More

    ಕೃಷ್ಣಾಪುರ ಮಠ ಅಕ್ಕಿ ಮುಹೂರ್ತ ಸಂಪನ್ನ

    ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿ ಎರಡನೇ ಕಾರ್ಯಕ್ರಮ ಅಕ್ಕಿ ಮುಹೂರ್ತ ಬುಧವಾರ ಬೆಳಗ್ಗೆ 8.45ಕ್ಕೆ ರಥಬೀದಿಯ ಮಠದಲ್ಲಿ ನೆರವೇರಿತು.
    ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಠದ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಿದ ಬಳಿಕ ಚಿನ್ನದ ಪಲ್ಲಕಿಯಲ್ಲಿ ಅಕ್ಕಿ ಮುಡಿಯನ್ನಿಟ್ಟು ಮೆರವಣಿಗೆ ಮೂಲಕ ತೆರಳಿ ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನ, ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು.
    ಕೃಷ್ಣ ಮಠದಲ್ಲಿ ಕೃಷ್ಣ, ಮುಖ್ಯಪ್ರಾಣ ಗರುಡ ಸುಬ್ರಹ್ಮಣ್ಯ ವಾದಿರಾಜ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ಮರಳಿ ಕೃಷ್ಣಾಪುರ ಮಠಕ್ಕೆ ಆಗಮಿಸಿದ ಅಕ್ಕಿ ಮುಡಿಗಳನ್ನು ದೇವರ ಎದುರಿನಲ್ಲಿಟ್ಟು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹಾಗೂ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರಿಗೆ ಮಾಲಿಕಾ ಮಂಗಳಾರತಿ ಸಲ್ಲಿಸಲಾಯಿತು. ವಿದ್ವಾಂಸರು ಹಾಗೂ ಅಷ್ಟಮಠಗಳ ದಿವಾನರಿಗೆ ದಾನ ದಕ್ಷಿಣೆ ಪ್ರದಾನ ಮಾಡಲಾಯಿತು. ಕೆ.ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೇತೃತ್ವ ವಹಿಸಿದ್ದರು.
    ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಮತ್ತು ಕಮಲಾದೇವಿಪ್ರಸಾದ ಆಸ್ರಣ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ, ಆನೆಗುಡ್ಡೆ ಕುಂಭಾಶಿ ಕ್ಷೇತ್ರದ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಶ್ರೀರಮಣ ಉಪಾಧ್ಯಾಯ, ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ, ವೈ.ಎನ್. ರಾಮಚಂದ್ರ ರಾವ್ ಮೊದಲಾದವರಿದ್ದರು.

    ಇನ್ನು 11 ತಿಂಗಳು ಬಾಕಿ: ಅಷ್ಟಮಠಗಳ ನಡುವೆ ಎರಡು ವರ್ಷಗಳಿಗೊಮ್ಮೆ ಬದಲಾಗುವ ಉಡುಪಿ ಶ್ರೀಕೃಷ್ಣ ಮಠದ ಪೂಜಾಧಿಕಾರವೇ ಪರ್ಯಾಯ. ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರ ನಾಲ್ಕನೇ ಪರ್ಯಾಯ 2022ರ ಜನವರಿ 18ರಂದು ಆರಂಭವಾಗಲಿದೆ. ಇದರ ಪೂರ್ವಭಾವಿಯಾಗಿ ಬಾಳೆ ಮತ್ತು ಅಕ್ಕಿ ಮುಹೂರ್ತಗಳು ನಡೆದಿವೆ. ಇನ್ನು ಕಟ್ಟಿಗೆ ಮತ್ತು ಧಾನ್ಯ ಮುಹೂರ್ತಗಳು ನಡೆಯಬೇಕಿದೆ.

    ಅನ್ನಬ್ರಹ್ಮನ ಕ್ಷೇತ್ರ ಉಡುಪಿಯಲ್ಲಿ ಅಕ್ಕಿ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ನಿರಂತರ ಅನ್ನದಾನಕ್ಕೆ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶ. ಕೃಷ್ಣನಿಗೆ ಇದು ಬಹಳ ಪ್ರಿಯವಾದದ್ದು. ಹಿಂದಿನವರು ದುಡ್ಡಿನ ಕ್ರೋಡೀಕರಣಕ್ಕಿಂತ ನೈಸರ್ಗಿಕ ಪದಾರ್ಥ ಅಕ್ಕಿ ಸಂಗ್ರಹಕ್ಕೆ ಆದ್ಯತೆ ನೀಡಿದ್ದರು. ಕರೊನಾದಿಂದ ಇತ್ತೀಚೆಗೆ ಮಠದಲ್ಲಿ ಅನ್ನದಾನಕ್ಕೂ ಚ್ಯುತಿ ಉಂಟಾಗಿತ್ತು. ನಮ್ಮ ಪರ್ಯಾಯ ಅವಧಿಯಲ್ಲಿ ಅನ್ನಸಂತರ್ಪಣೆಗೆ ಯಾವುದೇ ತೊಂದರೆ ಇಲ್ಲದೆ ಸಾಂಗವಾಗಿ ನಡೆಯಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ.
    | ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts