More

    ಗ್ರಾಪಂ ದೂರದೃಷ್ಟಿ ಯೋಜನೆ ಇಡೀ ದೇಶದಲ್ಲಿ ಮೊದಲು ಎಂದ ಶಾಸಕ ಭೀಮಾನಾಯ್ಕ

    ಕೊಟ್ಟೂರು: ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಗೆ ಎಲ್ಲರೂ ಕೈಜೋಡಿಸಿ ಪಾರದರ್ಶಕವಾಗಿ ಅನುಷ್ಠಾನಗೊಳಿಸಿದರೆ ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕ ಭೀಮಾನಾಯ್ಕ ಹೇಳಿದರು.

    ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಜಿಪಂ ಮತ್ತು ತಾಪಂ ಸಹಯೋಗದಲ್ಲಿ ಗ್ರಾಪಂ ದೂರದೃಷ್ಟಿ ಯೋಜನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧ್ದಿಗೆ ಸರ್ಕಾರ ಇಡೀ ರಾಷ್ಟ್ರದಲ್ಲೇ ರೂಪಿಸಿರುವ ಉತ್ತಮ ಯೋಜನೆ ಇದಾಗಿದೆ ಎಂದರು.

    ವಿಜಯನಗರ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮೊದಲ ಬಾರಿಗೆ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಉತ್ತಮ ಅಭಿವೃದ್ಧ್ದಿ ಕೆಲಸ ಮಾಡಲು ಸಾಧ್ಯ. ಗ್ರಾಮಗಳ ಅಭಿವೃದ್ಧ್ದಿಗೆ ಐದು ವರ್ಷಕ್ಕೆ ದೂರದೃಷ್ಟಿ ಇಟ್ಟುಕೊಂಡು ಕ್ರಿಯಾಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದರೆ ನಿಮ್ಮ ಗ್ರಾಮವನ್ನು ನಿಮ್ಮ ಕ್ಷೇತ್ರವನ್ನು ಇಡೀ ದೇಶವೇ ಮೆಚ್ಚಿ ತಿರುಗಿನೋಡುವಂತೆ ಮಾಡಲು ಸಾಧ್ಯ ಎಂದು ಸಭೆಗೆ ಹಾಜರಿದ್ದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಕಿವಿ ಮಾತು ಹೇಳಿದರು.

    ಬೆಂಗಳೂರು ಗ್ರಾಮಾಂತರ ಪ್ರದೇಶದ ಸಂಸದ ಡಿ.ಕೆ. ಸುರೇಶ, ವ್ಯರ್ಥವಾಗಿ ಹರಿಯುತ್ತಿದ್ದ ಹಳ್ಳ, ತೊರೆಯ ನೀರಿಗೆ ಉದ್ಯೋಗ ಖಾತ್ರಿಯಲ್ಲಿ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಆ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಅಂತರ್ಜಲ ಹೆಚ್ಚಳವಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ ಅಲ್ಲದೇ ಈ ಮೂಲಕ ಇಡೀ ದೇಶದಲ್ಲಿ ಮಾದರಿ ಲೋಕಸಭಾ ಕ್ಷೇತ್ರವಾಗಿದೆ ಎಂದರು.

    ಆರ್‌ಡಿಪಿಆರ್ ಇಲಾಖೆ ನಿರ್ದೇಶಕ ಮತ್ತು ಸಲಹೆಗಾರ ಪ್ರಾಣೇಶ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಯೋಜನೆ ಇಡೀ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಇದು ಜನರಿಂದ ಜನರಿಗೋಸ್ಕರ ರೂಪಗೊಂಡ ದೂರದೃಷ್ಟಿಯ ಯೋಜನೆ ಎಂದರು.

    ಅತ್ಯಂತ ಕ್ರಿಯಾತ್ಮಕವಾಗಿ, ವಸ್ತುನಿಷ್ಠವಾಗಿ, ದೂರದೃಷ್ಟಿಯಿಂದ ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಐದು ವರ್ಷಕ್ಕೂ ಮೊದಲು ಏನೇನು ಅಭಿವೃದ್ಧಿ ಮಾಡಲು ಸಾಧ್ಯವೆಂಬ ಬಗ್ಗೆ ನೀಲನಕ್ಷೆ ರೂಪಿಸಿ, ಮೊದಲ ವರ್ಷದಲ್ಲಿ ಪ್ರಥಮ ಆಧ್ಯತೆಯಾಗಿ ಏನೇನು ಅಭಿವೃದ್ಧ್ದಿ ಕಾರ್ಯ ಮಾಡಬಹುದು. ಎರಡನೇ ವರ್ಷ ಹೀಗೆ ಐದು ವರ್ಷದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.

    ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಹೊಸಪೇಟೆ ತಾಪಂ ಇಒ ವಿಜಯಕುಮಾರ್, ಕೊಟ್ಟೂರು ತಾಪಂ ಇಒ ಬೆಣ್ಣಿ ವಿಜಯಕುಮಾರ್ ಇದ್ದರು. ಗುರುದೇವ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತಾಪಂ ಎಡಿ ವಿಜಯಕುಮಾರ್ ಸ್ವಾಗತಿಸಿದರು. ಮೈದೂರು ಶಶಿಧರ ನಿರೂಪಿಸಿದರು. ತಾಲೂಕಿನ 14 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts