More

    ನಾಲ್ಕು ತಿಂಗಳ ಬಾಕಿ ವೇತನ ಪಾವತಿಸಿ: ಕೊಪ್ಪಳ ಡಿಸಿ ಕಚೇರಿ ಮುಂದೆ ಬಿಸಿಯೂಟ ನೌಕರರ ಪ್ರತಿಭಟನೆ

    ಕೊಪ್ಪಳ: ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ನಮಗೆ ನಾಲ್ಕು ತಿಂಗಳ ವೇತನ ಬರಬೇಕು. ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಹೋರಾಟ ಮಾಡಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಹೀಗಿದ್ದರೂ ವೇತನ ಬಿಡುಗಡೆ ಮಾಡುತ್ತಿಲ್ಲ. ಕನಿಷ್ಠ ವೇತನ, ಪಿಂಚಣಿ ಸೌಲಭ್ಯ, ಅಪಘಾತ ವಿಮೆ ಸೇರಿ ಇತರ ಸೌಲಭ್ಯ ಕಲ್ಪಿಸುತ್ತಿಲ್ಲ. ಈಗ ನೀಡುತ್ತಿರುವ ಗೌರವ ಧನವೂ ಸಾಕಾಗುತ್ತಿಲ್ಲ. ಬೋಚನಳ್ಳಿ ಶಾಲೆಯಲ್ಲಿ ಅಡುಗೆ ತಯಾರಿಸುವ ವೇಳೆ ಸುಡುವ ಅನ್ನದ ಗಂಜಿ ಮೈ ಮೇಲೆ ಬಿದ್ದು ದೇವಮ್ಮ ಎಂಬುವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಷ್ಟಕ್ಕೂ ಅಧಿಕಾರಿಗಳು ಅಥವಾ ಸರ್ಕಾರ ಧಾವಿಸುತ್ತಿಲ್ಲವೆಂದು ಆರೋಪಿಸಿದರು.

    ದೇವಮ್ಮಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜತೆಗೆ ಒಂದು ಲಕ್ಷ ರೂ.ಪರಿಹಾರ ನೀಡಬೇಕು. ನಾಲ್ಕು ತಿಂಗಳ ಬಾಕಿ ವೇತನ ತಕ್ಷಣ ಬಿಡುಗಡೆ ಮಾಡಬೇಕು. ಕೆಲಸದ ವೇಳೆ ಅಪಘಾತವಾದಲ್ಲಿ ಸರ್ಕಾರ ಜವಾಬ್ದಾರಿ ಹೊರಬೇಕು. ಕನಿಷ್ಠ ವೇತನ, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಿರ್ಗತಿಕ ಮಹಿಳೆಯರಿಗೆ ವಿವಿಧ ವಸತಿ ಯೋಜನೆಯಡಿ ಮನೆ, ನಿವೇಶನ ಮಂಜೂರು ಮಾಡಬೇಕು. ಶಾಲೆಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಸಬೇಕೆಂದು ಒತ್ತಾಯಿಸಿದರು. ಹೋರಾಟಗಾರರಾದ ಬಸವರಾಜ ಶೀಲವಂತರ, ಮುತ್ತು ಹಡಪದ, ನನ್ನೂಸಾಬ್ ನೀಲಿ, ನೌಕರರಾದ ಪುಷ್ಪಾ ಮೇಸ್ತ್ರಿ, ಲಲಿತಾ ಬೂದಗುಂಪಿ, ಖಾಜಾಬನಿ, ಸುಮಂಗಲಾ ಕೊತಬಾಳ, ಶಿವಮ್ಮ, ಪದ್ಮಾ ಹುಲಗಿ, ಸುಮಾ ಲಾಚನಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts