More

    ಕೊಪಣಾದ್ರಿಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ: ಅನುರಣಿಸಿದ ಸಂಗೀತ, ನಾದ ತರಂಗ

    ಕೊಪ್ಪಳ: ಎತ್ತ ನೋಡಿದರೂ ಹಬ್ಬದ ವಾತಾವರಣ, ವಿವಿಧ ಕಲಾ ತಂಡಗಳ ಮೇಳ, ನಾದಸ್ವರಗಳ ಸುಮಧುರ ರಾಗ, ಮನರಂಜನೆಯೊಂದಿಗೆ ಮಾಹಿತಿ ನೀಡಿಕೆ, ಸಾರ್ವಜನಿಕರಲ್ಲಿ ಸಂತಸದ ಛಾಯೆ…

    ಇದೆಲ್ಲ ಕಂಡು ಬಂದಿದ್ದು ನಗರದ ತಾಲೂಕು ಕ್ರೀಡಾಂಗಣದಲ್ಲಿ. ಜಿಲ್ಲಾದ್ಯಂತ ಎರಡು ದಿನಗಳ ಕಾಲ ಬೆಳ್ಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. 25 ವರ್ಷಗಳಲ್ಲಿ ಜಿಲ್ಲೆ ಹಲವು ಏಳು-ಬೀಳುಗಳನ್ನು ಕಂಡಿದ್ದು, ಅವುಗಳನ್ನೆಲ್ಲ ನೆನೆಯುವ ಕೇಂದ್ರವಾಗಿ ಕ್ರೀಡಾಂಗಣ ಮಾರ್ಪಟ್ಟಿದೆ. ಹೈದರಾಬಾದ್ ನಿಜಾಮನ ಆಡಳಿತದಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಕೊಪ್ಪಳ, ಸ್ವಾತಂತ್ರೃ ನಂತರ ರಾಯಚೂರು ಜಿಲ್ಲೆಯಲ್ಲಿ ಸೇರ್ಪಡೆಯಾಯಿತು. ಹೈಕ ವಿಮೋಚನೆ ಸುವರ್ಣ ಸಂಭ್ರಮದಲ್ಲಿದ್ದಾಗಲೇ ರಾಯಚೂರಿನಿಂದ ಬೇರ್ಪಟ್ಟ ಕೊಪ್ಪಳ ಸ್ವತಂತ್ರ ಜಿಲ್ಲೆಯಾಗಿದೆ. ಇದಕ್ಕಾಗಿ ಅನೇಕರು ಹೋರಾಡಿದ್ದಾರೆ. ಅದೆಲ್ಲದರ ನೆನಪುಗಳನ್ನು ಮಳಿಗೆಯಲ್ಲಿ ಪತ್ರಿಕಾ ಬರಹಗಳು, ಹೋರಾಟದ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ಇಂದಿನ ಪೀಳಿಗೆಗೆ ತಿಳಿಸಲಾಗುತ್ತಿದೆ.

    ತೋಟಗಾರಿಕೆ ಇಲಾಖೆಯಿಂದ ಬಣ್ಣ ಬಣ್ಣದ ಹೂಗಳಲ್ಲಿ ಮೂಡಿದ ಹಂಸಗಳು, ಪ್ರಾಗೈತಿಹಾಸಿಕ ಕಾಲದ ಕುರುಹು ಆದ ಹಿರೇಬೆಣಕಲ್‌ನ ಮೋರೆರ ಸಮಾಧಿಗಳನ್ನು ನಿರ್ಮಿಸಿದ್ದು, ಇತಿಹಾಸಕ್ಕೆ ಜಿಲ್ಲೆಯ ಕೊಡುಗೆ ಬಗ್ಗೆ ಮಾಹಿತಿ ತಿಳಿಸಲಾಗುತ್ತಿದೆ. ವಿವಿಧ ಬಣ್ಣದಲ್ಲಿ ಜಿಲ್ಲೆಯ ನಕ್ಷೆ ಬಿಡಿಸಿದ್ದು, ಹಣ್ಣುಗಳಲ್ಲಿ ಚಿತ್ರನಟರು, ಕವಿಗಳು ಮುಂತಾದವರನ್ನು ಬಿಡಿಸಿದ್ದು ಆಕರ್ಷಕವಾಗಿದೆ. ಜನರು ಇವುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು ಕಂಡುಬಂತು. ಇನ್ನು ಕೃಷಿ ಇಲಾಖೆಯ ಕೃಷಿ ವಸ್ತು ಪ್ರದರ್ಶನ, ಮಾರಾಟ ಹಾಗೂ ನರೇಗಾ ವಿಭಾಗದಿಂದ ಮಾದರಿ ಜಲ ಸಂಜೀವಿನಿ ಯೋಜನೆ ಅನುಷ್ಠಾನದ ವಿಧಾನಗಳು ಆಕರ್ಷಣೀಯವಾಗಿದ್ದವು.

    ರೈತ ಉತ್ಪಾದಕ ಸಂಸ್ಥೆಗಳಿಂದ ಸಿರಿಧಾನ್ಯಗಳ ಪ್ರದರ್ಶನ, ಸಾವಯವ ಕೃಷಿ ವಸ್ತು ಪ್ರದರ್ಶನ, ಮಾದರಿ ಜಲಾನಯನ ಪ್ರದರ್ಶನ, ಆರೋಗ್ಯ ಇಲಾಖೆಯ ಯೋಜನೆಗಳ ಪ್ರದರ್ಶನ, ಕೃಷಿ-ತೋಟಗಾರಿಕೆ ವಿಶ್ವವಿದ್ಯಾಲಯ ಆಧುನಿಕ ತಾಂತ್ರಿಕತೆಯನ್ನೊಳಗೊಂಡ ಮಳಿಗೆಗಳು, ಅರಣ್ಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳು ಜನರಿಗೆ ಇದ್ದಲ್ಲೇ ಒಂದೇ ಸೂರಿನಡಿ ಯೋಜನೆಗಳ ಮಾಹಿತಿ ಹಾಗೂ ಪಡೆಯುವ ವಿಧಾನ ತಿಳಿಸಿಕೊಟ್ಟವು. ಬ್ಯಾಂಕ್, ಅಂಚೆ ಇಲಾಖೆ ಯೋಜನೆಗಳ ಪ್ರದರ್ಶನ ಮಳಿಗೆ, ಗೋ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ, ಪುಸ್ತಕ ಮಳಿಗೆಗಳು ವಿಭಿನ್ನತೆ ಬಯಸುವ ಜನರಿಗೆ ರಸದೌತಣ ನೀಡಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts