More

    ಕೊರಟಗೆರೆ ಗದ್ದುಗೆಗೆ ಕೈ-ತೆನೆ ಗುದ್ದಾಟ

    ಕೊರಟಗೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ, ತೆನೆ ಪಾಳಯದಲ್ಲಿ ಕಸರತ್ತು ನಡೆಯುತ್ತಿದೆ.

    ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 15 ಸದಸ್ಯ ಬಲವಿರುವ ಪಪಂ ಚುಕ್ಕಾಣಿ ಹಿಡಿಯಲು 9 ಮ್ಯಾಜಿಕ್ ಸಂಖ್ಯೆಯಾಗಿದ್ದು, ಜೆಡಿಎಸ್ 8 , ಕಾಂಗ್ರೆಸ್ 5, ಬಿಜೆಪಿ 1, ಪಕ್ಷೇತರ 1 ಸದಸ್ಯರಿದ್ದಾರೆ.

    ಪಪಂಗೆ ನಾಲ್ವರು ಮಹಿಳಾ ಸದಸ್ಯರು ಆಯ್ಕೆಯಾಗಿದ್ದು, ಇವರಲ್ಲಿ ಮೂವರು ಜೆಡಿಎಸ್‌ನವರಾಗಿದ್ದು, ಒಬ್ಬರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. 8 ಸದಸ್ಯರನ್ನು ಹೊಂದಿರುವ ಜೆಡಿಎಸ್ ಪಕ್ಷೇತರ ಒಬ್ಬ ಸದಸ್ಯನನ್ನು ಸೆಳೆದುಕೊಂದರೆ, ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಬಹುದು ಎನ್ನುವ ಲೆಕ್ಕಾಚಾರವಿದೆ. ಆದರೆ 5 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಎಂಎಲ್‌ಎ ಮತ ಸೇರಿ 6 ಆಗಲಿದೆ, ಪಕ್ಷೇತರ ಮತ್ತು ಬಿಜೆಪಿ ಸದಸ್ಯನನ್ನು ಸೆಳೆದು, ಸಂಸದರ ಮತವನ್ನೂ ಸೇರಿಸಿಕೊಂಡು ಚುಕ್ಕಾಣಿ ಹಿಡಿಯುವ ಲೆಕ್ಕಚಾರದಲ್ಲಿದೆ.

    ಸಂಸದರ ನಡೆಯತ್ತ ಚಿತ್ತ !: ಪಪಂನಲ್ಲಿ ಒಬ್ಬ ಸದಸ್ಯನನ್ನು ಹೊಂದಿರುವ ಬಿಜೆಪಿ, ಸಂಸದ ಜಿ.ಎಸ್.ಬಸವರಾಜು ಮತ ಸೇರಿ ಎರಡು ಮತಗಳು ಪಡೆಯಲಿದ್ದು, ಜೆಡಿಎಸ್‌ನೊಂದಿಗೆ ಮೈತ್ರಿ ವಾಡಿಕೊಂಡು ಅಧಿಕಾರದಿಂದ ಕಾಂಗ್ರೆಸ್ ದೂರವಿಡಬಹುದು, ಇಲ್ಲವೇ ಕೈ-ಕಮಲ ಒಂದಾಗಿ ತೆನೆ ದೂರವಿರಿಸಬಹುದು, ಆದ್ದರಿಂದ ಎಲ್ಲರ ಚಿತ್ತ ಸಂಸದರ ನಡೆಯತ್ತ ನೆಟ್ಟಿದೆ.

    ಪರಮೇಶ್ವರ್ ಕೈ ಮೇಲಾಗುತ್ತಾ?: ಈ ಬಾರಿ ಶತಾಯ ಗತಾಯ ಪಪಂ ಅಧಿಕಾರ ಕೈ ವಶ ಮಾಡಿಕೊಳ್ಳಲೇಬೇಕೆಂದು ವಾಜಿ ಡಿಸಿಎಂ, ಹಾಲಿ ಶಾಸಕ ಪರಮೇಶ್ವರ್ ಪಣತೊಟ್ಟಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು ತಿಳಿಸಿದ್ದಾರೆ, ಬಹುಮತಕ್ಕೆ ಅವಶ್ಯವಿರುವ ಸದಸ್ಯರನ್ನು ಸೆಳೆದುಕೊಳ್ಳುವ ತಂತ್ರಕ್ಕೆ ಕೈ ಹಾಕಲಾಗಿದ್ದು, ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ.

    ಯಾರಿಗೂ ಇಲ್ಲ ಬಹುಮತ : ಪಪಂ ಅತಂತ್ರವಾಗಿದ್ದು, ಮತದಾರರು ಯಾರೊಬ್ಬರಿಗೂ ಸ್ಪಷ್ಟ ಬಹುಮತ ನೀಡಿಲ್ಲ, ಜೆಡಿಎಸ್‌ಗೆ ಅವಶ್ಯವಿರುವ 1 ಸ್ಥಾನವನ್ನು ಪಕ್ಷೇತರ ಸದಸ್ಯ ಅಥವಾ ಬಿಜೆಪಿ ಸದಸ್ಯ ತುಂಬಿದರೆ ಆ ಪಕ್ಷ ಮ್ಯಾಜಿಕ್ ನಂಬರ್ 9 ತಲುಪಲಿದೆ. ಇಲ್ಲವೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಜೆಡಿಎಸ್ ಸದಸ್ಯರನ್ನು ಸೆಳೆದರೆ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟಲಿದೆ. ಒಟ್ಟಿನಲ್ಲಿ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರೇ ಕಿಂಗ್‌ಮೇಕರ್ಸ್‌ ಆಗಿದ್ದಾರೆ.

    ನಾನು ಪಕ್ಷೇತರನಾಗಿ ಗೆದ್ದಿದ್ದೇನೆ. ಅಧಿಕಾರದ ದಾಹವಿಲ್ಲ, ನನ್ನ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಯಾರಿಂದ ನನ್ನ ವಾರ್ಡ್ ಮತ್ತು ಪಟ್ಟಣಕ್ಕೆ ಒಳ್ಳೆಯದಾಗುತ್ತದೆಯೋ ಅವರಿಗೆ ನೇರವಾಗಿ ಅಥವಾ ಬಾಹ್ಯ ಬೆಂಬಲ ಸೂಚಿಸುತ್ತೇನೆ.
    ಕೆ.ಎನ್ ನಟರಾಜು ಪಪಂ ಪಕ್ಷೇತರ ಸದಸ್ಯ,ಕೊರಟಗೆರೆ

    ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಇದೆ. ನಮ್ಮ ಪಕ್ಷದಿಂದ 3 ಮಹಿಳಾ ಸದಸ್ಯರು ಆಯ್ಕೆಯಾಗಿದ್ದು, ಪಕ್ಷದ ವರಿಷ್ಠರ ಜತೆ ಚರ್ಚಿಸಿ ಸೂಕ್ತವಾದವರನ್ನು ಆಯ್ಕೆ ಮಾಡಲಿದ್ದೇವೆ.
    ಸಿದ್ದಮಲ್ಲಪ್ಪ ಜೆಡಿಎಸ್ ತಾಲೂಕು ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts