More

    ಗೋಶಾಲೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ; ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ

    ಕೊಪ್ಪಳ: ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ನೂತನ ಸರ್ಕಾರಿ ಗೋ ಶಾಲೆಯ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಜಿಲ್ಲಾ ಮಟ್ಟದ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.

    ಬಿಡಾಡಿ ದನಗಳ ಮಾಲಿಕರನ್ನು ಗುರುತಿಸುವ ಮತ್ತು ಮಾಲಿಕರಿಲ್ಲದ ಜಾನುವಾರುಗಳನ್ನು ಗೋಶಾಲೆಗಳಿಗೊಪ್ಪಿಸುವ ಕುರಿತು ಸೂಕ್ತ ಕ್ರಮವಹಿಸಬೇಕು. ಈ ಬಗ್ಗೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಮಾಲಿಕರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು. ರೇಬೀಸ್ ರೋಗ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಸೆಪ್ಟಂಬರ್‌ನಲ್ಲಿ ಪಶು ಇಲಾಖೆಯಿಂದ ಹಮ್ಮಿಕೊಳ್ಳುವ ರೇಬೀಸ್ ರೋಗ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿರುವ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರಸಭೆ, ಪುರಸಭೆ, ಪಪಂ. ತಾಪಂ ಹಾಗೂ ಗ್ರಾಪಂಗಳು ಸಹಕರಿಸಿ, ನಿಯಮಾನುಸಾರ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಗೋ ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪುಣ್ಯ ಕೋಟಿ ದತ್ತು ಯೋಜನೆ, ಜಾನುವಾರು ದತ್ತು ಕಾರ್ಯಕ್ರಮ, ಗೋಶಾಲೆಗಳಿಗೆ ದೇಣಿಗೆ ನೀಡುವ ಕಾರ್ಯಕ್ರಮ, ಹಸುವಿನ ಆಹಾರ ಪೂರೈಕಾ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ ದಾನಿಗಳನ್ನು ಗುರುತಿಸಲು ಜಿಲ್ಲೆಯ ಎಲ್ಲಾ ಖಾಸಗಿ ಗೋಶಾಲೆಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಗೋಶಾಲೆಗಳ ಪ್ರತಿನಿಧಿಗಳಿಗೆ ಸಲಹೆ ನೀಡಿದರು.

    ನರೇಗಾ ಒಗ್ಗೂಡಿಸುವಿಕೆ ಯೋಜನೆಗೆ ಒಳಪಡುವ ಬೇವೂರು ಗೋ ಶಾಲೆಗೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳನ್ನು ಜಿಪಂ ಸಹಯೋಗದೊಂದಿಗೆ ಕೈಗೊಳ್ಳಬೇಕು. ಗೋಶಾಲೆಗೆ ಬಿಡುಗಡೆಯಾದ ಸಂಪೂರ್ಣ ಅನುದಾನವನ್ನು ಗೋಶಾಲೆಗೆ ಅಗತ್ಯಕ್ಕನುಸಾರವಾಗಿ ಬಳಸಿಕೊಂಡು, ಈ ಗೋ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಬೇವೂರು ಸರ್ಕಾರಿ ಗೋಶಾಲೆಗೆ ಪ್ರಥಮ ಪ್ರಾಮುಖ್ಯತೆ ನೀಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಯವರು ಸೂಚನೆ ನೀಡಿದರು.

    ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ನಾಗರಾಜ್ ಮಾತನಾಡಿ, ಸರ್ಕಾರದ ಆದೇಶದಂತೆ 2022-23ನೇ ಸಾಲಿನಲ್ಲಿ ಮೈಸೂರಿನ ಪಿಂಜರಾಪೋಲ್ ಮತ್ತು ಇತರೇ ಗೋಶಾಲೆಗಳಿಗೆ ಸಹಾಯಾನುಧನ ಕಾರ್ಯಕ್ರಮದಡಿ ಜಿಲ್ಲೆಯ ಕೊಪ್ಪಳ ನಗರದ ಶ್ರೀ ಮಹಾವೀರ್ ಜೈನ್ ಗೋಶಾಲೆ, ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಧರ ಮುರಡಿ ಹಿರೇಮಠ ಗೋಶಾಲೆ, ಕುಷ್ಟಗಿ ತಾಲೂಕಿನ ಗುಡಿಕೆಲಕೇರಿ ಗ್ರಾಮದ ಶ್ರೀ ಜಯಮಾಲ ಜೈನ್ ಗೋಶಾಲೆ ಹಾಗೂ ಗಂಗಾವತಿ ತಾಲೂಕಿನ ಆನೆಗುಂದಿಯ ಶ್ರೀ ದುರ್ಗಾ ಮಾತಾ ಗೋಶಾಲಾ ಟ್ರಸ್ಟ್, ಈ ನಾಲ್ಕು ಖಾಸಗಿ ಗೋ ಶಾಲೆಗಳಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಈ ನಾಲ್ಕು ಗೋ ಶಾಲೆಯಲ್ಲಿನ ಜಾನುವಾರುಗಳಿಗೆ ಪ್ರತಿ ಜಾನುವಾರುವಿಗೆ ಪ್ರತಿ ದಿನಕ್ಕೆ 70 ರೂ.ರಂತೆ ಪ್ರತಿ ಗೋಶಾಲೆಗೆ ಗರಿಷ್ಠ 200 ಜಾನುವಾರುಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ.

    ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ 10 ಎಕರೇ ಜಮೀನಲ್ಲಿ ಸರ್ಕಾರಿ ಗೋಶಾಲೆಯನ್ನು ನಿರ್ಮಿಸಲಾಗುತ್ತಿದ್ದು, ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಹಾಗೂ ಉದ್ಘಾಟನೆಗೆ ಸಿದ್ದವಾಗುತ್ತಿದೆ. ಕನಕಗಿರಿ ತಾಲೂಕಿನ ಹುಲಿಹೈದರ ಹೋಬಳಿಯ ಕನಕಾಪುರ ಗ್ರಾಮದಲ್ಲಿ 20 ಎಕರೆ ಜಮೀನಲ್ಲಿ ಸರ್ಕಾರಿ ಗೋಶಾಲೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಭೂಮಂಜೂರಾತಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿವಿಧ ತಾಲೂಕು ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಗೋಶಾಲೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts