More

    ಪಕ್ಷೇತರರಿಗಿಲ್ಲ ಮತದಾರರ ಬಹುಪರಾಕ್


    1952ರಲ್ಲಿ ಶಿವಮೂರ್ತಿ ಸ್ವಾಮಿ ಅಳವಂಡಿಗೆ ಮಾತ್ರ ದೊರೆತ ಲೋಕಸಭೆ ಪ್ರವೇಶ

    ವಿ.ಕೆ. ರವೀಂದ್ರ

    ಕೊಪ್ಪಳ: ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತುರುಸಿನ ಜಿದ್ದಾಜಿದ್ದಿ ಸಾಮಾನ್ಯ. ಜಿಲ್ಲೆಯ ರಾಜಕೀಯ ಇತಿಹಾಸ ಗಮನಿಸಿದಾಗಲೂ ಮತದಾರರು ಪಕ್ಷೇತರರಿಗಿಂತ ವಿವಿಧ ಪಕ್ಷದಿಂದ ಸ್ಪರ್ಧಿಸಿದವರಿಗೆ ಅಧಿಕ ಬಾರಿ ಮಣೆ ಹಾಕಿದ್ದಾರೆ. ಆಗಾಗ ಪಕ್ಷೇತರರು ಗೆದ್ದ ಉದಾಹರಣೆಗಳೂ ಇರುವುದು ವಿಶೇಷ.

    1952ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ 1,07,209 ಮತ ಪಡೆದು ಮೊದಲ ಬಾರಿ ಲೋಕಸಭೆ ಪ್ರವೇಶಿಸಿ ದೇಶದ ಗಮನ ಸೆಳೆದಿದ್ದರು. ಆನಂತರ 1957ರಲ್ಲಿ ಎರಡನೇ ಬಾರಿಗೆ ಪಕ್ಷೇತರರಾಗಿ ಕಣಕ್ಕಿಳಿದರೂ ಕಾಂಗ್ರೆಸ್ ಸಂಗಣ್ಣ ಅಗಡಿ ವಿರುದ್ಧ ಪರಾಭವಗೊಳ್ಳಬೇಕಾಯಿತು. 1962ರಲ್ಲಿ ಲೋಕಸೇವಾ ಸಂಘದಿಂದ ಅದೃಷ್ಟ ಪರೀಕ್ಷೆಗಿಳಿದು 1,25,018ಮತ ಗಳಿಸಿ ಗೆದ್ದು ಬೀಗಿದರು. 1967 ಮತ್ತು 1971ರಲ್ಲಿ ಮತ್ತೆ ಪಕ್ಷೇತರರಾಗಿ ಕಣಕ್ಕಿಳಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಕ್ಷೇತ್ರದ ಐದನೇ ಸಂಸದ ಸಿದ್ರಾಮೇಶ್ವರ ಸ್ವಾಮಿ ಅವರು 1971ರಲ್ಲಿ ಕಾಆ(ಜೆ) ಪಕ್ಷದಿಂದ ವಿಜಯ ಯಾತ್ರೆ ಆರಂಭಿಸಿದರು. ಆದರೆ, 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿವ ಮೂಲಕ ರಾಷ್ಟ್ರೀಯ ಪಕ್ಷ ಪ್ರತಿನಿಧಿಸಿದ್ದರು. 1980ರಿಂದ 2019ವರೆಗೆ ಕಾಂಗ್ರೆಸ್, ಜನತಾದಳ ಹಾಗೂ ಬಿಜೆಪಿ ಪಕ್ಷದಿಂದ ಕಣಕ್ಕಿಳಿದವರಿಗೆ ಸಂಸದರಾಗುವ ಯೋಗ ಒಲಿದು ಬಂದಿದೆ. ಶಿವಮೂರ್ತಿ ಸ್ವಾಮಿ ಅಳವಂಡಿ ಅವರ ಬಳಿಕ 2019ರ ಚುನಾವಣೆವರೆಗೂ 50ಕ್ಕೂ ಹೆಚ್ಚು ಜನ ಪಕ್ಷೇತರರು ಚುನಾವಣಾ ಕಣದಲ್ಲಿದ್ದರೂ ಪ್ರಬಲ ಪೈಪೋಟಿ ಒಡ್ಡಿದ ಉದಾಹರಣೆಗಳಿಲ್ಲ. 1996ರ ಚುನಾವಣೆಯಲ್ಲಿ ಸೌರಮ್ಮ ಮಳಗಿ ಎಂಬ ಪಕ್ಷೇತರಳಾಗಿ ಅಖಾಡಕ್ಕಿಳಿದಿದ್ದು, 3,214 ಮತ ಪಡೆದಿದ್ದರು. ಲೋಕಸಭೆಗೆ ಈವರೆಗೆ 17 ಚುನಾವಣೆಗಳು ನಡೆದಿವೆ. ಅದರಲ್ಲಿ 9 ಬಾರಿ ಕಾಂಗ್ರೆಸ್, ಮೂರು ಬಾರಿ ಬಿಜೆಪಿ, ಎರಡು ಬಾರಿ ಜನತಾದಳ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಉಳಿದಂತೆ ಲೋಕಸೇವಾ ಸಂಘ, ಕಾಆ(ಜೆ) ಹಾಗೂ ಒಬ್ಬ ಪಕ್ಷೇತರರು ಸಂಸದರಾಗುವ ಯೋಗವನ್ನು ಮತದಾರರು ಕರುಣಿಸಿದ್ದಾರೆ.

    ಇನ್ನು ವಿಧಾನಸಭೆ ಚುನಾವಣೆ ಇತಿಹಾಸ ಗಮನಿಸಿದರೆ ಭತ್ತದ ನಾಡು ಗಂಗಾವತಿಯಲ್ಲಿ 1983ರಲ್ಲಿ ಎಚ್.ಎಸ್.ಮುರಳೀಧರ ಎಂಬುವವರು ಪಕ್ಷೇತರರಾಗಿ ಕಣಕ್ಕಿಳಿದು ಮೊದಲ ಬಾರಿ ಜಯಭೇರಿ ಬಾರಿಸಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1989ರಲ್ಲಿ ಗೆದ್ದ ಮಲ್ಲಿಕಾರ್ಜುನ ದಿವಟರ್ ಪಕ್ಷೆತರರಾಗಿ ಕಣಕ್ಕಿಳಿದಿದ್ದರೆಂಬುದು ವಿಶೇಷ. ಇವರ ನಂತರ ಕೊಪ್ಪಳದಲ್ಲಿ 1994ರಲ್ಲಿ ಸಂಗಣ್ಣ ಕರಡಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜಕೀಯ ಭವಿಷ್ಯಕ್ಕೆ ಬುನಾದಿ ಹಾಕಿಕೊಂಡರು. ಸದ್ಯ ಮೀಸಲು ಕ್ಷೇತ್ರವಾಗಿರುವ ಕನಕಗಿರಿಯಲ್ಲಿ 2008ರಲ್ಲಿ ಮೊದಲ ಬಾರಿಗೆ ಶಿವರಾಜ ತಂಗಡಗಿ ಪಕ್ಷೇತರರಾಗಿ ಗೆದ್ದಿದಷ್ಟೇ ಅಲ್ಲದೆ, ಸಚಿವರಾಗಿ ಹೊಸ ಇತಿಹಾಸ ದಾಖಲಿಸಿದರು.

    11ರಲ್ಲಿ ಎರಡನೇ ಸ್ಥಾನ ಪಡೆದವರು

    ಪಕ್ಷೇತರರಾಗಿ ಗೆದ್ದವರು ಒಂದೆಡೆಯಾದರೆ, ಮತ್ತೊಂದೆಡೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 11 ಚುನಾವಣೆಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದವರು ಅಲ್ಪ ಅಂತರದಲ್ಲಿ ಸೋತಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕುಷ್ಟಗಿಯಲ್ಲಿ 1957ರಲ್ಲಿ ಬಸಪ್ಪ ಕರಿಬಸಪ್ಪ, 1967 ವಿ.ರಾಜಪ್ಪಯ್ಯ, ಕನಕಗಿರಿಯಲ್ಲಿ 1983ರಲ್ಲಿ ಎಚ್.ಬಾಬು ಬಸಲಿಂಗಪ್ಪ, ಗಂಗಾವತಿ 1957ರಲ್ಲಿ ಅಚ್ಚಪ್ಪ ಈಶ್ವರಪ್ಪ, 1962 ಷಣ್ಮುಖಪ್ಪ ಭೀಮಪ್ಪ, 1967 ಎಚ್.ರಾಮರಾವ್, ಯಲಬುರ್ಗಾ 1957 ಶಿರೂರು ವೀರಭದ್ರಪ್ಪ, 1967 ವೀರಭದ್ರಪ್ಪ, 1983 ಶಂಕರರಾವ್ ದೇಶಪಾಂಡೆ ಮತ್ತು ಕೊಪ್ಪಳದಲ್ಲಿ 1957ರಲ್ಲಿ ಹುಚ್ಚಪ್ಪಯ್ಯಣ್ಣ ಮಠದ್, 1967 ಶಂಕರಗೌಡ ಪಕ್ಷೇತರರಾಗಿ ಕಣಕ್ಕಿಳಿದು ಎರಡನೇ ಸ್ಥಾನ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts