More

    ನ.17ರಿಂದ 20ರವರೆಗೆ ಜಿಕೆವಿಕೆಯಲ್ಲಿ ಕೃಷಿ ಮೇಳ

    ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ಈ ತಿಂಗಳ 17ರಿಂದ 20ರವರೆಗೆ ನಾಲ್ಕು ದಿನ ಕೃಷಿ ಮೇಳವನ್ನು ಸಂಘಟಿಸಿದೆ. ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ರೈತರಿಗೆ ಬರ ನಿರೋಧಕ ತಳಿಗಳು ಹಾಗೂ ಸಿರಿಧಾನ್ಯಗಳ ಮಹತ್ವ ಕುರಿತು ಭರಪೂರ ಮಾಹಿತಿ ನೀಡಲು ಸಿದ್ಧತೆ ನಡೆದಿದೆ.

    ಮೇಳದಲ್ಲಿ ರೈತರಿಗೆ ಕ್ಷೇತ್ರ ಸಂದರ್ಶನ, ಕೃಷಿ ವಿಜ್ಞಾನಿ-ತಜ್ಞರೊಂದಿಗೆ ಸಮಾಲೋಚನೆ, ಮಾರ್ಗದರ್ಶನ, ತಾಕುಗಳಲ್ಲಿ ಪ್ರಾತ್ಯಕ್ಷಿಕೆ, ಹೊಸ ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ವಿವಿಗಳ ಎಲ್ಲ ವಿಭಾಗಗಳಲ್ಲಿ ನಡೆದಿರುವ ಸಂಶೋಧನೆ, ಆವಿಷ್ಕಾರದ ಮಾಹಿತಿಯನ್ನು ವಸ್ತುಪ್ರದರ್ಶನದಲ್ಲಿ ತಿಳಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ, ಈ ಬಾರಿಯ ಕೃಷಿ ಮೇಳವನ್ನು ‘ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು’ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ. ಬರ ನಿರ್ವಹಣೆ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಲಾಗುವುದು. ಕೃಷಿ ಹಾಗೂ ಅದರ ಪೂರಕ ಕಸುಬುಗಳಲ್ಲಿ ತೊಡಗಿಸಿಕೊಳ್ಳುವ ಸಂಬಂಧ ಸಮಗ್ರ ಮಾಹಿತಿಯನ್ನು ರೈತರಿಗೆ ನೀಡಲು ವಿವಿ ವಿಜ್ಞಾನಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸೇರಿ 500ಕ್ಕೂ ಹೆಚ್ಚು ಮಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

    ಮೇಳದ ನಾಲ್ಕೂ ದಿನ ಸಾಧಕ ರೈತರಿಗೆ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಮೊದಲ ದಿನ ರಾಜ್ಯ ಮಟ್ಟದ ಒಟ್ಟು ಐದು ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ನಂತರ ದಿನಗಳಲ್ಲಿ ವಿವಿ ವ್ಯಾಪ್ತಿಗೆ ಸೇರಿರುವ ಜಿಲ್ಲೆಗಳಿಗೆ ಸೇರಿದ ಪ್ರಗತಿಪರ ರೈತರಿಗೆ ಜಿಲ್ಲಾ ಮಟ್ಟ ಹಾಗೂ ತಾಲುಕು ಮಟ್ಟದಲ್ಲಿ ಕೃಷಿಕ ಹಾಗೂ ಮಹಿಳಾ ಕೃಷಿಕರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    10 ಲಕ್ಷ ಮಂದಿ ಭೇಟಿ ನಿರೀಕ್ಷೆ:

    ಕೃಷಿ ಮೇಳಕ್ಕೆ ಈ ಬಾರಿ 10 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವವರಿದ್ದಾರೆ. ಮಳಿಗೆಗಳಲ್ಲಿ 12 ಕೋಟಿ ರೂ. ವಹಿವಾಟು ಆಗುವ ನಿರೀಕ್ಷೆ ಇದೆ. ಮಳಿಗೆಗಳಲ್ಲಿ ರೈತರಿಗೆ ಮೊದಲ ಆದ್ಯತೆ ಸಿಗುವಂತೆ ನಿಗಾ ವಹಿಸಲಾಗುತ್ತದೆ. ಭಾರಿ ಮಳೆಯಾಗುವ ಸಾಧ್ಯತೆ ಇಲ್ಲವೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮೇಳವು ಸುಸೂತ್ರವಾಗಿ ನಡೆಯಲಿದೆ. ಇದಕ್ಕಾಗಿ ಇಡೀ ವಿವಿಯ ಪ್ರಾಧ್ಯಾಪಕರು, ವಿಜ್ಞಾನಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಟೊಂಕ ಕಟ್ಟಿದೆ ಎಂದು ಕುಲಪತಿ ವಿವರಿಸಿದರು.

    ಸಿಎಂರಿಂದ ಉದ್ಘಾಟನೆ:

    ಕೃಷಿ ಮೇಳವನ್ನು ಶುಕ್ರವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಸಂಸದ ಡಿ.ವಿ.ಸದಾನಂದಗೌಡ, ಕೃಷಿ ಇಲಾಖೆಯ ಎಸಿಎಸ್ ಎಲ್.ಕೆ.ಅತೀಕ್ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕೊನೆಯ ದಿನದ ಸಮಾರೋಪದಲ್ಲಿ ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ.

    ಆ್ಯಪ್ ಬಿಡುಗಡೆ:

    ಮೇಳಕ್ಕೆ ಬರುವ ಮಾರ್ಗ, ಮಳಿಗೆಗಳ ವಿವರ, ಖರೀದಿ ಸ್ಥಳಗಳು, ಪಾರ್ಕಿಂಗ್ ಇತ್ಯಾದಿ ಮಾಹಿತಿಯನ್ನು ನೀಡಲು ವಿವಿ ವತಿಯಿಂದಲೇ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಆಗಲಿದ್ದು, ಆ ಬಳಿಕ ಆ್ಯಪ್‌ಅನ್ನು ಬಳಸಿಕೊಳ್ಳಬಹುದು. ಇಂಟರ್‌ನೆಟ್ ಸಂಪರ್ಕ ಇಲ್ಲದೆಯೂ ಆಫ್​​​ಲೈನ್‌ನಲ್ಲೇ ಬಳಸುವಂತೆ ಆ್ಯಪ್ ಅಭಿವೃದ್ಧಿಪಡಿಸಿರುವುದು ವಿಶೇಷ.

    ಮೇಳದ ವಿಶೇಷ ಆಕರ್ಷಣೆ:

    * ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ
    * ಹನಿ ಹಾಗೂ ತುಂತುರು ನೀರಾವರಿ ಪದ್ಧತಿ
    * ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿ
    * ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
    * ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ
    * ಕೃಷಿಯಲ್ಲಿ ನೂತನ ತಂತ್ರಜ್ಞಾನಗಲ ಮಾಹಿತಿ
    * ರೈತರ ಆವಿಷ್ಕಾರ ಹಾಗೂ ಕೃಷಿ ನವೋದ್ಯಮ
    * ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ, ಸಂಸ್ಕರಣೆ, ಮೌಲ್ಯವರ್ಧನೆ
    * ಮಣ್ಣು ಪರೀಕ್ಷೆಗೆ ಅನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts