More

    ಪ್ರಮುಖ ಆರೋಪಿಗಳ ರಕ್ಷಣೆಗೆ ಹುನ್ನಾರ; ಹುಲಿಹೈದರ್ ಮಾರಾಮಾರಿಗೆ ಸಿಪಿಐಎಂಎಲ್ ಆಕ್ರೋಶ

    ಕನಕಗಿರಿ: ಹುಲಿಹೈದರ್ ಗ್ರಾಮದಲ್ಲಿ ನಡೆದ ಮಾರಾಮಾರಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಣ್ಣ ಹನುಮಂತಪ್ಪ ಹಾಗೂ ಅಮಾಯಕರನ್ನು ಬಂಧಿಸಿದ್ದು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸಿಪಿಐಎಂಎಲ್ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಧನಂಜಯ ಮಾಲಗಿತ್ತಿಗೆ ಮನವಿ ಸಲ್ಲಿಸಿದರು.
    ಸಮಿತಿಯ ಜಿಲ್ಲಾಧ್ಯಕ್ಷ ಕೆಂಚಪ್ಪ ಹಿರೇಖೇಡ ಮಾತನಾಡಿ, ಹುಲಿಹೈದರ್‌ನಲ್ಲಿ ಆ.11ರಂದು ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಮುಖಂಡ ಸಣ್ಣ ಹನುಮಂತಪ್ಪ ಸೇರಿದಂತೆ ಸಂಬಂಧವಿಲ್ಲದವರ ವಿರುದ್ಧವೂ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಈ ಮೂಲಕ ಪ್ರಮುಖ ಆರೋಪಿಗಳನ್ನು ರಕ್ಷಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
    ವಾಲ್ಮೀಕಿ ವೃತ್ತ ವಿರೂಪಗೊಂಡ ಕಾರಣಕ್ಕೆ 2018ರಲ್ಲಿ ಗಲಭೆಯಾಗಿತ್ತು. ಇದೀಗ ಕೆಲ ದಿನಗಳಿಂದ ಮರು ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿ ಸಭೆ ನಡೆಸಿದಾಗ ಮತ್ತೆ ಗಲಾಟೆ ನಡೆಯದಿರಲೆಂದು ಜನರ ಒಪ್ಪಿಗೆ ಮೇರೆಗೆ ಬುದ್ಧ, ಬಸವ, ಅಂಬೇಡ್ಕರ ಮೂರ್ತಿಯನ್ನು ವಾಲ್ಮೀಕಿ ಮೂರ್ತಿ ಜತೆಗೆ ಪ್ರತಿಷ್ಠಾಪನೆ ಮಾಡುವಂತೆ ಸಣ್ಣ ಹನುಮಂತಪ್ಪ ಮನವಿ ಮಾಡಿದ್ದರು. ಆಗ ಕೆಲವರು ಹಲ್ಲೆಗೆ ಮುಂದಾಗಿದ್ದು, ಗ್ರಾಮವು ಬೂದಿ ಮುಚ್ಚಿದ ಕೆಂಡವಾಗಿತ್ತು. ಹೀಗಾಗಿ ಡಿಆರ್ ಮೀಸಲು ಪಡೆ ನಿಯೋಜಿಸಲಾಗಿತ್ತು. ಆದರೆ, ಆ.11ರಂದು ಶ್ರೀರಾಮನಗರ ಗ್ರಾಪಂ ಚುನಾವಣೆಗೆಂದು ಮೀಸಲು ಪಡೆ ಹೋದ ಒಂದು ಗಂಟೆಯಲ್ಲಿ ಮಾರಾಮಾರಿ ನಡೆದಿದೆ. ಇದಕ್ಕೆ ಕೆಲವರು ಕುಮ್ಮಕ್ಕು ನೀಡಿದ್ದು, ಅವರನ್ನು ಬಂಧಿಸಬೇಕು. ಜಿಲ್ಲಾಡಳಿತ ಶಾಂತಿಸಭೆ ನಡೆಸಿ ಜನರಿಗೆ ಧೈರ್ಯ ತುಂಬಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪದಾಧಿಕಾರಿಗಳಾದ ಮಲಿಯಪ್ಪ ರಾಮದುರ್ಗಾ, ಪಾಮಣ್ಣ ಅರಳಿಗನೂರು, ನಾಗಪ್ಪ ಕಾಟಾಪುರ, ಹನುಮಂತ ರಾಮದುರ್ಗಾ, ಮರಿಸ್ವಾಮಿ, ಹುಸೇನಪ್ಪ, ಗಿರೇ ಸೋಮಪ್ಪ, ಮಹದೇವಮ್ಮ, ರೂಪಾ ಸಣ್ಣ ಹನುಮಂತ, ಅಮರಮ್ಮ, ಪಾರ್ವತೆಮ್ಮ, ಮುತ್ತಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts