More

    ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಮೊದಲು ಆದ್ಯತೆ ನೀಡಿ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್ ಸೂಚನೆ

    ಕೊಪ್ಪಳ: ಗಂಭೀರ ಕಾಯಿಲೆಗಳ ಪರೀಕ್ಷೆ ಹಾಗೂ ಚಿಕಿತ್ಸೆಗೆ ಹಿಂಜರಿಯುವ ಮಹಿಳೆಯರ ಜತೆ ಆಪ್ತ ಸಮಾಲೋಚನೆ ನಡೆಸಿ ಅಗತ್ಯ ವೈದ್ಯಕೀಯ ತಪಾಸಣೆ ಮಾಡಬೇಕೆಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್ ಸೂಚಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 30 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಯಾವ ಲಕ್ಷಣ ತೋರ್ಪಡಿಸದೆ ಪ್ರಾಣ ಕಂಟಕವಾಗುತ್ತವೆ. ಆರೋಗ್ಯ ಇಲಾಖೆ ನಡೆಸುವ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸುವ ಮಹಿಳೆಯರಿಗೆ ಬಿಪಿ, ಶುಗರ್ ತಪಾಸಣೆಯೊಂದಿಗೆ ಮಾರಕ ಕಾಯಿಲೆಗಳ ಪರೀಕ್ಷೆಯೂ ಮಾಡಬೇಕು. ಆಪ್ತ ಸಮಾಲೋಚನೆ ನಡೆಸಿ ವೈದ್ಯಕೀಯ ಚಿಕಿತ್ಸೆಗೆೆ ಮನವೊಲಿಸಬೇಕು. ಕಾಯಿಲೆ ಖಚಿತವಾದರೆ ಸೂಕ್ತ ವೈದ್ಯಕೀಯ ಸಲಹೆ ಮೂಲಕ ಚಿಕಿತ್ಸೆಗೆ ಶಿಫಾರಸು ಮಾಡಬೇಕು ಎಂದು ತಿಳಿಸಿದರು.

    ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಬೇಕು. ಗಂಭೀರ ಪರಿಸ್ಥಿತಿ ಅಲ್ಲದ ಹೊರತು ಸಿಸೇರಿಯನ್ ಮಾಡಬಾರದು. ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಸಹಜ ಹೆರಿಗೆ ಮಾಡಿಸಲು ಮೊದಲ ಆದ್ಯತೆ ನೀಡಬೇಕು. ತಾಯಿ ಹಾಗೂ ಶಿಶುವಿನ ಮರಣ ಪ್ರಮಾಣ ತಗ್ಗಿಸಲು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕು. ಮಕ್ಕಳ ಪೌಷ್ಟಿಕ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ಪ್ರಕರಣಗಳು ನಡೆಯದಂತೆ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನಕ್ಕೆ ಭೂಮಿ ಗುರುತಿಸಿ ಗ್ರಾಮಸ್ಥರಿಗೆ ಅನುಕೂಲ ಒದಗಿಸಬೇಕು. ಗೋಶಾಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿಪಂ ಸಿಇಒ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಿಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಉಪ ವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ, ಜಿ.ಪಂ. ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts