More

    9 ಕುಟುಂಬಗಳಿಗೂ ಮನೆ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
    ಉಜಿರೆ ಗ್ರಾಮದ ಬಡಕೊಟ್ಟು ಪಾಣ್ಮೇಲು ಎಂಬಲ್ಲಿ ಕೊರಗ ಸಮುದಾಯದ 9 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ತಲಾ 3.5ಲಕ್ಷ ರೂ.ಮಂಜೂರು ಮಾಡಲು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಮುಂದಾಗಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ.
    ಈ ಹಿಂದೆ ಕೊರಗ ಕುಟುಂಬಗಳ ನಿವೇಶನಕ್ಕೆ ಎರಡು ಲಕ್ಷ ರೂ.ಗಳನ್ನು ನಿಗದಿಗೊಳಿಸಿದ್ದರೂ, ಅದನ್ನೀಗ 3.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
    ಕೊರಗ ಕುಟುಂಬಗಳ ಮನೆ ಸ್ಥಿತಿ ಬಗ್ಗೆ ವಿಜಯವಾಣಿ ವರದಿ ಗಮನಿಸಿದ ಶಾಸಕ ಹರೀಶ್ ಪೂಂಜ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದರು. ಕ್ರಮಕೈಗೊಳ್ಳಲು ಮೇಲಧಿಕಾರಿಗಳಿಗೂ ಅದೇಶಿಸಿದ್ದಾರೆ. ಇಲಾಖೆ ಅನುದಾನದೊಂದಿಗೆ ಸ್ಥಳೀಯ ಅನುದಾನವನ್ನೂ ಬಳಸಿ, ದಾನಿಗಳ ನೆರವಿನಲ್ಲಿ ಸುಂದರ, ಶಾಶ್ವತ ಮನೆ ನಿರ್ಮಿಸಲು ಶಾಸಕ ಮುಂದೆ ಬಂದಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ.

    ಸೂರು ನಿರ್ಮಾಣಕ್ಕೆ ಸಮಸ್ಯೆ ಏನು?
    ಈ ಕೊರಗ ಸಮುದಾಯದವರು ವಿದ್ಯಾಭ್ಯಾಸ ಹೊಂದಿಲ್ಲ. ಸರ್ಕಾರದ ಸವಲತ್ತನ್ನು ಪಡೆಯಲು ಪರದಾಡುವ ಸ್ಥಿತಿ. ಜೀವನ ನಿರ್ವಹಣೆಗೆ ಬುಟ್ಟಿ ಹೆಣೆಯಲು ಮುಂಜಾನೆ ಕಾಡಿಗೆ ಹೋದರೆ, ಮರಳುವುದು ರಾತ್ರಿ. ಸೌಲಭ್ಯಗಳ ಮಾಹಿತಿ ನೀಡಲು ಅಧಿಕಾರಿಗಳು ಮನೆಗೆ ಬಂದರೆ, ಇವರು ಸಿಗುವುದಿಲ್ಲ. ಒಂದೊಮ್ಮೆ, ಇಲಾಖೆ ನಿಯಮದಂತೆ ಮನೆಗೆ ಹಣ ಮಂಜೂರಾದರೂ, ಪ್ರಥಮ ಕಂತಿನಲ್ಲಿ ಹಣ ಕೈ ಸೇರಬೇಕಿದ್ದರೆ, ಮನೆಯ ಪಂಚಾಂಗ ನಿರ್ಮಿಸಿ ದಾಖಲೆ ನೀಡಬೇಕು. ಇವರ ಬಳಿ ಹಣವಿಲ್ಲ. ಸರ್ಕಾರ ವಿಶೇಷ ಪ್ರಕರಣ ಎಂದು ಗುತ್ತಿಗೆದಾರರ ಮೂಲಕ ಮನೆ ನಿರ್ಮಾಣ ಮಾಡಿಸಿದರೆ ಸಮಸ್ಯೆ ಬಗೆಹರಿಯಬಹುದು.

    ಸರ್ಕಾರಿ ಸಿಬ್ಬಂದಿ ಕೊರತೆಯೂ ಅಡ್ಡಿ
    ತಾಲೂಕಿನಲ್ಲಿ ಕೊರಗ ಸಮುದಾಯದ ಕುಟುಂಬಗಳ ಸಂಖ್ಯೆ 105. ಕೊರಗ ಕುಟುಂಬಗಳ ಅಭಿವೃದ್ಧಿಯ ಹೊಣೆ ಐಟಿಡಿಪಿ ಇಲಾಖೆಯದು. ಆದರೆ ಇಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆಯಾಗಿದೆ. ಇರುವ ಸಿಬ್ಬಂದಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಐಟಿಡಿಪಿ ಇಲಾಖೆ ಕರ್ತವ್ಯ ನಿರ್ವಹಿಸಬೇಕು. ಐಟಿಡಿಪಿ ಇಲಾಖೆಯ ಅಧಿಕಾರಿ 4 ವಿದ್ಯಾರ್ಥಿ ನಿಲಯದ ಮೇಲುಸ್ತುವಾರಿಯಾಗಿಯೂ, ಪ.ಜಾತಿ, ಪಂಗಡಕ್ಕೆ ಸೇರಿದ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಾಗಿಯೂ ಕರ್ತವ್ಯ ನಿರ್ವಹಿಸಬೇಕಾಗಿದೆ.

    ಗಮನ ಸೆಳೆದ ವಿಜಯವಾಣಿ
    ಶಿಕ್ಷಣವಿಲ್ಲದೆ ಕಾಡಿನಲ್ಲೇ ಉಳಿದು, ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಜೀವನ ನಡೆಸುತ್ತಿರುವ ಪಾಣ್ಮೇಲಿನ ಕೊರಗ ಕುಟುಂಬಗಳು ಶಾಶ್ವತ ಮನೆಗಾಗಿ ಕಾಯುತ್ತಿವೆ. ಸಂಬಂಧಪಟ್ಟ ಇಲಾಖೆಗಳಿಗೆ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದರೂ, ಪರಿಣಾಮವಾಗಿಲ್ಲ. ಕೊರಗ ಕುಟುಂಬಗಳು ಮುಂದಿನ ಮಳೆಗಾಲದಲ್ಲಿ ಮನೆಯಲ್ಲಿ ವಾಸಿಸುವ ಬಗ್ಗೆ ಚಿಂತಿಸುತ್ತಿರುವ ಬಗ್ಗೆ ವಿಜಯವಾಣಿ ಫೆ.7ರಂದು ವರದಿ ಪ್ರಕಟಿಸಿದ್ದು, ಇಲಾಖೆಗಳ ಗಮನ ಸೆಳೆದಿತ್ತು.

    ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ವಾಸಿಸಬೇಕಾಗಿದೆ. ನೀರು ಬೀಳದಂತೆ ಮಾಡಿಗೆ ಟರ್ಪಾಲು ಹಾಕುತ್ತಿದ್ದೇವೆ. ಪ್ರತೀ ವರ್ಷ ಇದಕ್ಕೆ ಖರ್ಚು ಮಾಡಲು ನಮ್ಮಲ್ಲಿ ಹಣವಿಲ್ಲ. ಬುಟ್ಟಿ ಹೆಣೆದು ಬದುಕು ರೂಪಿಸುವುದೇ ಕಷ್ಟ. ಈ ಬಾರಿ ಮಳೆಗಾಲಕ್ಕೆ ಮುಂಚೆ ಮನೆ ನಿರ್ಮಿಸಿಕೊಡಿ.
    – ಚೋಮು
    ಬಡಕೊಟ್ಟು, ಪಾಣ್ಮೇಲು ನಿವಾಸಿ

    ಬುಟ್ಟಿ ಹೆಣೆಯುವುದನ್ನು ಬಿಟ್ಟು ಬೇರೆ ಕಸುಬು ನಮಗೆ ಗೊತ್ತಿಲ್ಲ. ಸಾಮಗ್ರಿ ಸಿಗದೆ ಬುಟ್ಟಿ ನಿರ್ಮಾಣವೂ, ಸಂಪಾದನೆಯೂ ಕಡಿಮೆಯಾಗುತ್ತಿದೆ. ಬದುಕು ಕಷ್ಟವಾಗಿದೆ. ಜಮೀನಿನಲ್ಲಿ ಬುಟ್ಟಿಗೆ ಬೇಕಾಗುವ ಬಳ್ಳಿ ಬೆಳೆಸಿದ್ದೇವೆ. ಶೀಘ್ರ ಮನೆ ನಿರ್ಮಿಸಿದರೆ ನೆಮ್ಮದಿ ಕಾಣಬಹುದು.
    – ಮಲ್ಲು
    ಬಡಕೊಟ್ಟು, ಪಾಣ್ಮೇಲು ನಿವಾಸಿ

    ವಿಜಯವಾಣಿ ಕಾಳಜಿಗೆ ಅಭಿನಂದನೆ. ಈ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮನೆಗಳಿಗೆ ತಲಾ 3.5 ಲಕ್ಷ ರೂ.ಅನುದಾನ ಸಿಗುತ್ತದೆ. ಇದಕ್ಕೆ ಸ್ಥಳೀಯ ಅನುದಾನ ಬಳಸಿ, ದಾನಿಗಳ ನೆರವನ್ನೂ ಪಡೆದು ಕೊರಗ ಕುಟುಂಬಗಳಿಗೆ ಸುಂದರ ಹಾಗೂ ಶಾಶ್ವತ ಮನೆ ನಿರ್ಮಿಸಲಾಗುವುದು.
    – ಹರೀಶ್ ಪೂಂಜ
    ಶಾಸಕ, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts