More

    ನವೋದಯ ಶಾಲೆಗೆ ಮೂಲ ಸೌಲಭ್ಯ ನೀಡಿ; ಸಂಸದ ಸಂಗಣ್ಣ ಕರಡಿಗೆ ಪೋಷಕ ಶಿಕ್ಷಕರ ಮಂಡಳಿ ಸದಸ್ಯರು ಮನವಿ

    ಕೊಪ್ಪಳ: ಜಿಲ್ಲೆಯ ಕುಕನೂರ ಜವಾಹರ್ ನವೋದಯ ವಿದ್ಯಾಲಯದಲ್ಲಿ ಮೂಲ ಸೌಲಭ್ಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪೋಷಕ ಶಿಕ್ಷಕರ ಮಂಡಳಿ ಸದಸ್ಯರು ನಗರದ ಸಂಸದರ ನಿವಾಸದಲ್ಲಿ ಸಂಸದ ಸಂಗಣ್ಣ ಕರಡಿಗೆ ಸೋಮವಾರ ಮನವಿ ಸಲ್ಲಿಸಿದರು.

    ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಉತ್ತಮವಾಗಿದ್ದು, ಮೂಲ ಸೌಲಭ್ಯದ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. 1986-87ರಲ್ಲಿ ನಿರ್ಮಾಣವಾದ ಶಾಲಾ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ. ಶೌಚಗೃಹಗಳು ಕಡಿಮೆ ಸಂಖ್ಯೆಯಲ್ಲಿದ್ದು, ಅವುಗಳೂ ದುರಸ್ತಿ ಕಾಣದೆ ಗಬ್ಬು ನಾರುತ್ತಿವೆ.

    ಕುಡಿಯುವ ನೀರು ಫ್ಲೋರೈಡ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿ ವಸತಿ ಗೃಹಗಳ ಕಿಟಕಿ ಬಾಗಿಲುಗಳು ಹಾಳಾಗಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂೆ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗೆ ಮಕ್ಕಳು ತುತ್ತಾಗುವ ಭೀತಿ ಪಾಲಕರನ್ನು ಕಾಡುತ್ತಿದೆ.

    ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ತಣ್ಣೀರು ಸ್ನಾನ ಮಾಡುವುದು ಅನಿವಾರ್ಯವಾಗಿದೆ. ಚಳಿಗಾಲದಲ್ಲಿ ಮಕ್ಕಳು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾಲಯದ ಆವರಣ ಸ್ವಚ್ಛತೆ ಇಲ್ಲದ ಕಾರಣ ಹಾವು, ಚೇಳುಗಳಂತಹ ವಿಷ ಜಂತುಗಳು ಹೆಚ್ಚಾಗಿದ್ದು ಅಪಾಯದ ವಾತಾವರಣವಿದೆ. ಕೂಡಲೇ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು.

    ಮನವಿ ಸ್ವೀಕರಿಸಿದ ಸಂಸದ ಸಂಗಣ್ಣ ಕರಡಿ, ಕೂಡಲೇ ವಿಶೇಷ ಕಾಳಜಿ ವಹಿಸಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪಾಲಕರ ಸಮಿತಿ ಸದಸ್ಯರಾದ ಕುಬೇರ ಮಜ್ಜಿಗಿ, ಶಿವಾನಂದ ಪ್ಯಾಟಿ, ಉಮೇಶ ಬಸರಿಹಾಳ, ಮಂಜುನಾಥ ಬಂಡಿ, ಸುರೇಶ ಪಾಟೀಲ್, ತುಳಸೋಜಿರಾವ್ ಚವ್ಹಾಣ್, ಶ್ರೀರಾಮ್, ಜಗದೀಶ ಬಳಿಗಾರ, ದೇವರಾಜ ಬರಗೂರ, ಬಸವರಾಜ ಗೌಳೇರ, ಹನುಮಂತಪ್ಪ ಹಳ್ಳಿ, ರಮೇಶ ಹೊಸಮನಿ, ಬಸವರಾಜ ಹುಬ್ಳಿ, ಲಕ್ಕಪ್ಪ ಶಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts