More

    ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಸದೃಢ

    ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸದೃಢವಾಗಿರುವುದರಿಂದ ಈ ಕಾರಣಕ್ಕೆ ಈ ಕ್ಷೇತ್ರಕ್ಕೆ ಹೆಚ್ಚಿನ ಆಕಾಂಕ್ಷಿಗಳು ಬರುತ್ತಿದ್ದು, ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಶಾಸಕ ನೇಮಿರಾಜ್ ನಾಯ್ಕ ಹೇಳಿದರು.

    ಮತ್ತಿಹಳ್ಳೇರ್ ಹೋಟಲ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿರುವುದು ನಮ್ಮ ಕ್ಷೇತ್ರದ ಜನರ ಪುಣ್ಯ. ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೀರಾವರಿ ಹೋರಾಟದ ಫಲವಾಗಿ ಅನೇಕ ಕೆರೆಗಳು ತುಂಬಿವೆ. ರೈತರ ಬಾಳಲ್ಲಿ ಬೆಳಕು ಮೂಡಿದೆ. ಶ್ರೀಗಳು ನಿಜಕ್ಕೂ ಆಧುನಿಕ ಭಗೀರಥ ಮಹರ್ಷಿ. ಇಂತಹ ಪೂಜ್ಯರ ಕಾರ್ಯಕ್ರಮದಲ್ಲಿ ಶಾಸಕ ಭೀಮಾನಾಯ್ಕ ಕಪ್ಪುಬಾವುಟ ಪ್ರದರ್ಶನ ಮಾಡುತ್ತೇನೆ ಎಂದಿರುವುದು ಅವರ ಮಾನಸಿಕ ಕ್ಷೋಭೆಯನ್ನು ಎತ್ತಿತೋರುತ್ತದೆ ಎಂದರು.

    ಮಾತನಾಡುವ ಮೊದಲು ಹತ್ತಾರು ಬಾರಿ ಯೋಚಿಸಬೇಕು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಮಾತೇ ಇದೆ. ಜವಾಬ್ದಾರಿ ಇರುವ ಶಾಸಕರಾಗಿ ಹೀಗೆ ಮಾತನಾಡಬಾರದಿತ್ತು. ಈಗ ಕ್ಷಮೆ ಕೇಳಿದರೆ ಆಡಿದ ಮಾತು ವಾಪಸ್ ಬರುವುದೇ ಎಂದು ಪ್ರಶ್ನಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ನನಗೆ ಗೌರವವಿದೆ. ಅವರು ದೊಡ್ಡ ನಾಯಕರು ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವರ ಕಾರ್ಯಕ್ರಮಕ್ಕೆ ಸೀರೆ ಕೊಡ್ತೀನಿ, ಉಡಿ ತುಂಬಿಸುತ್ತೇನೆ ಎಂದು ಸುಳ್ಳು ಹೇಳಿ ಕರೆದು, ಮಹಿಳೆಯರನ್ನು ಬರಿಗೈಯಲ್ಲಿ ಕಳುಹಿಸಿದ್ದು ಶ್ರೇಯಸ್ಸಲ್ಲ. ಮಹಿಳೆಯರ ನಿಟ್ಟುಸಿರುವ ಶಾಸಕ ಭೀಮಾನಾಯ್ಕ ಅವರಿಗೆ ತಟ್ಟದೆ ಬಿಡುವುದಿಲ್ಲ ಎಂದರು.

    ನಾನು ಕುರುಬರಿಂದಲೇ ಗೆದ್ದೆ ಎಂದು ಮಾತುಮಾತಿಗೂ ಹೇಳುವ ಇವರು, ಕೇಶವನರಾಯನ ಬಂಡಿ, ಚೀಲಗೋಡು ಗ್ರಾಮದಲ್ಲಿ ಕುರುಬರಿಗೆ ಮಾಡಿರುವ ದ್ರೋಹವನ್ನು ಅಲ್ಲಿನ ಕುರುಬರು ಮರೆಯುವುದಿಲ್ಲ. ಶಾಸಕ ಭೀಮಾನಾಯ್ಕಗೆ ಕಪ್ಪುಬಾವುಟ ಪ್ರದರ್ಶಿಸಲು ಆ ಜನ ಕಾಯ್ತ ಇದ್ದಾರೆ ಎಂದರು.

    ಬಿಜೆಪಿಯ ಟೌನ್ ಬ್ಲಾಕ್ ಅಧ್ಯಕ್ಷ ನಂದಿ ಬಿ.ಆರ್.ವಿಕ್ರಂ, ಮಾಜಿ ಬ್ಲಾಕ್ ಅಧ್ಯಕ್ಷ ವೀರೇಶಗೌಡ, ಪಪಂ ಮಾಜಿ ಅಧ್ಯಕ್ಷ ಕಾಮಶೆಟ್ಟಿ ಕೊಟ್ರೇಶ, ಪಪಂ ಹಾಲಿ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ, ಪಪಂ ಮಾಜಿ ಸದಸ್ಯ ಡಿಸ್ ಮಂಜುನಾಥ್, ಪಪಂ ಮಾಜಿ ಉಪಾಧ್ಯಕ್ಷ ಹಾಗೂ ವರ್ತಕ ಗುರುಬಸವರಾಜ್, ಕೆ.ಅಯ್ಯನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕನ್ನನಾಯ್ಕನಕಟ್ಟೆ ವಿಜಯಕುಮಾರ್, ಪಪಂ ಮಾಜಿ ಸದಸ್ಯ ಸೋಡಾ ಗುರುಬಸವರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts