್ಲೆ ವ್ಯಾಪ್ತಿಯಲ್ಲಿ ಮಾತ್ರ ಮೇ 4ರಿಂದ ಬಸ್ ಸಂಚಾರ ಆರಂಭಗೊಳ್ಳಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ, ಮಾಸ್ಕ್ ಹೊಂದಿರಬೇಕು. ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಾವು ಗುರುತು ಮಾಡಿದ ಸ್ಥಳದಲ್ಲೇ ನಿಲ್ಲಬೇಕು. ಅವರ ಹೆಸರು ಮತ್ತು ವಿಳಾಸ ನೋಂದಣಿ ಮಾಡಿದ ನಂತರವೇ ಬಸ್ ಏರಬೇಕು. ಈ ನಿಯಮಗಳು ಕಡ್ಡಾಯ ಎಂದರು.

    ಮೇ 17ರವರೆಗೂ ಬೆಳಗ್ಗೆ 7ರಿಂದ ಸಂಜೆ 7ವರೆಗೂ ವಾಹನ ಸಂಚರಿಸಲಿವೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಲಾಕ್​ಡೌನ್ ಯಥಾಸ್ಥಿತಿ ಮುಂದುವರಿಯಲಿದೆ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಂದಿರುವ ಸೂಚನೆಯಂತೆ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರಯಾಣಕ್ಕೂ ಮುನ್ನ ಹಾಗೂ ನಂತರ ಸ್ಯಾನಿಟೈಸ್ ಮಾಡಲಾಗುವುದು. ಜತೆಗೆ ಪ್ರತಿ ಬಸ್​ನಲ್ಲೂ 27 ಜನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಎಚ್.ಟಿ.ವೀರೇಶ್ ತಿಳಿಸಿದರು. ನಿಲ್ದಾಣದಲ್ಲಿ ಅನಾವಶ್ಯಕವಾಗಿ ಯಾರೂ ತಂಗುವಂತಿಲ್ಲ. ಪ್ರಯಾಣಿಕರಿಗೆ ಮಾತ್ರ ನಿಲ್ದಾಣ ಪ್ರವೇಶಕ್ಕೆ ಅವಕಾಶವಿದೆ. 40 ರಿಂದ 45 ದಿನ ಕರ್ತವ್ಯಕ್ಕೆ ಹಾಜರಾಗದ ನಿಗಮದ ಸಿಬ್ಬಂದಿಗೂ ಸಹ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

    ತಾಲೂಕುಗಳಿಗೆ ವಾಹನ ಕಳುಹಿಸುವ ವೇಳೆ ಆರಂಭಿಕ ಪಾಯಿಂಟ್​ನಲ್ಲೇ 27 ಸೀಟು ಭರ್ತಿಯಾಗಿದ್ದರೆ ಬಸ್​ಗಳು ನಿಲುಗಡೆ ರಹಿತವಾಗಿ ಸಾಗುತ್ತವೆ. ಸ್ಥಳಾವಕಾಶವಿದ್ದರೆ ಮಾತ್ರ ಮಾರ್ಗದ ಮಧ್ಯೆ ಪ್ರಯಾಣಿಕರಿಗೆ ನಮ್ಮ ನಿಬಂಧನೆಗಳ ಪ್ರಕಾರ ಸ್ಯಾನಿಟೈಸರ್ ಹಾಕಿ ಹತ್ತಿಸಿಕೊಳ್ಳಲಾಗುತ್ತದೆ. ಪ್ರಯಾಣಿಕರ ಪಟ್ಟಿಗೆ ಅವರ ಹೆಸರನ್ನು ಸೇರಿಸಿಕೊಳ್ಳಲಾಗುತ್ತದೆ. ಪ್ರಯಾಣ ದರ ಎಂದಿನಂತಿರಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts