More

    ಮುರುಕಲು ಮನೆಗಳ ವಿದ್ಯಾವಂತರ ಕಾಲನಿ ಚಿಟ್ಟೆಬೆಟ್ಟು

    ಶ್ರೀಪತಿ ಹೆಗಡೆ ಹಕ್ಲಾಡಿ ಕೋಟತಟ್ಟು
    ‘ಕೊರಗ ಸಮುದಾಯದವರಿಗೆ ಅವರು ವಾಸವಿರುವ ಜಾಗದ ಯಾವುದೇ ಮಾಹಿತಿ ಕೇಳದೆ ಹಕ್ಕುಪತ್ರ ಕೊಡಬೇಕು.. ಮೂಲ ನಿವಾಸಿಗಳು ಏನು ಕೇಳಿದರೂ ದಾಖಲೆ ಕೇಳದೆ ಕೊಡಬೇಕು. ಅವರ ಸ್ಥಿತಿಗತಿ, ಜೀವನ, ಆರೋಗ್ಯ, ಶಿಕ್ಷಣ ಬಗ್ಗೆ ಸಮೀಕ್ಷೆ ನಡೆಸಿ ದಾಖಲೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಸರಾಗ ಕೆಲಸ ಮಾಡಲು ಸಿಬ್ಬಂದಿ ಕೊರತೆ ಒಂದು ತಿಂಗಳಲ್ಲಿ ಭರ್ತಿ ಮಾಡಲಾಗುತ್ತದೆ.’ ಇದು ಮೂರೂರು ಕೊರಗ ಕಾಲನಿ ವಾಸ್ತವ್ಯಕ್ಕೆ ಬಂದಿದ್ದ ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದ ಮಾತು. ಆದರೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಭರ್ತಿಯೂ ಆಗಿಲ್ಲ.. ಕೊರಗರ ಬದುಕಿನ ಚಿತ್ರಣ ದಾಖಲೀಕರಣವೂ ಪೂರ್ಣಗೊಂಡಿಲ್ಲ. ಪರಿಣಾಮ ಮೂಲನಿವಾಸಿಗಳು ಸೋರುವ, ತಲೆ ಮೇಲೆ ಬೀಳುವ ಸ್ಥಿತಿ ಮನೆಗಳಲ್ಲಿ ವಾಸಿಸಬೇಕಿದೆ. ನಿವೇಶನಕ್ಕೆ ದಾಖಲೆಯೇ ಇಲ್ಲದೆ ಸರ್ಕಾರದ ವಿವಿಧ ಸೌಲಭ್ಯ ಸಿಗುತ್ತಿಲ್ಲ.

    ಉಡುಪಿ ತಾಲೂಕು ಕೋಟತಟ್ಟು ಗ್ರಾಮ ಚಿಟ್ಟೆಬೆಟ್ಟು ಕಾಲನಿಯ ಸ್ಥಿತಿ ಮೂಲನಿವಾಸಿಗಳು ಎಂತಹ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎನ್ನುವುದಕ್ಕೆ ಇದು ಜ್ವಲಂತ ಸಾಕ್ಷಿ. ಮಳೆ ನೀರು ಒಳಗೆ ಬಾರದಂತೆ ಪ್ಲಾಸ್ಟಿಕ್ ಹೊದಿಸಿ, ಮಳೆಗಾಲ ಕಳೆದರೆ, ಮುಂದಿನ ಮಳೆಗಾಲ ಬರುವುದರೊಳಗೆ ಮನೆ ಆಗದಿದ್ದರೆ, ಹಳೇ ಮನೆ ಬೀಳುವ ಸ್ಥಿತಿಯಲ್ಲಿದೆ. ಇಷ್ಟೆಲ್ಲಾ ಅವ್ಯವಸ್ಥೆಯ ನಡುವೆ ಕಾಲನಿಯ ಸೃಜನಾತ್ಮಕ ಸಂಗತಿ ಏನು ಎಂದರೆ ಎಲ್ಲರೂ ವಿದ್ಯಾವಂತರು.. ಕಡಿಮೆ ಅಂದರೂ ಎಸ್ಸೆಸ್ಸೆಲ್ಸ್ಸಿ ಓದಿಕೊಂಡಿದ್ದಾರೆ. ಎಂಎಸ್‌ಡಬ್ಲ್ಯೂ ಆದವರು ಮೂವರಿದ್ದಾರೆ. ಎಂಎಸ್ಸಿ ಮಾಡಿದವರಿದ್ದಾರೆ. ಕಾಲನಿಯಲ್ಲಿ ವಾಸ್ತವ್ಯ ಮಾಡುತ್ತಿರುವವರು ಐದನೇ ತಲೆಮಾರಿನವರು! ಹಕ್ಕುಪತ್ರವಿಲ್ಲದೆ ಸರ್ಕಾರ ಸೌಲಭ್ಯ ಮರೀಚಿಕೆ. ಮನೆ ಕನಸಿನಗಂಟು.

    ವಿಶೇಷವಾಗಿ ಪರಿಗಣಿಸಿ: ಕೊರಗರಿಗೆ ಮನೆ ಕಟ್ಟಲು ಭೂಮಿ ಖರೀದಿಸಿ ಕೊಡುವ ಯೋಜನೆ ಇಲ್ಲ. ಜಾಗವಿದ್ದರೆ ಮನೆ ಕಟ್ಟಲು ಅನುದಾನ ನೀಡಲು ಸಾಧ್ಯ. ಕಾಲನಿಯ ಭೂಮಿ ಖಾಸಗಿ ವ್ಯಕ್ತಿಗೆ ಸೇರಿದೆ. ಅವರು ಜಾಗ ಕೊಡಲು ಸಿದ್ಧವಿದ್ದು, ಸೂಕ್ತ ಬೆಲೆ ಕೇಳುತ್ತಿದ್ದಾರೆ. ಕಾಲನಿಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಾಗ ಖರೀದಿಸಿ ಕೊಡಬೇಕಿದೆ.

    ಸಚಿವರಿಗೆ ಮನವಿ: ಚಿಟ್ಟೆಬೆಟ್ಟು ಹಿಂದೆ ಥರಹೇವಾರಿ ಚಿಟ್ಟೆಗಳ ಆಶ್ರಯ ತಾಣ. ಇಂದಿಗೂ ಮರಮಟ್ಟುಗಳಿಂದ ಪರಿಸರ ಆಕರ್ಷಿಸುತ್ತಿದೆ. ಬುಟ್ಟಿ ನೇಯುವುದು, ಕೂಲ ಕೆಲಸ ಕಾಲನಿ ಜನರ ಮುಖ್ಯ ಕಸಬು. ನಾಲ್ಕನೇ ತಲೆಮಾರಿನ ಹಿರಿಯರು ತಮ್ಮ ಕುಲ ಕಸುಬು ಮುಂದುವರಿಸಿದ್ದಾರೆ. ಕಾಲನಿ ಖಾಸಗಿ ವ್ಯಕ್ತಿ ಜಾಗವಾಗಿದ್ದು, ಇವರಿಗೆ ನಿವೇಶನ ದಾಖಲೆ ಇಲ್ಲ. ಹಕ್ಕುಪತ್ರ ಕೊಡಿಸುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಪೂಜಾರಿ, ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಚಿಟ್ಟೆಬೆಟ್ಟು ಕಾಲನಿ ವಿಶೇಷವಾಗಿ ಪರಿಗಣಿಸಿ, ಖಾಸಗಿ ಜಾಗ ವಿಕ್ರಯಿಸಿ, ಹಕ್ಕುಪತ್ರ ನೀಡುವಂತೆ ವಿನಂತಿಸಿದ್ದಾರೆ. ಅಂದು ವಿರೋಧ ಪಕ್ಷದ ನಾಯಕರಾಗಿದ್ದು ಶ್ರೀನಿವಾಸ ಪೂಜಾರಿ ನಮ್ಮ ನೆರವಿಗೆ ಬಂದಿದ್ದು, ಇಂದು ಅವರೇ ಸಚಿವರಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಕಾರ‌್ಯದರ್ಶಿಗೆ ಕಾಲನಿಯ ವಿಶೇಷ ಯೋಜನೆ ಎಂದು ಪರಿಗಣಿಸಿ ಜಾಗ ವಿಕ್ರಯಿಸಿ ಹಕ್ಕುಪತ್ರ ನೀಡುವಂತೆ ಸೂಚಿಸಿದರೆ ಎಲ್ಲವೂ ಸಲೀಸಾಗಲಿದೆ ಎಂಬ ನಂಬಿಕೆ ಕಾಲನಿ ವಾಸಿಗಳಿಗೆ ಇದೆ.

    ವಿದ್ಯಾವಂತರು, ಕ್ರೀಡಾಪಟುಗಳು: ಕಾಲನಿಯ ಎಂಟ್ರಿಯಲ್ಲಿ ಕಾಲನಿ ಯುವಕರ ಸಾಧನೆ ಮೆಡಲ್‌ಗಳು ಸ್ವಾಗತಿಸುತ್ತವೆ. ದೊಡ್ಡ ಟ್ರೋಫಿ, ಚಿನ್ನ, ಬೆಳ್ಳಿ ಪದಕಗಳ ರಾಶಿಯೇ ಮನೆ ಗೋಡೆ ಅಲಂಕರಿಸಿವೆ. ಕಾಲನಿ ವಿದ್ಯಾವಂತ ಕಾಲನಿಯಷ್ಟೇ ಅಲ್ಲ. ಸ್ಪೋರ್ಟ್ಸ್‌ಮನ್‌ಗಳ ಕಾಲನಿಯೂ ಹೌದು. ಸುದರ್ಶನ್ ಎಂಎಸ್‌ಡ್ಲ್ಯೂ ಮಾಡಿದ್ದು, ವಾಲಿಬಾಲ್, ಕ್ರಿಕೆಟ್, ಅಥ್ಲೆಟಿಕ್‌ನಲ್ಲಿ ಸುದರ್ಶನ್ 25ಕ್ಕೂ ಅಧಿಕ ಚಿನ್ನಬೆಳ್ಳಿ ಪದಕ ಗೆದ್ದಿದ್ದಾರೆ. ಕಾಲನಿಯವರದ್ದೇ ವಾಲಿಬಾಲ್, ಕ್ರಿಕೆಟ್ ಟೀಮ್ ಇದೆ. ಕಾಲನಿಯಲ್ಲಿ ಪೂಜಿಸುವ ದೈವಸ್ಥಾನ ಕೂಡ ಪ್ರಾಕೃತಿಕವಾಗಿದ್ದು, ಕೃತಕತೆ ಇಲ್ಲ.

    ಕೋಟತಟ್ಟು ಗ್ರಾಮ ಚಿಟ್ಟೆಬೆಟ್ಟಿಲ್ಲಿ ಪ್ರಸಕ್ತ ಐದನೇ ತಲೆಮಾರಿನವರು ವಾಸಮಾಡುತ್ತಿದ್ದು, ನಿವೇಶನವಿಲ್ಲದೆ ಸರಿಯಾದ ಮನೆ, ಮೂಲ ಸೌಲಭ್ಯದಿಂದ ವಂಚಿತರಾಗಿದ್ದೇವೆ. ನಮಗೆ ತುರ್ತು ಬೇಕಾಗಿರುವುದ ಮನೆ. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಜಾಗ ವಿಕ್ರಯಿಸಿ, ಭೂಮಿ ಹಕ್ಕು ನೀಡುವ ಮೂಲಕ ಕಾಲನಿ ಸಮಸ್ಯೆ ಪರಿಹಾರ ಮಾಡಬೇಕು.
    -ಸುದರ್ಶನ್, ಚಿಟ್ಟೆಬಬೆಟ್ಟು ಕಾಲನಿ ನಿವಾಸಿ

    ಕಾಲನಿಯಲ್ಲಿ ಬಾವಿಯಿದ್ದರೂ ನೀರು ಕುಡಿಯಲು ಯೋಗ್ಯವಲ್ಲವೆಂದು ವೈದ್ಯರು ಸರ್ಟಿಫಿಕೇಟ್ ನೀಡಿದ್ದಾರೆ. ಕಾಲನಿ ಕೆಳಗಿರುವ ಬಾವಿಯಲ್ಲಿ ಯಾವಾಗಲೂ ನೀರಿದ್ದು, ಅದನ್ನ ಮುಚ್ಚುವ ಪ್ರಯತ್ನ ನಡೆಯುತ್ತಿದ್ದು, ಆ ಬಾವಿ ಕಾಲನಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ರಕ್ಷಣೆ ಮಾಡಬೇಕಿದೆ.
    -ಶೃಂಗೇರಿ, ಕಾಲಿನ ಹಿರಿಯ ಮಹಿಳೆ

    ಕೊರಗ ಕಾಲನಿ ಹೆಸರಲ್ಲಿ ಸಿಮೆಂಟ್ ರಸ್ತೆ ಮಾಡಿದ್ದು, ಅದರ ಪ್ರಯೋಜನೆ ಕಾಲನಿಗೆ ಸಿಗಿದೆ, ಕಾಲನಿ ಸಂಪರ್ಕ ವ್ಯವಸ್ಥೆ ಮಾಡಿಕೊಡಬೇಕು. ನಮ್ಮ ಕಷ್ಟ ಹೇಳಿಕೊಂಡರೆ ನಿಮ್ಮಹತ್ತಿರ ಏನ್ ದಾಖಲೆ ಇದೆ ತನ್ನಿ ಅಂತಾರೆ. ಮಳೆಗಾಲದೊಳಗೆ ಮನೆ ಆಗದಿದ್ದರೆ, ಮುಂದಿನ ಮಳೆಗಾಲದಲ್ಲಿ ಮನೆಯಂತೂ ಖಂಡಿತಾ ಕುಸಿದು ಬೀಳಲಿದ್ದು, ಕಾಲನಿ ವಾಸಿಗಳು ಅತಂತ್ರವಾಗಲಿದ್ದಾರೆ.
    -ಬೇಬಿ, ಚಿಟ್ಟೆಬೆಟ್ಟು ಕಾಲನಿ ನಿವಾಸಿ

    ಕೋಟತಟ್ಟು ಗ್ರಾಪಂ ಚಿಟ್ಟೆಬೆಟ್ಟು ಕಾಲನಿಗೆ ಈಗಾಗಲೇ ಡಿಎಸ್‌ಪಿಎ ರಸ್ತೆ, ಕಂಪೌಂಡ್ ವಾಲ್.. ಎಂದು ತುಂಬಾ ಹಣ ಖರ್ಚು ಮಾಡಲಾಗಿದ್ದು, ಮೂಲಭೂತವಾಗಿ ಕೊರಗರ ಮನೆಗಳ ಸರಿಮಾಡುವ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾಲನಿ ನಿವಾಸಿಗಳಿಗೆ ಜಾಗದ ಹಕ್ಕು ನೀಡುವ ಜೊತೆಗೆ ಅವರ ಮೂಲಸೌಲಭ್ಯಕ್ಕೆ ಒತ್ತು ನೀಡಬೇಕು.
    -ಗಣೇಶ್ ಕೊರಗ,  ಅಧ್ಯಕ್ಷ, ಕೊರಗ ಶ್ರೇಯೋಭಿವೃದ್ಧಿ ಸಂಘ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts