More

    ಕೋಟಿಲಿಂಗದಲ್ಲಿ ಹರಾಜು ಪ್ರಕ್ರಿಯೆ, 40 ಲಕ್ಷ ರೂ. ಶುಲ್ಕ ರೂಪದಲ್ಲಿ ಗುತ್ತಿಗೆ

    ಬೇತಮಂಗಲ: ವರ್ಷದಿಂದ ಕೋಟಿಲಿಂಗ ದೇವಾಲಯ ಆಸ್ತಿ ಮತ್ತು ಅಧಿಕಾರಕ್ಕಾಗಿ ನಡೆಯುತ್ತಿರುವ ಅಂತರ್ಯುದ್ಧದ ಗುಟ್ಟು ಭಾನುವಾರ ನಡೆದ ಶುಲ್ಕಗಳ ಹರಾಜು ಸಂದರ್ಭದಲ್ಲಿ ಬಹಿರಂಗವಾಯಿತು.

    ಸ್ಥಾಪಕ ಧರ್ಮಾಧಿಕಾರಿ ಸಾಂಬಶಿವಮೂರ್ತಿ ನಿಧನದ ನಂತರ ಪುತ್ರ ಡಾ.ಶಿವಪ್ರಸಾದ್ ಮತ್ತು ಕಾರ್ಯದರ್ಶಿ ಕೆ.ವಿ.ಕುಮಾರಿ ಮಧ್ಯೆ ಗುದ್ದಾಟ ನಡೆಯುತ್ತಿದ್ದು, ಆರು ತಿಂಗಳು ಡಾ.ಶಿವಪ್ರಸಾದ್ ದರ್ಬಾರ್ ನಡೆಸಿದ್ದರು. ಇದೀಗ ಕಳೆದೆರಡು ತಿಂಗಳಿಂದ ಹೈಕೋರ್ಟ್ ಆದೇಶದಂತೆ ಆಡಳಿತಾಧಿಕಾರಿಯಾಗಿರುವ ಕುಮಾರಿಗೆ ಪ್ರವೇಶ ಶುಲ್ಕ, ಲಿಂಗ ಪ್ರತಿಷ್ಠಾಪನೆ ಮತ್ತು ಹುಂಡಿಗಳಿಗೆ ಸಂಬಂಧಪಟ್ಟಂತೆ ಅಧಿಕಾರ ಹಸ್ತಾಂತರಿಸಲಾಗಿತ್ತು. ದೇವಾಲಯಕ್ಕೆ ಬರುವ ವಾಹನಗಳ ಪಾರ್ಕಿಂಗ್, ಪ್ರಸಾದ, ಫೋಟೋಗ್ರಫಿ, ಕಲ್ಯಾಣ ಮಂಟಪಗಳ ಡೆಕೋರೇಷನ್, ಚಪ್ಪಲಿ ಸ್ಟಾಂಡ್ ಮತ್ತು ಶೌಚಗೃಹ ಗುತ್ತಿಗೆ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಭಾನುವಾರ 2020ನೇ ವರ್ಷದ ಗುತ್ತಿಗೆಗೆ ಹರಾಜು ಪ್ರಕ್ರಿಯೆ ನಡೆಸಲಾಯಿತು.

    ವಾಹನ ನಿಲುಗಡೆಗೆ 10 ಲಕ್ಷ, ಪ್ರಸಾದ (ಲಡ್ಡು) 13 ಲಕ್ಷ, ಚಪ್ಪಲಿ ಬಿಡಲು 3.20 ಲಕ್ಷ, ಶೌಚಗೃಹ 5.55 ಲಕ್ಷ ರೂ. ಸೇರಿ ಒಟ್ಟು 40 ಲಕ್ಷ ರೂ. ಶುಲ್ಕ ರೂಪದಲ್ಲಿ ಗುತ್ತಿಗೆಗೆ ನೀಡಲಾಯಿತು.

    ಇನ್ನುಳಿದಂತೆ ಪ್ರವೇಶ ಶುಲ್ಕ, ಅಂಗಡಿ ಮಳಿಗೆಗಳು, ಕಲ್ಯಾಣ ಮಂಟಪಗಳು, ಲಿಂಗ ಪ್ರತಿಷ್ಠಾಪನೆ ಮತ್ತು ವಂತಿಗೆ, ದಾನಗಳ ರೂಪದಲ್ಲಿ ಸಿಗುವ ದೇಣಿಗೆ ಮತ್ತು ಆವರಣದೆಲ್ಲೆಡೆ ಇಟ್ಟಿರುವ ಹುಂಡಿಗೆಗಳಲ್ಲಿನ ಕಾಣಿಕೆ ಹಣ ಸೇರಿ ವಾರ್ಷಿಕ ಸುಮಾರು 2 ಕೋಟಿ ರೂ. ಆದಾಯ ಬರುವ ಲೆಕ್ಕಾಚಾರ ಹಾಕಲಾಗಿದೆ.

    ಹೈಕೋರ್ಟ್ ಸೂಚನೆಯಂತೆ ಪಾರದರ್ಶಕವಾಗಿ ಆಡಳಿತ ನಡೆಸಲಾಗುತ್ತಿದೆ. ದೇವಾಲಯಕ್ಕೆ ಸಂಬಂಧಪಟ್ಟಂತೆ ಪ್ರತಿ ರೂಪಾಯಿಗೂ ದೇವಾಲಯ ಖಾತೆಗೆ ಜಮಾ ಮಾಡಲಾಗುತ್ತಿದೆ. ನ್ಯಾಯಾಲಯ ಕೇಳಿದಾಗ ದಾಖಲೆ ಸಮೇತ ಖರ್ಚು-ವೆಚ್ಚ ಮತ್ತು ಉಳಿತಾಯ ಹಣ ಸೇರಿ ಎಲ್ಲವನ್ನೂ ಹಾಜರುಪಡಿಸುತ್ತೇವೆ.
    ಕೆ.ವಿ.ಕುಮಾರಿ, ಆಡಳಿತಾಧಿಕಾರಿ, ಕೋಟಿಲಿಂಗ ದೇವಾಲಯ

    ದೇವಾಲಯಗಳ ಶುಲ್ಕ ವಸೂಲಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಯಾವುದೇ ಅಧಿಕಾರ ನೀಡದಿದ್ದರೂ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ವಾಹನ ನಿಲುಗಡೆಯಾಗುವ ಸ್ಥಳ ನನ್ನ ಸ್ವಂತ ಸ್ಥಳವಾಗಿದೆ. ಇದನ್ನೆಲ್ಲ್ಲ ನ್ಯಾಯಾಲಯಕ್ಕೆ ತಿಳಿಸಿ ಕುಮಾರಿ ಅವರ ಕಾನೂನು ವಿರೋಧಿ ನೀತಿಗೆ ತಡೆಯಾಜ್ಞೆ ತರುತ್ತೇವೆ.
    ಡಾ.ಶಿವಪ್ರಸಾದ್, ಸ್ವಾಮೀಜಿ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts