More

    ಲಕ್ಷ ವೃಕ್ಷೋತ್ಸವಕ್ಕೆ ಗವಿಶ್ರೀ ಚಾಲನೆ

    ಕೊಪ್ಪಳ: ದೇವರು ನಮಗೆ ಸುಂದರ ನಿಸರ್ಗ ನೀಡಿದ್ದಾನೆ. ನಾವು ಪ್ರಕೃತಿಗೆ ಏನಾದರೂ ನೀಡಬೇಕೆಂದರೆ ಗಿಡ-ಮರಗಳನ್ನು ಬೆಳೆಸಬೇಕೆಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ನಗರದ ಗವಿಮಠ ಆವರಣದಲ್ಲಿ ಲಕ್ಷ ವೃಕ್ಷೋತ್ಸವ ಕಾಯಕ್ರಮ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

    ವಿದೇಶಕ್ಕೆ ಹೋಲಿಸಿದರೆ, ನಮ್ಮ ದೇಶದಲ್ಲಿ ಗಿಡಮರಗಳನ್ನು ಬೆಳೆಸುವುದು ಕಡಿಮೆ. ನಿಜವಾದ ದೇವರಿರುವುದು ಪ್ರಕೃತಿಯಲ್ಲಿ. ಪರಿಸರ ನಮಗೆ ಬೇಕಾದ್ದೆಲ್ಲವನ್ನು ನೀಡಿದೆ. ಗಿಡಗಳನ್ನು ನೆಡುವ ಮೂಲಕ ನಾವು ಅದನ್ನು ಇನ್ನಷ್ಟು ಸುಂದರವಾಗಿಸಬಹುದು. ಇದರಿಂದ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ಎಲ್ಲರೂ ತಮ್ಮ ಕೈಲಾದಷ್ಟು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

    ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ತಮ್ಮ ನಿವಾಸದಿಂದಲೇ ಆನ್‌ಲೈನ್ ಮೂಲಕ ಮಾತನಾಡಿ, ಗವಿಶ್ರೀಗಳು ಈಗಾಗಲೇ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಹಿರೇಹಳ್ಳ ಪುನಶ್ಚೇತನಗೊಳಿಸಿ ರೈತರಿಗೆ ಬಹುದೊಡ್ಡ ಉಪಕಾರ ಮಾಡಿದ್ದಾರೆ. ಇದೀಗ ಲಕ್ಷ ಸಸಿಗಳನ್ನು ನೆಟ್ಟು ಈ ನಾಡಿನಲ್ಲಿ ಹಸಿರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಇವರ ನಡೆ ಇತರರಿಗೆ ಮಾದರಿ ಎಂದರು.

    ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ನಿವಾಸದಲ್ಲೇ ಗಿಡನೆಟ್ಟು ಮಾತನಾಡಿ, ಪೂಜ್ಯರ ಕೈಂಕರ್ಯ ಮತ್ತು ಸತ್ಕಾರ್ಯಕ್ಕೆ ಸದಾ ಕೈಜೋಡಿಸುತ್ತೇನೆ. ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವಂತಹ ಸಮಾಜ ಮುಖಿ ಕಾರ್ಯ ನಿಜವಾಗಿಯೂ ಅರ್ಥಪೂರ್ಣ ಎಂದರು. ಶಾಸಕರಾದ ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಪಾಟೀಲ್ ಬಯ್ಯಪುರ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮಾತನಾಡಿದರು.

    ವಿವಿಧೆಡೆ ಗಿಡ ನೆಟ್ಟ ಗಣ್ಯರು, ಅಧಿಕಾರಿಗಳು
    ಗವಿಮಠದಲ್ಲಿ ಅಷ್ಟೇ ಅಲ್ಲದೆ ವಿವಿಧೆಡೆ ಗಣ್ಯರು ಹಾಗೂ ಅಧಿಕಾರಿಗಳು ತಮ್ಮ ನಿವಾಸ, ಕಚೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ಲಕ್ಷ ವೃಕ್ಷೋತ್ಸವದಲ್ಲಿ ಪಾಲ್ಗೊಂಡರು. ಸಂಸದ ಸಂಗಣ್ಣ ಕರಡಿ ತಮ್ಮ ನಿವಾಸದಲ್ಲಿ, ಜಿಪಂ ಅಧ್ಯಕ್ಷ ಎಚ್.ವಿಶ್ವನಾಥರಡ್ಡಿ, ಡಿಸಿ ಎಸ್.ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಜಿ.ಸಂಗೀತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ತಮ್ಮ ಕಚೇರಿ ಆವರಣದಲ್ಲಿ ಹಾಗೂ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಹ ಗಿಡಗಳನ್ನು ನೆಡಲಾಯಿತು. ಎಲ್ಲ ಗಣ್ಯರು, ಅಧಿಕಾರಿಗಳು ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ಗವಿಮಠದ ಯುಟ್ಯೂಬ್ ಹಾಗೂ ಫೇಸ್‌ಬುಕ್ ಜಾಲತಾಣಗಳಲ್ಲಿ ಸಹ ಜನರಿಗೆ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts