More

    ಮಾದಕ ವಸ್ತುಗಳಿಂದ ಮಕ್ಕಳನ್ನು ರಕ್ಷಿಸಿ- ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಸೂಚನೆ

    ಕೊಪ್ಪಳ: ಮಾದಕ ವಸ್ತುಗಳಿಂದ ಮಕ್ಕಳನ್ನು ರಕ್ಷಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರದಾಗಿದ್ದು, ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರ ಕಡಿ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದಕ ವಸ್ತುಗಳಿಂದ ಮತ್ತು ಮಾದಕ ವಸ್ತು ಸಾಗಣೆಯಲ್ಲಿ ಮಕ್ಕಳ ರಕ್ಷಣೆ ಕುರಿತು ಮಕ್ಕಳ ರಕ್ಷಣಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಾದಕ ವಸ್ತುಗಳನ್ನು ಮಕ್ಕಳು ಬಳಸದಂತೆ ಕ್ರಮ ಕೈಗೊಳ್ಳಬೇಕು. ಸದ್ಯ ಜಾರಿಯಲ್ಲಿರುವ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ನಿಷೇಧಿಸಬೇಕು. ಮಾದಕ ವ್ಯಸನಿ ಮಕ್ಕಳ ಚಿಕಿತ್ಸೆ, ಪುನರ್ವಸತಿಗೆ ಕ್ರಮವಹಿಸಬೇಕು. ಶೈಕ್ಷಣಿಕ ಸಂಸ್ಥೆಗಳು, ಔಷಧಾಲಯಗಳಲ್ಲಿ ಮಕ್ಕಳಿಗೆ ಮಾದಕ ವಸ್ತುಗಳು ಲಭ್ಯವಾಗದಂತೆ ಕಣ್ಗಾವಲು ಹೆಚ್ಚಿಸಲು ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.

    ರಾಜ್ಯ ಅಬಕಾರಿ ಕಾಯ್ದೆ-1965ರ ಕಲಂ-20(1) ಅನ್ವಯ 18 ವರ್ಷದೊಳಗಿನ ಮಕ್ಕಳನ್ನು ಮದ್ಯ ಮಾರಾಟಗಾರರು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಕಾಯ್ದೆಯಡಿ 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಸಹ ನಿಷಿದ್ಧ. ಈ ಬಗ್ಗೆ ಮಾರಾಟಗಾರರಿಗೆ ಅಬಕಾರಿ ಇಲಾಖೆಯಿಂದ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕು. ಶಾಲೆಗಳನ್ನು ತಂಬಾಕು ಮುಕ್ತಗೊಳಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಟೋಲ್ ಫ್ರೀ (1800112356)ನಂಬರ್ ನಮೂದಿಸಬೇಕು. ಸಿಸಿ ಕ್ಯಾಮರಾ, ಸಾರ್ವಜನಿಕ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಖಾಸಗಿ ಶಾಲೆಗಳ ನವೀಕರಣ ಸಮಯದಲ್ಲಿ ಎಲ್ಲ ಅಂಶಗಳನ್ನು ಪಾಲಿಸಿದ ಬಗ್ಗೆ ಪರಿಶೀಲಿಸಿ ಅನುಮತಿಸಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ಕಲ್ಪಿಸಲು ಸೂಚಿಸುವಂತೆ ತಿಳಿಸಿದರು.

    ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯ 100 ಮೀಟರ್ ಪ್ರದೇಶದಲ್ಲಿ ಅಂಗಡಿ ಅಥವಾ ಶಾಪ್‌ಗಳಲ್ಲಿ ಮಾದಕ ವಸ್ತುಗಳ ಮಾರಾಟ ಪರಿಶೀಲಿಸಬೇಕು. ಮಾದಕ ವಸ್ತುಗಳಿಂದ ಮಕ್ಕಳ ರಕ್ಷಣೆಗೆ ವಸತಿ ಶಾಲೆಗಳಲ್ಲಿ ನಿಲಯ ಪಾಲಕರು ಕಾಳಜಿವಹಿಸಬೇಕು. ಕೋಟ್ಪಾ-2003 6(ಬಿ)ಎ ಬಗ್ಗೆ ಶಾಲೆ, ಕಾಲೇಜು ಮತ್ತು ಶೈಕ್ಷಣಿಕೆ ಸಂಸ್ಥೆಗಳ ಹೊರಗಡೆ ಗೋಡೆಬರಹ ಬಿಡಿಸುವುದು ಸೇರಿ ಇತರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಎಡಿಸಿ ತಾಕೀತು ಮಾಡಿದರು.

    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಡಿವೈಎಸ್ಪಿ ಶರಣಪ್ಪ ಸುಬೇದಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಿಲೋಫರ್ ರಾಂಪೂರಿ, ಬಾಲ ನ್ಯಾಯ ಮಂಡಳಿ ಸದಸ್ಯ ಶೇಖರಗೌಡ ಜಿ.ರಾಮತ್ನಾಳ, ಡಿಡಿಪಿಯು ಮೃಣಲಾ ಸಾಹುಕಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ್ ಜೋಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts