More

    ಗುಮ್ಮಟನಗರಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ

    ವಿಜಯಪುರ : ಕನ್ನಡವು ಸಂಪದ್ಭರಿತ ಭಾಷೆಯಾಗಿದೆ. ಅಂತೆಯೇ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅಷ್ಟೆ ಅಲ್ಲದೆ ಸಮೃದ್ಧ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಸಂದಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

    ಇಲ್ಲಿನ ವಿಶ್ವವಿಖ್ಯಾತ ಗೋಳಗುಮ್ಮಟದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸಾಹಿತ್ಯ ಸಮೃದ್ಧಿಯ ಚೆಲುವ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಪ್ರಾಚೀನತೆಯನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ನಾವು ಗುರುತಿಸುತ್ತೇವೆ. ದಾಸ ಪರಂಪರೆ, ಭಕ್ತಿ ಪರಂಪರೆ ಮತ್ತು ವಚನ ಸಾಹಿತ್ಯವು ಕನ್ನಡವನ್ನು ಶ್ರೀಮಂತಗೊಳಿಸಿದೆ. ದಾಸಶ್ರೇಷ್ಠರು, 12ನೇ ಶತಮಾನದ ಶರಣರು, ಸಾಹಿತ್ಯ ಕ್ರಾಂತಿಯನ್ನು ಮಾಡುವ ಮೂಲಕ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇಂತಹ ಶ್ರೀಮಂತ ಸಂಸ್ಕೃತಿಯುಳ್ಳ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಾಡಿನ ಸಾಹಿತಿಗಳು, ಕವಿಗಳು ತಮ್ಮ ಬರಹ, ಸಾಹಿತ್ಯದ ಮೂಲಕ ಕವನಗಳ ಮೂಲಕ ನಾಡಿನ ವರ್ಣನೆಯನ್ನ ಬಹು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿ ಪರಂಪರೆಯು ಸಾಹಿತ್ಯದ ಮೂಲಕ ಹೆಚ್ಚಳವಾಗಿದೆ ಎಂದರು.

    ಕನ್ನಡ ನಾಡು ಪವಿತ್ರ ಭಾವವಿದ್ದಂತೆ, ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಮೊದಲಾದ್ಯತೆ ಕನ್ನಡವೇ ಆಗಿದೆ. ವಿಶೇಷವಾಗಿ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ಕೊಡುತ್ತಿದೆ. ಕನ್ನಡವನ್ನು ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನದ ಮೂಲಕ ಕನ್ನಡ ನಾಡಿನ ಸಂಸ್ಕೃತಿ ಭಾಷೆ ಸಿರಿಯನ್ನು ಹೆಚ್ಚಿಸಿ ಅದು ಪಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಈ ದಿಸೆಯಲ್ಲಿ ಹಮ್ಮಿಕೊಂಡು ಆಚರಿಸಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಎಲ್ಲ ಜನರ ಮನೆ- ಮನಗಳಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣದ ಕಳೆಗಟ್ಟುತ್ತದೆ ಎಂದು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ.ಆನಂದ ಕುಮಾರ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜೆ. ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ವಿವಿಧ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಗೋಳಗುಮ್ಮಟದಲ್ಲಿ ಕನ್ನಡಾಭಿಮಾನ ಪ್ರತಿಧ್ವನಿ
    ಕನ್ನಡ ನಾಡು, ನುಡಿ, ಶ್ರೀಮಂತಿಕೆ ಸಾರುವ ಗೀತೆಗಳು ವಿಶ್ವವಿಖ್ಯಾತ ಗೋಳಗುಮ್ಮಟದ ಆವರಣಲ್ಲಿ ಮೊಳಗಿ ಕನ್ನಡಾಭಿಮಾನ ಅನಾವರಣಗೊಳಿಸಿದವು.
    ‘ಜಯ ಭಾರತ ಜನನೀಯ ತನುಜಾತೆ’ ನಾಡಗೀತೆ, ಡಿ.ಎಸ್. ಕರ್ಕಿ ವಿರಚಿತ ‘ಹಚ್ಚೇವು ಕನ್ನಡದ ದೀಪ’, ಹುಯಿಲಗೋಳ ನಾರಾಯಣರಾವ್ ವಿರಚಿತ ’ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮವ..’, ಚೆನ್ನವೀರ ಕಣವಿ ವಿರಚಿತ ‘ವಿಶ್ವ ವಿನೂತನ ವಿದ್ಯಾ ಚೇತನ’, ಹಂಸಲೇಖ ವಿರಚಿತ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳು ನೆರೆದಿದ್ದವರ ಮನಸೂರೆಗೊಳಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts