More

    ಕೂಲಿಕಾರರಿಗೆ ಆಸರೆಯಾಯ್ತು ಖಾತ್ರಿ ಯೋಜನೆ

    ಜಗಳೂರು: ಒಂದೆಡೆ ಬರ, ಮತ್ತೊಂದೆಡೆ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ತಾಲೂಕಿನ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ಗ್ರಾಮೀಣ ಪ್ರದೇಶದ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಜೀವನ ನಡೆಸಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಖಾತ್ರಿ ಯೋಜನೆ ದುಡಿವ ಕೈಗಳಿಗೆ ಕೈತುಂಬ ಕೆಲಸ ಒದಗಿಸಿದೆ.

    ಯೋಜನೆಯ ಕೂಲಿ ಹಣ ಕಡಿಮೆ ಎಂದು ಮೂಗು ಮುರಿಯುತ್ತಿದ್ದ ಕೂಲಿ ಕಾರ್ಮಿಕರು ಕುಟುಂಬ ಸಮೇತ ಗುಳೆ ಹೋಗುತ್ತಿದ್ದರು. ಕರೊನಾ ಪರಿಣಾಮ ಗುಳೆ ಹೋಗಿದ್ದವರೆಲ್ಲ ತಮ್ಮೂರಿಗೆ ಮರಳಿದ್ದಾರೆ. ಕಳೆದ ತಿಂಗಳಿಂದ ಗ್ರಾಪಂಗಳಿಗೆ ಕೆಲಸ ಕೇಳಿಕೊಂಡು ಬರುತ್ತಿರುವ ಅರ್ಜಿಗಳು ಹೆಚ್ಚುತ್ತಿವೆ.

    ತಾಲೂಕಿನ 22 ಗ್ರಾಪಂಗಳು ಏರಿ ಅಭಿವೃದ್ಧಿ, ದನದ ಕೊಟ್ಟಿಗೆ, ಕೃಷಿ ಹೊಂಡ ಮತ್ತಿತರ 68 ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿವೆ. 1336 ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲಾಗಿದೆ. ಪಿಡಿಒಗಳು, ತಾಂತ್ರಿಕ ಸಹಾಯಕರು ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಾಮಗಾರಿ ಸ್ಥಳದಲ್ಲಿ ನೆರಳು, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

    ಪುರುಷ ಹಾಗೂ ಮಹಿಳಾ ಕಾರ್ಮಿಕರಿಗೆ ಸಮಾನವಾಗಿ ಕೂಲಿ ನೀಡಲಾಗುತ್ತಿದೆ. 249 ರೂ. ಇದ್ದ ಕೂಲಿ ಮೊತ್ತವನ್ನು ಸರ್ಕಾರ 275 ರೂ.ಗೆ ಹೆಚ್ಚಿಸಿದೆ. ನಿಯಮದಂತೆ ಕುಟಂಬವೊಂದಕ್ಕೆ 100 ದಿನ ಉದ್ಯೋಗ ಒದಗಿಸಲಾಗುತ್ತಿದೆ. ಬರಪೀಡಿತ ತಾಲೂಕು ಎಂಬ ಕಾರಣಕ್ಕೆ 50 ದಿನ ಹೆಚ್ಚಿಗೆ ಕೆಲಸ ನೀಡಿರುವುದರಿಂದ ಯೋಜನೆಗೆ ಹೆಚ್ಚಿನ ಮಹತ್ವ ಬಂದಿದೆ.

    ಉದ್ಯೋಗ ಖಾತ್ರಿ ಯೋಜನೆಯಿಂದ ಅನುಕೂಲವಾಗಿದೆ. ಸರ್ಕಾರದ ಯೋಜನೆಯ ಕೆಲಸದಲ್ಲಿ ತೃಪ್ತಿಯಿದೆ. ಕೂಲಿ ಹಣ ಪಾವತಿ ವಿಳಂಬವಾದರೂ ಒಂದಲ್ಲ ಒಂದು ದಿನ ಪಾವತಿಯಾಗುವ ನಂಬಿಕೆ ಇದೆ ಎನ್ನುತ್ತಾರೆ ಕೂಲಿಕಾರ್ಮಿಕ ಮಹಿಳೆ ನಿಬಗೂರಿನ ಗೌರಮ್ಮ.

    ಗ್ರಾಮೀಣ ಭಾಗದ ದುಡಿವ ಕೈಗಳಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 64 ಬದು ನಿರ್ಮಾಣದ ಕಾಮಗಾರಿಗಳು, 14 ದನದ ಕೊಟ್ಟಿಗೆ, 12 ಕೆರೆ ಹೂಳೆತ್ತುವುದು, ತಾಲೂಕಿನ ವಿವಿಧ ವಸತಿ ಯೋಜನೆಗಳಡಿ 266 ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲಸ ಬೇಕಾದಲ್ಲಿ ಗ್ರಾಪಂಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎನ್ನುತ್ತಾರೆ ತಾಪಂ ಇಒ ಮಲ್ಲನಾಯ್ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts