More

    ಕೊಪ್ಪಳ ಜಿಲ್ಲಾ ರಜತ ಮಹೋತ್ಸವಕ್ಕೆ ದಿನಗಣನೆ

    ಕೊಪ್ಪಳ: ಜಿಲ್ಲಾ ರಜತ ಮಹೋತ್ಸವದ ಮೊದಲ ದಿನ ಮಾರ್ಚ್ 10ರಂದು ಜಿಲ್ಲಾ, ತಾಲೂಕು ಕ್ರೀಡಾಂಗಣ ಹಾಗೂ ಸಾಹಿತ್ಯ ಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

    ಬೆಳಗ್ಗೆ ಮೆರವಣಿಗೆ: ಮಾ.10ರ ಬೆಳಗ್ಗೆ 10 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ರಜತ ಮಹೋತ್ಸವದ ಮೆರವಣಿಗೆ, ರಾಜ್ಯ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಚಾಲನೆ ನೀಡಲಿದ್ದಾರೆ. ಮೆರವಣಿಗೆ ತಾಲೂಕು ಕ್ರೀಡಾಂಗಣದಿಂದ ಸಾಲಾರ್‌ಜಂಗ್ ರಸ್ತೆ, ಗಡಿಯಾರ ಕಂಬ, ಜವಾಹರ್ ರೋಡ್, ಅಶೋಕ ವೃತ್ತ, ಕೇಂದ್ರೀಯ ಬಸ್ ನಿಲ್ದಾಣದ ಮಾರ್ಗವಾಗಿ ಗದಗ ರಸ್ತೆಯ ಬನ್ನಿಕಟ್ಟಿವರೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಮೋಜಿನ ಗೊಂಬೆ, ಹಗಲುವೇಷ, ಹಗಲು ವಾದನ, ನಂದಿಧ್ವಜ, ಕಣಿ ಹಲಗಿ ವಾದನ, ಕೋಲಾಟ, ವೀರಗಾಸೆ, ಲಂಬಾಣಿ ನೃತ್ಯ, ಹಲಗೆ ಮೇಳ, ಹೆಜ್ಜೆಮೇಳ, ಜಾಂಜಮೇಳ, ಮರಗಾಲು, ಜಗ್ಗಲಗಿ ಹಾಗೂ ಕಹಳೆ ಕಲಾವಿದರು ವಿವಿಧ ಕಲಾ ತಂಡಗಳು ಭಾಗಿಯಾಗಲಿವೆ.

    ಸಾಹಿತ್ಯ ಭವನ: ಸಾಹಿತ್ಯ ಭವನದ ತಿರುಳ್ಗನ್ನಡನಾಡು ವೇದಿಕೆಯಲ್ಲಿ ರಜತ ಮಹೋತ್ಸವ ನಿಮಿತ್ತ ಮಾ.10 ರಂದು ಬೆಳಗ್ಗೆ 10 ರಿಂದ 11 ರವರೆಗೆ ಸುಗಮ ಸಂಗೀತ, ಜಾನಪದ, ಹಿಂದುಸ್ಥಾನಿ ಸಂಗೀತ, ಸಿತಾರ ವಾದನ, ಭರತ ನಾಟ್ಯ ಹಾಗೂ ವಚನ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. 11 ರಿಂದ 01-30ರವರೆಗೆ ನಡೆಯಲಿರುವ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಉದ್ಘಾಟಿಸುವರು. ಪ್ರಾಚಾರ್ಯರಾದ ಡಾ ಶರಣಬಸಪ್ಪ ಕೋಲ್ಕಾರ ಅಧ್ಯಕ್ಷತೆ ವಹಿಸುವರು. 1.30 ರಿಂದ 2.30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾಟಕ (ಏಕ ಪಾತ್ರಾಭಿನಯ), ಚೌಡ್ಕಿ ಪದಗಳು, ಸುಗಮ, ಜಾನಪದ ಸಂಗೀತ, ತತ್ವ ಪದಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

    ಮಧ್ಯಾಹ್ನ 2.30 ರಿಂದ 4 ಗಂಟೆಯವರೆಗೆ ನಡೆಯಲಿರುವ ಮಹಿಳಾ ಗೋಷ್ಠಿಯನ್ನು ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಉದ್ಘಾಟಿಸುವರು. ಲೇಖಕಿ ಸಾವಿತ್ರಿ ಮುಜುಮದಾರ ಅಧ್ಯಕ್ಷತೆ ವಹಿಸುವರು. ಮಹಿಳಾ ಗೋಷ್ಠಿಯಲ್ಲಿ ಡಾ.ಸೋಮಕ್ಕ ಆಶಯ ನುಡಿ ಹೇಳುವರು. ಶೋಭಾ ಎಚ್ ಬಾಗಲಿ ಜಿಲ್ಲೆಯ ಕಲೆ ಮತ್ತು ಸಂಗೀತ ಕುರಿತು, ಡಾ ಪಿ.ಎಂ. ಪಾರ್ವತಿ ಆರೋಗ್ಯ, ಡಾ.ಶಿಲ್ಪ ದಿವಟರ್ ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿ , ಡಾ. ಗೀತಾ ಪಾಟೀಲ್ ಕೊಪ್ಪಳ ಜಿಲ್ಲೆಯ ಐತಿಹಾಸಿಕ ನೋಟ, ರಾಚಮ್ಮ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಬಂಧಕಾರ, ಗೌರಮ್ಮ ದೇಸಾಯಿ ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾಯ್ದೆಯ ಬಗ್ಗೆ ಮಾತನಾಡುವರು. ಸಂಜೆ 4 ರಿಂದ ರಾತ್ರಿ 9.10 ರವರೆಗೆ ಹಿಂದುಸ್ತಾನಿ ಸಂಗೀತ, ತಬಲಾ ಸೋಲೋ, ಸಮೂಹ ನೃತ್ಯ, ಹಾಸ್ಯರೂಪಕ, ಬಯಲಾಟದ ಪದಗಳು, ಜಾನಪದ ತತ್ವಗಳು, ನಾಟಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

    ಜಿಲ್ಲಾ ಕ್ರೀಡಾಂಗಣ: ಕೋಪಣಾಚಲ ವೇದಿಕೆಯಲ್ಲಿ ಕೊಪ್ಪಳ ಜಿಲ್ಲೆ ರಚನೆಗಾಗಿ ಹೋರಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11.30ರವರೆಗೆ ವಿವಿಧ ಕಲಾವಿದರಿಂದ ಸಮೂಹನೃತ್ಯ, ಯೋಗ ನೃತ್ಯ, ಸುಗಮ ಸಂಗೀತ, ಗೀ-ಗೀ ಪದಗಳು, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಬಾನ್ಸೂರಿ ವಾದನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ತಾಲೂಕು ಕ್ರೀಡಾಂಗಣ: ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆ, ರೈತ ಉತ್ಪಾದಕ ಕಂಪನಿಗಳ ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಮಾರಾಟ ಮಳಿಗೆಗಳ ಉದ್ಘಾಟನೆ ಸಮಾರಂಭ ಮಾರ್ಚ್ 10ರ ಬೆಳಗ್ಗೆ 11.30ಕ್ಕೆ ನಡೆಯಲಿದೆ. ವಿಶೇಷ ಆಕರ್ಷಣೀಯ ಫಲಪುಷ್ಪ ಪ್ರದರ್ಶನ, ಕೃಷಿ-ಶಿಲ್ಪಕಲಾ-ಚಿತ್ರಕಲಾ, ಛಾಯಾಚಿತ್ರ ಮತ್ತು ಕರಕುಶಲ ವಸ್ತು ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts