More

    ಚರ್ಮಗಂಟು ರೋಗದ ನಿಯಂತ್ರಣಕ್ಕೆ ಕ್ರಮವಹಿಸಿ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚನೆ

    ಕೊಪ್ಪಳ: ಚರ್ಮಗಂಟು ರೋಗದ ನಿಯಂತ್ರಣಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಜಾನುವಾರುಗಳಲ್ಲಿ ಚರ್ಮಗಂಟು ರೋಗ ನಿಯಂತ್ರಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿರು.

    ಹೆಚ್ಚಿನ ರೈತರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಚರ್ಮಗಂಟು ರೋಗದ ಕುರಿತು ಮುನ್ನೆಚ್ಚರಿಕೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರಂತರವಾಗಿ ಪ್ರಕಟಣೆಗಳನ್ನು ತಾಲೂಕುವಾರು ನೀಡುವಂತೆ ಮತ್ತು ರೋಗನಿಯಂತ್ರಣ ವರದಿ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ರೈತರಿಗೆ ಈ ರೋಗದ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಎಚ್.ನಾಗರಾಜ ಮಾತನಾಡಿ, ಚರ್ಮಗಂಟು ರೋಗವು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಜಿಲ್ಲೆಯ ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಬೋಚನಳ್ಳಿ ಗ್ರಾಮದಲ್ಲಿ ಸೆ.21 ರಂದು ಈ ರೋಗವು ಜಿಲ್ಲೆಯಲ್ಲಿ ಮೊದಲಿಗೆ ಕಾಣಿಸಿಕೊಂಡಿದೆ. ಜಿಲ್ಲೆಯ 162 ಗ್ರಾಮಗಳಲ್ಲಿ 2,976 ಜಾನುವಾರುಗಳಲ್ಲಿ ಈ ರೋಗ ಕಂಡುಬಂದಿದೆ. ರೋಗಗ್ರಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು, 1,755 ಜಾನುವಾರುಗಳು ಸಂಪೂರ್ಣ ಚೇತರಿಸಿಕೊಂಡಿವೆ. ಎಲ್ಲಾ ಜಾನುವಾರುಗಳು ಚಿಕಿತ್ಸೆಗಳಿಗೆ ಸ್ಪಂದಿಸುತ್ತಿದ್ದು, ಸ್ಥಳಿಯ ಪಶುವೈದ್ಯರು ತೀರ್ವ ನಿಗಾ ವಹಿಸಿದ್ದಾರೆ. ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಜಿಲ್ಲೆಯಲ್ಲಿ ಒಟ್ಟು 49 ಜಾನುವಾರುಗಳು ಸಾವನ್ನಪ್ಪಿದ್ದು, ಈ ರೋಗಕ್ಕೆ ನಿರ್ದಿಷ್ಟವಾದ ಲಸಿಕೆ ಇಲ್ಲ. ಆದರೆ ಮೇಕೆ ಸಿಡುಬು ರೋಗದ ಲಸಿಕೆಯು ಚರ್ಮಗಂಟು ರೋಗಕ್ಕೆ ಪರಿಣಾಮಕಾರಿಯಾಗಿ ಇರುವುದರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರೋಗೋದ್ರೇಕ ಪ್ರದೇಶದ 5 ಕಿ.ಮಿ. ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿನ ದನ ಮತ್ತು ಎಮ್ಮೆಗಳಿಗೆ ಮುಂಜಾಗೃತ ಕ್ರಮವಾಗಿ ಮೇಕೆ ಸಿಡುಬು ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯ 68,000 ಜಾನುವಾರುಗಳಿಗೆ ಲಸಿಕೆಯನ್ನು ಹಾಕಲಾಗಿದೆ.

    ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲಾಗುತ್ತಿದ್ದು, ಪ್ರತಿ ಎತ್ತು-ಕೋಣಕ್ಕೆ 30,000 ರೂ., ಹಸು-ಎಮ್ಮೆಗೆ 20,000 ರೂ., ಕರುವಿಗೆ 5,000 ರೂ. ಪರಿಹಾರ ಧನ ನಿಗದಿಪಡಿಸಿದ್ದು, ಜಿಲ್ಲೆಯಲ್ಲಿ ಸಾವನ್ನಪ್ಪಿದ ಒಟ್ಟು 49 ಜಾನುವಾರುಗಳ ಪೈಕಿ 19 ಜಾನುವಾರುಗಳಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಲಾಗಿದೆ. ಜಾನುವಾರುಗಳ ಮಾಲೀಕರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗುವುದು. ಉಳಿದ ಜಾನುವಾರುಗಳ ಪರಿಹಾರಧನ ಬಿಡುಗಡೆಯಾದ ತಕ್ಷಣವೇ ಜಾನುವಾರುಗಳ ಮಾಲೀಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts