More

    ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಆಗ್ರಹ

    ಕೊಪ್ಪಳ: ಹಿಂದುಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಪದಾಧಿಕಾರಿಗಳು ಬುಧವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ಸಿಗರು ಪದೇ ಪದೆ ಹಿಂದುಗಳಿಗೆ ಅವಮಾನ ಮಾಡುತ್ತಿದ್ದಾರೆ. ಹಿಂದು ಎಂದರೆ ಅಶ್ಲೀಲ, ಡಕಾಯತಿ ಎಂದೆಲ್ಲ ಶಾಸಕ ಸತೀಶ ಜಾರಕಿಹೊಳಿ ನಿಂದಿಸಿದ್ದಾರೆ. ಇದು ದೇಶದ ಕೋಟ್ಯಂತ ಹಿಂದುಗಳಿಗೆ ಮಾಡಿದ ಅವಮಾನ. ಹಿಂದುಗಳ ಮತಗಳು ಬೇಕು ಆದರೆ, ಹಿಂದುತ್ವ ಇವರಿಗೆ ಬೇಡವಾಗಿದೆ. ಪದೇ ಪದೆ ಈ ರೀತಿ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ. ಶೀಘ್ರ ಚುನಾವಣೆ ಬರಲಿದ್ದು, ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿ ಕಿಡಿ ಕಾರಿದರು.

    ಹಿಂದುಗಳಿಗೆ ಅವಮಾನ ಮಾಡಿರುವ ಜಾರಕಿಹೊಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಕ್ಷಣ ಬೇಷರತ್ ಕ್ಷಮೆ ಯಾಚಿಸಬೇಕು. ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಸುನಿಲ್ ಹೆಸರೂರು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷ ವಾಣಿಶ್ರೀ ಮಠದ, ಶೋಭಾ ನಗರಿ, ಪ್ರದೀಪ ಹಿಟ್ನಾಳ್, ಶಿವಯ್ಯ ಹ್ಯಾಟಿ ಇತರರಿದ್ದರು.

    ಹಿಂದು ಅರ್ಥ ಕುರಿತು ಚರ್ಚೆಗಳಾಗಲಿ: ಕೊಪ್ಪಳ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದುತ್ವ ಅಥವಾ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಬದಲಿಗೆ ಹಿಂದು ಪದದ ಅರ್ಥ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಗರು ಸುಮ್ಮನೆ ಅದನ್ನು ವಿವಾದ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಭಾಷಾ ತಜ್ಞರ ಸಮಿತಿ ರಚಿಸಿ ಪದ ಅರ್ಥ ಕುರಿತು ಚರ್ಚಿಸಲಿ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ವೈ.ಎನ್.ಗೌಡರ್ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಮೂಲಕ ಹಲವು ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಹಿಂದು ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಏನೆನ್ನುತ್ತಾರೆಂದು ಹೇಳಿದ್ದಾರೆ. ಅದರ ಹೊರತು ಬೇರೇನೂ ಮಾತನಾಡಿಲ್ಲ. ತಮ್ಮ ಹೇಳಿಕೆಗೆ ಬದ್ಧವಾಗಿದ್ದು, ತಪ್ಪೆಂದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಅದನ್ನು ವಿವಾದ ಮಾಡಿ ರಾಜಕೀಯ ಮಾಡಬಾರದು. ಭಾಷಾ ತಜ್ಞರ ಸಮಿತಿ ರಚಿಸಿ ಚರ್ಚೆ, ಸಮ್ಮೇಳನ, ಸಂಶೋಧನೆ ನಡೆಸಲಿ. ಸಮಿತಿ ಜಾರಕಿಹೊಳಿ ಹೇಳಿಕೆ ತಪ್ಪೆಂದು ವರದಿ ನೀಡಿದಲ್ಲಿ ಅವರು ಹೇಳಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದರು.

    ಸಂದರ್ಭ ಅನುಸಾರ ಮಾತಿನ ಅರ್ಥ ಬೇರೆ ಬೇರೆಯಾಗುತ್ತದೆ. ಒಂದೊಂದು ಭಾಷೆಯಲ್ಲಿ ಒಂದೊಂದು ಪದಕ್ಕೆ ಬೇರೆ ಬೇರೆ ಅರ್ಥವಿದೆ. ಆಯಾ ಸಮಯ, ಸಂದರ್ಭಕ್ಕೆ ತಕ್ಕಂತೆ ಮಾತನಾಡಿರಬಹುದು. ಅದು ಬಿಟ್ಟರೆ ಯಾವುದೇ ಧರ್ಮ, ಹಿಂದುತ್ವ, ಜನಾಂಗ ಉದ್ದೇಶಿಸಿ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ಜಾರಕಿಹೊಳಿ ಹೇಳಿಕೆ ವಿರೋಧಿಸಿರಬಹುದು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದರು. ಮುಖಂಡರಾದ ಟಿ.ರತ್ನಾಕರ, ಶಿವಪುತ್ರಪ್ಪ ಗುಮಗೇರಿ, ಯಮನೂರಪ್ಪ ಗೊರ್ಲೆಕೊಪ್ಪ, ರಾಮಣ್ಣ ಕಲ್ಲಣ್ಣನವರ, ಕೆ.ಎಸ್.ಮೈಲಾರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts