More

    ‘ಕಂಫರ್ಟ್ ಜೋನ್’ನಿಂದ ಹೊರಬಂದರೆ ಯಶಸ್ಸು

    ಮಂಗಳೂರು: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದಿದ್ದರೆ ಮೊದಲು ‘ಕಂಫರ್ಟ್ ಜೋನ್’ನಿಂದ ಹೊರಬರಬೇಕು. ಮನೆ, ಕುಟುಂಬದಿಂದ ದೂರವಿದ್ದು, ಸ್ವ ಅನುಭವದಿಂದ ಕಲಿತರೆ ಉತ್ತುಂಗಕ್ಕೇರಲು ಸಾಧ್ಯ ಎಂದು ಜ್ಯೋತಿ ಲಾಬೋರೇಟರೀಸ್ ಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ್ ಕಾಮತ್ ಹೇಳಿದರು.
    ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿ, ವಿಕೆಎಸ್‌ಎಸ್‌ಎಫ್ ಅಲುಮ್ನಿ ಅಸೋಸಿಯೇಶನ್ ಮತ್ತು ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಆಯೋಜಿಸಲಾಗುವ ಪ್ರೇರಣಾ 2020 ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ಕ್ಷಮತಾ ಯುಗೆಟ್ ಇನ್ ಯುವ ಸಮಾವೇಶದಲ್ಲಿ ಉಪನ್ಯಾಸ ನೀಡಿದರು.

    ತರಗತಿಯಲ್ಲಿ ಮೊದಲ ಸ್ಥಾನ ಬಂದವರು ಜೀವನದಲ್ಲೂ ಯಶಸ್ಸು ಗಳಿಸುವುದು ಕಡಿಮೆ. ಆದರೆ ಕ್ಲಾಸ್‌ನಲ್ಲಿ ಕೊನೇ ರ‌್ಯಾಂಕ್ ಬಂದು, ಜೀವನದಲ್ಲಿ ಮೊದಲ ಸ್ಥಾನ ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ, ಆದರೆ ಜ್ಞಾನ ಅದಕ್ಕಿಂತಲೂ ಮುಖ್ಯ. ಪದವಿ ಮುಗಿದ ತಕ್ಷಣ ಸೂಕ್ತವೆನಿಸುವ ಕೆಲಸಕ್ಕೆ ಸೇರಿ, ಜತೆಯಾಗಿ ಉನ್ನತ ಶಿಕ್ಷಣವನ್ನೂ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ದೇಹದಲ್ಲಿ ಉಸಿರು ಎಷ್ಟು ಅಗತ್ಯವೋ, ಜೀವನದಲ್ಲಿ ಹಣವೋ ಅಷ್ಟೇ ಅವಶ್ಯ. ಹಣವಿಲ್ಲದವರು ಮಾತ್ರ ಹಣದ ಕುರಿತು ‘ಯಾಕೆ ಬೇಕು?’ ಎನ್ನುವ ಭಾವನೆ ಹೊಂದಿದ್ದಾರೆ. ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಸಂಪಾದಿಸಬೇಕು. ಆದರೆ ನಾವು ಗಳಿಸುವ ಹಣದಿಂದ ನಾಲ್ಕು ಜನರಿಗೆ ಸಹಾಯವೂ ಆಗಬೇಕು ಎಂದು ಎಚ್ಚರಿಸಿದರು.
    ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಉದ್ಯಮಿಯಾಗಿ ಹಲವರಿಗೆ ಕೆಲಸ ನೀಡಬೇಕು ಅಂದುಕೊಳ್ಳುವವರೂ, ಮೊದಲು ಉದ್ಯೋಗಿಯಾಗಿ ಕೆಲಸ ಮಾಡಬೇಕು. ಇದರಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯ. ಸಾಧನೆ ಮಾಡಿದಾಗ ಹೊಗಳುವವರನ್ನು, ವಿಫಲರಾದಾಗ ದೂಷಿಸುವವರನ್ನು ಸಮಾನ ದೂರವಿಡಬೇಕು. ಉನ್ನತ ಶಿಕ್ಷಣ ಪಡೆದರೆ ಜೀವನದಲ್ಲಿ ನೆಲೆಯೂರಬಹುದು ಎನ್ನುವುದು ಸುಳ್ಳು ಎಂದರು.

    ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ ಉದ್ಘಾಟಿಸಿದರು. ಕಾರ್ಯದರ್ಶಿಗಳಾದ ನಂದಗೋಪಾಲ ಶೆಣೈ, ಪ್ರಭಾಕರ ಪೈ, ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಖಜಾಂಚಿ ಬಿ.ಆರ್.ಭಟ್, ಕ್ಷಮತಾ ನಿರ್ದೇಶಕರಾದ ಎಂ.ಎನ್.ಪೈ., ಪ್ರದೀಪ್ ಶೆಣೈ, ಕೇರಳ ಕೊಂಕಣಿ ಅಕಾಡೆಮಿ ಅಧ್ಯಕ್ಷ ರಮೇಶ್ ಪೈ, ವಿಶ್ವಕೊಂಕಣಿ ವಿದ್ಯಾರ್ಥಿ ಸ್ಕಾಲರ್‌ಶಿಪ್ ಫಂಡ್ ಅಧ್ಯಕ್ಷ ರಾಮದಾಸ್ ಕಾಮತ್ ಯು, ಕಾರ್ಯದರ್ಶಿ ಪ್ರದೀಪ್ ಜಿ.ಪೈ ಮೊದಲಾದವರಿದ್ದರು. ವಿಶ್ವಕೊಂಕಣಿ ಕೇಂದ್ರ ನಿರ್ದೇಶಕ ಗುರುದತ್ ಬಂಟ್ವಾಳಕರ್ ಸ್ವಾಗತಿಸಿದರು.

    ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಕ್ಕೆ ತೆಗೆಯುವುದು ಕ್ಷಮತಾ ಉದ್ದೇಶ. ಕಳೆದ ಹಲವು ವರ್ಷಗಳಿಂದ ಇದನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಸರಿಯಾದ ಮಾರ್ಗದರ್ಶನ ನೀಡಿ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿಸುವುದು ಕ್ಷಮತಾ ಗುರಿ.
    ಉಲ್ಲಾಸ್ ಕಾಮತ್ , ಜಂಟಿ ಆಡಳಿತ ನಿರ್ದೇಶಕ, ಜ್ಯೋತಿ ಲಾಬೋರೇಟರೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts