More

    ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟ: ಡಿ.ಕೆ.ಶಿವಕುಮಾರ್

    ಉಡುಪಿ: ಕೇಂದ್ರ ಹಾಗೂ ರಾಜ್ಯಕ್ಕೆ ರಾಜಕೀಯ ಕೊಂಡಿಯಂತಿದ್ದ ಆಸ್ಕರ್ ಫರ್ನಾಂಡಿಸ್ ನಿಧನ ರಾಷ್ಟ್ರ ರಾಜಕಾರಣಕ್ಕೆ ಬಹುದೊಡ್ಡ ನಷ್ಟ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
    ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೆ ಅಧಿಕಾರ ನಿಭಾಯಿಸಿದ ಆಸ್ಕರ್ ಮೇಲೆ ಯಾರಿಗೂ ಆರೋಪ ಹೊರಿಸಲು ಸಾಧ್ಯವಾಗಿಲ್ಲ. ಅಷ್ಟರ ಮಟ್ಟಿಗೆ ಪಾರದರ್ಶಕವಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಕಾರ್ಮಿಕ ಸಚಿವರಾಗಿದ್ದಾಗ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳು ಕಳೆದ 60 ವರ್ಷಗಳಲ್ಲಿ ಯಾರೂ ಯೋಚನೆ ಮಾಡಿರಲಿಕ್ಕಿಲ್ಲ. ಇದು ದೇಶದ ಸಾಮಾಜಿಕ ಬದಲಾವಣೆಗೆ ಬಹುದೊಡ್ಡ ಸಾಕ್ಷಿಯಾಗಿ ಉಳಿದುಕೊಂಡಿದೆ. ಇದಲ್ಲದೆ ಕಾರ್ಮಿಕರಿಗೆ ಕೊಟ್ಟಂಥ ಶಕ್ತಿ, ಮೂಲಸೌಲಭ್ಯ, ಕಾರ್ಮಿಕರ ನಿಧಿ ವಿಚಾರದಲ್ಲಿ ತಂದ ಬದಲಾವಣೆ ಯಾರಿಂದಲೂ ತರಲು ಸಾಧ್ಯವಿರಲಿಲ್ಲ ಎಂದರು.
    ರಾಜಕೀಯ ಜೀವನದಲ್ಲಿ ನನಗೂ ಆಸ್ಕರ್ ಫರ್ನಾಂಡಿಸ್ ಅವರಿಗೂ ಸುಮಾರು 42 ವರ್ಷಗಳ ನಂಟಿದೆ. ಅವರು ವಿದ್ಯಾರ್ಥಿ ಘಟಕದ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿದ್ದ ಕಾಲದಿಂದಲೂ ಅವರ ಜತೆಗೆ ಒಡನಾಟ ಹೊಂದಿದ್ದೆ. ಅವರ ಭೇಟಿಗಾಗಿ ಆಗಾಗ ಉಡುಪಿಗೆ ಬರುತ್ತಿದ್ದೆ ಎಂದು ಗದ್ಗದಿತರಾದರು.

    ಅಂತಿಮ ದರ್ಶನದಲ್ಲಿ ಗಣ್ಯರು ಭಾಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮುಖಂಡರಾದ ಐವನ್ ಡಿಸೋಜ, ಪಿ.ವಿ.ಮೋಹನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ರಮಾನಾಥ ರೈ, ಯು.ಟಿ.ಖಾದರ್, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಪ್ರಮುಖರಾದ ಪ್ರತಾಪ್‌ಚಂದ್ರ ಶೆಟ್ಟಿ, ಸಂದೀಪ್, ಗೋಪಾಲ ಪೂಜಾರಿ, ಯು.ಆರ್.ಸಭಾಪತಿ. ಜೆ.ಆರ್.ಲೋಬೊ, ಮೊದೀನ್ ಬಾವ, ಡಾ.ಅಂಜುಮನ್ ರಾಜಶೇಖರ್, ಜಿ.ಎ.ಬಾವ, ಸುದೀಪ್ ಕುಮಾರ್ ಮರೋಳಿ, ಮಿಥುನ್ ರೈ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದರು.

    ಉಡುಪಿಯಲ್ಲಿ ಗಣ್ಯರಿಂದ ನಮನ: ಉಡುಪಿ: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ಮಂಗಳವಾರ ಮಂಗಳೂರಿನಿಂದ ಉಡುಪಿಗೆ ಆಗಮಿಸಿತು.
    ದೆಹಲಿ ಮಟ್ಟದ ಹೈಕಮಾಂಡ್ ನಾಯಕನಾಗಿ ಬೆಳೆದರೂ, ತವರು ಜಿಲ್ಲೆ ಉಡುಪಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆಸ್ಕರ್ ಪಾರ್ಥಿವ ಶರೀರಕ್ಕೆ ಪ್ರಮುಖ ಸ್ಥಾನಗಳಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಮಾರ್ಗ ಮಧ್ಯೆ ಆಸ್ಕರ್ ಅಭಿಮಾನಿಗಳು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ನಗರದ ಕೆಎಂ ಮಾರ್ಗದಲ್ಲಿರುವ ಉಡುಪಿ ಧರ್ಮಪ್ರಾಂತ್ಯ ಶೋಕಮಾತಾ ಇಗರ್ಜಿ, ಮದರ್ ಆಫ್ ಸಾರೋಸ್ ಚರ್ಚ್‌ಗೆ ಆಗಮಿಸಿದ ಪಾರ್ಥಿವ ಶರೀರಕ್ಕೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಂತಿಮ ನಮನ ಸಲ್ಲಿಸಿದರು. ಆಸ್ಕರ್ ಕುಟುಂಬ ನೆಚ್ಚಿಕೊಂಡಿದ್ದ ಶೋಕಮಾತಾ ಇಗರ್ಜಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಧಾರ್ಮಿಕ ವಿಧಿ ನಡೆಸಿಕೊಟ್ಟರು. ವಿವಿಧ ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಂತಿಮ ಪ್ರಾರ್ಥನೆ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಜಲಪ್ರೋಕ್ಷಣೆ ಮಾಡಿ ಸದ್ಗತಿಗಾಗಿ ಪ್ರಾರ್ಥಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗುರುಗಳು, ಸದಸ್ಯರು ಭಾಗಿಯಾಗಿದ್ದರು. ವಿಶೇಷ ಬಲಿಪೂಜೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಾಪಗಳೆಲ್ಲವೂ ಕಳೆದು ಸದ್ಗತಿ ಪ್ರಾಪ್ತವಾಗಲಿ ಎನ್ನುವುದು ಅಂತಿಮ ಪೂಜೆ ಉದ್ದೇಶ ಎಂದು ಬಿಷಪ್ ತಿಳಿಸಿದರು.

    ಬ್ರಹ್ಮಗಿರಿ ಮೂಲ ಮನೆಗೆ: ಶೋಕಮಾತಾ ಚರ್ಚ್‌ನಲ್ಲಿ ಪೂಜೆ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಆಸ್ಕರ್ ಫರ್ನಾಂಡಿಸ್ ಅವರ ನೆಚ್ಚಿನ ಮೂಲ ಮನೆಗೆ ಕರೆದೊಯ್ಯಲಾಯಿತು. ಅಜ್ಜರಕಾಡು ಸಮೀಪದ ಬ್ರಹ್ಮಗಿರಿಯಲ್ಲಿರುವ ಮನೆಯಲ್ಲಿ ಆಸ್ಕರ್ ಹುಟ್ಟಿ ಬೆಳೆದಿದ್ದರು. ಐದು ಬಾರಿ ಲೋಕಸಭಾ ಸದಸ್ಯ, ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾದ ಬಳಿಕವೂ, ಈ ಮನೆಯ ಮೂಲಕವೇ ಉಡುಪಿಯ ಸಂಪರ್ಕ ಹೊಂದಿದ್ದರು. ಇದೇ ಮನೆಯ ಸುತ್ತಮುತ್ತಲಿನ ಗದ್ದೆಯಲ್ಲಿ ಕೃಷಿ ಮಾಡಿ ಪ್ರಶಸ್ತಿ ಪಡೆದಿದ್ದರು. ಮನೆಯನ್ನು ಪಕ್ಷಕ್ಕೆ ಬಿಟ್ಟು ಕೊಟ್ಟು ಜಿಲ್ಲಾ ಕಚೇರಿ ಮಾಡಿದ್ದರು. ಇದೇ ಕಾರಣಕ್ಕೆ ಅಂತಿಮ ಪ್ರಯಾಣದ ವೇಳೆ ಪಾರ್ಥಿವ ಶರೀರವನ್ನು ಮನೆಯಲ್ಲಿ ಇರಿಸಿ ಪ್ರಾರ್ಥಿಸಲಾಯಿತು.

    ಕುಟುಂಬದ ಸದಸ್ಯರು, ಅಭಿಮಾನಿಗಳು ಭಾಗಿ: ಬ್ರಹ್ಮಗಿರಿಯ ಮನೆಯಲ್ಲಿ ಕುಟುಂಬದ ಸದಸ್ಯರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಇಲ್ಲಿಂದ ನೇರವಾಗಿ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ಕೊಂಡೊಯ್ಯಲಾಯಿತು. ಎರಡು ಗಂಟೆ ಕಾಲ ಗಣ್ಯರು ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಲ್ಲೆಯ ನಾಗರಿಕರು ಬಂದು ಅಂತಿಮ ದರ್ಶನ ಪಡೆದರು.

    ಸರ್ವಧರ್ಮ ಪ್ರಾರ್ಥನೆ: ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನ ವೇಳೆ ಸದ್ಗತಿಗಾಗಿ ಹಿಂದು, ಕ್ರೈಸ್ತ, ಮುಸಲ್ಮಾನ ಪದ್ಧತಿಯಂತೆ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಚೇರಿಗೆ ಭೇಟಿ ನೀಡಿ ಪಾರ್ಥಿವ ಶರೀರದ ಮುಂದೆ ದುಃಖಿಸುತ್ತಿದ್ದ ಆಸ್ಕರ್ ಪತ್ನಿ ಹಾಗೂ ಮಕ್ಕಳನ್ನು ಸಂತೈಸಿದರು.

    ಆಸ್ಕರ್ ಅಪೂರ್ವ ಚೇತನ: ಆಸ್ಕರ್ ಫರ್ನಾಂಡಿಸ್ ಕೇವಲ ರಾಜಕೀಯ ನಾಯಕನಾಗಿರಲಿಲ್ಲ, ಓರ್ವ ಸಮಾಜ ಸುಧಾರಕರಾಗಿದ್ದರು. ಸರ್ವ ಧರ್ಮೀಯರನ್ನು ಜತೆಯಾಗಿ ಕೊಂಡೊಯ್ಯುತ್ತಿದ್ದ ಅಪೂರ್ವ ಚೇತನ. 9 ಬಾರಿ ಜನಪ್ರತಿನಿಧಿ ಆಗುವ ಮೂಲಕ ಉಡುಪಿ ಜಿಲ್ಲೆಗೆ ಅವರು ಕೊಟ್ಟ ಕೊಡುಗೆಗಳು ಯಾವತ್ತೂ ಸ್ಮರಣೀಯ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

    ನಾಳೆ ರಾಹುಲ್ ಗಾಂಧಿ ಆಗಮನ: ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಸೆ.15ರಂದು ಸಾರ್ವಜನಿಕರಿಗೆ ಅಂತಿಮ ದರ್ಶನ, ಬಲಿಪೂಜೆ ಬಳಿಕ ಸಾಯಂಕಾಲ ಬೆಂಗಳೂರಿಗೆ ಪಾರ್ಥಿವ ಶರೀರ ಏರ್‌ಲಿಫ್ಟ್ ಆಗಲಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಬೆಂಗಳೂರಿನಲ್ಲಿ ಸೆ.16ರಂದು ಆಸ್ಕರ್ ಫರ್ನಾಂಡಿಸ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನ ಬಳಿಕ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts