More

    ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ: ಶಾಸಕ ಡಾ.ಯತೀಂದ್ರ ಹೇಳಿಕೆ

    ಕೊಪ್ಪಳ: ಧರ್ಮ ಅಂದರೆ ಎಲ್ಲರನ್ನೂ ಒಗ್ಗೂಡಿಸುವುದು. ಆದರೆ, ಇಂದು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವಾಗುತ್ತಿದ್ದು, ಎಲ್ಲರೂ ಎಚ್ಚರದಿಂದ ಇರಬೇಕು ಎಂದು ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

    ಕೆರೆಹಳ್ಳಿ ಗ್ರಾಮದಲ್ಲಿ ಭಕ್ತ ಕನಕದಾಸ ಯುವ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮದ ಹೆಸರಿನಲ್ಲಿ ಹೋರಾಡಿದ ದೇಶಗಳು ಮುಳುಗುತ್ತಿವೆ. ಭ್ರಷ್ಟಾಚಾರ, ಮೋಸಗಳನ್ನು ಮುಚ್ಚಿಹಾಕಲು ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯಬಾರದು. ಅಂಥವರಿಂದ ದೂರವಿರಬೇಕು. ಕನಕದಾಸರು ಜ್ಞಾನ, ತತ್ವದಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದವರು. ಜ್ಞಾನವೊಂದೇ ಎಲ್ಲವನ್ನೂ ಆಳುವಂಥದ್ದು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ದಾಸರ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಕನಕದಾಸರ ವಿಚಾರ ಅಳವಡಿಸಿಕೊಳ್ಳಬೇಕು. ಮನುಕುಲವೇ ಒಂದು ಕುಟುಂಬ ಎನ್ನುವ ಮಾತನ್ನು ಎಲ್ಲರೂ ಅನುಸರಿಸಬೇಕು. ಕುರುಬ ಜನಾಂಗ ಶ್ರಮದ ಒಂದು ಪ್ರತಿರೂಪ. ಕನಕದಾಸರು ನಾನು ಎಂಬ ಭಾವ ತೊರೆದವರು. ಅವರಂತೆ ನಾವು ಬಾಳಬೇಕಿದೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ಹಾಲವರ್ತಿ ಜಡೇಶ್ವರ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾಗ್ಮಿ ಮೋಹನ್ ಮೇಟಿ, ಹಾಲುಮತ ಸಮುದಾಯ ರಾಜ್ಯಾಧ್ಯಕ್ಷ ರುದ್ರಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ, ಮುಖಂಡರಾದ ಬಿ.ಎಂ ಪಾಟೀಲ್, ಕನಕದಾಸ ಯುವ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪದಾಧಿಕಾರಿಗಳು ಇತರರಿದ್ದರು.

    ಕ್ಷೇತ್ರವಿಲ್ಲ ಎಂಬುದು ಪ್ರತಿಪಕ್ಷಗಳ ಟೀಕೆ
    ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರವಿಲ್ಲ ಎಂಬುದು ಪ್ರತಿಪಕ್ಷಗಳ ಪ್ರಚಾರ ತಂತ್ರ. ಅವರಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮತದಾರರು ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಆಯ್ಕೆಯಲ್ಲಿ ಗೊಂದಲವಾಗಿದೆ. ಇದೀಗ ಕೋಲಾರದಿಂದ ಸ್ಪರ್ಧಿಸುವುದಾಗಿ ಅವರೇ ತಿಳಿಸಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ. ಕೊಪ್ಪಳ, ಮೈಸೂರು ಸೇರಿ ವಿವಿಧೆಡೆಯಿಂದ ಸ್ಪರ್ಧಿಸುವಂತೆ ಮತದಾರರು ಆಹ್ವಾನಿಸುತ್ತಿದ್ದಾರೆ. ಇದು ಅವರ ಕೊನೆಯ ಚುನಾವಣೆ. ಹೀಗಾಗಿ ವರುಣಾದಿಂದಲೇ ಸ್ಪರ್ಧಿಸಿ ಜನರ ಸೇವೆ ಮಾಡಲಿ ಎಂಬುದು ನಮ್ಮ ಆಶಯ. ಅವರೊಬ್ಬ ಮಾಸ್ ಲೀಡರ್. ಹೀಗಾಗಿ ಅವರನ್ನು ಸೋಲಿಸಲು ಪ್ರತಿಪಕ್ಷಗಳು ಕೋಲಾರದಲ್ಲಿ ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಪೋಸ್ಟರ್ ಅಭಿಯಾನ ಕುತಂತ್ರ ಮಾಡಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts