ವಿ.ಕೆ.ರವೀಂದ್ರ ಕೊಪ್ಪಳ
ಜಿಲ್ಲಾ ಕೇಂದ್ರ ಕೊಪ್ಪಳದಿಂದ ರೈಲ್ವೆ ಸೇವೆಗಳು ಹೆಚ್ಚಳವಾಗಿವೆ. ಆದರೆ, ಅದಕ್ಕೆ ತಕ್ಕಂತೆ ನಿಲ್ದಾಣಗಳಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಜಿಲ್ಲೆಯ ವಾಣಿಜ್ಯ ನಗರಿ ಗಂಗಾವತಿ, ಕಾರಟಗಿಗೆ ರೈಲ್ವೆ ಸೇವೆ ದೊರೆತಿದೆ. ಎರಡು ದಶಕಗಳ ಹಿಂದೆಯೇ ಘೋಷಣೆಯಾದ ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಸಂಪರ್ಕಿಸುವ ಯೋಜನೆಯೂ ಇನ್ನೂ ಈಡೇರಿಲ್ಲ. ಕಳೆದೊಂದು ದಶಕದಲ್ಲಿ ರೈಲ್ವೆ ಯೋಜನೆಗಳು ಚುರುಕುಗೊಂಡಿದ್ದು, ಬ್ರಿಟಿಷ್ ಕಾಲದಲ್ಲಿ ಘೋಷಣೆಯಾಗಿದ್ದ ಗದಗ-ವಾಡಿ ರೈಲ್ವೆ ಯೋಜನೆ ಸದ್ಯ ಅನುಷ್ಠಾನಗೊಳ್ಳುತ್ತಿದೆ. ಇತ್ತ ಮುನಿರಾಬಾದ್-ಮೆಹಬೂಬ್ ನಗರ ಯೋಜನೆಯಡಿ ಸಿಂಧನೂರುವರೆಗೆ ಕಾಮಗಾರಿ ನಡೆಯುತ್ತಿದೆ. ಹೊಸದಾಗಿ ಆಲಮಟ್ಟಿ- ಗಂಗಾವತಿ-ದರೋಜಿ ರೈಲ್ವೆ ಕಾಮಗಾರಿ ಸರ್ವೇ ಕಾರ್ಯ ನಡೆಯುತ್ತಿದೆ. ಯೋಜನೆಯಡಿ ಕನಕಗಿರಿ-ಕುಷ್ಟಗಿ-ಇಳಕಲ್ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟೆವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಅಸ್ತು ಅಂದಿರುವುದು ಆಶಾದಾಯಕ ಬೆಳವಣಿಗೆ.
ಹುಬ್ಬಳ್ಳಿಯಿಂದ ಗುಂತಕಲ್ ವರೆಗಿನ ಹಳಿ ಡಬಲಿಂಗ್ ಕಾರ್ಯ ಮುಕ್ತಾಯಗೊಂಡಿದೆ. ವಿದ್ಯುತ್ ರೈಲುಗಳ ಓಡಾಟ ಆರಂಭಿಸಲಾಗಿದೆ. ಇದರಿಂದ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಓಡಾಟದಲ್ಲಿ ಹೆಚ್ಚಳವಾಗಿದೆ. ಆದರೆ, ಇದಕ್ಕೆ ತಕ್ಕಂತೆ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಕೊಪ್ಪಳ ಹಾಗೂ ಭಾಗ್ಯನಗರದ ನಡುವೆ ರೈಲ್ವೆ ನಿಲ್ದಾಣ ಚಾಚಿಕೊಂಡಿದೆ. ಕೊಪ್ಪಳ ನಗರ ಮತ್ತು ಭಾಗ್ಯನಗರ ಪಟ್ಟಣ ಸಂಪರ್ಕಿಸಲು ಮೇಲ್ಸೇತುವೆ ನಿರ್ಮಿಸಲಾಗಿದೆ. ಆಚಿಂದೀಚೆ ಓಡಾಡಲು ಪ್ರಯಾಣಿಕರು ಹಾಗೂ ಸರಕು ಸಾಗಣೆ ವಾಹನಗಳಿಗೆ ಸಾಕಷ್ಟು ಅಡೆ-ತಡೆಗಳು ಎದುರಾಗುತ್ತಿವೆ. ಕೊಪ್ಪಳ ಭಾಗದಲ್ಲಿ ನಿಲ್ದಾಣವಿದ್ದು, ಹೋಗುವ ಮತ್ತು ಬರುವ ಪ್ರಯಾಣಿಕರು ಇದೇ ಮಾರ್ಗ ಬಳಸುತ್ತಿದ್ದಾರೆ. ಸದ್ಯ ಎರಡು ಪ್ಲಾಟ್‌ಫಾರ್ಮ್‌ಗಳಿದ್ದು, ಎರಡನೇ ಪ್ಲಾಟ್‌ಫಾಮ್‌ಂ ಭಾಗ್ಯನಗರ ಭಾಗದಲ್ಲಿದೆ.
ಭಾಗ್ಯನಗರ ಮಾರ್ಗವಾಗಿ ಬರುವ ಪ್ರಯಾಣಿಕರು ಮೇಲ್ಸತುವೆ ದಾಟಿಕೊಂಡು ಕೊಪ್ಪಳಕ್ಕೆ ತೆರಳಿ ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಬರಬೇಕಿದೆ. ಟಿಕೆಟ್ ಕೊಂಡ ಬಳಿಕ ಎಸ್ಕಲೇಟರ್ ಬಳಸಿ ಎರಡನೇ ಪ್ಲಾಟ್‌ಫಾರ್ಮ್ ತಲುಪುವ ಸ್ಥಿತಿಯಿದೆ. ಸರಕು ಸಾಗಣೆ ರೈಲುಗಳು ಭಾಗ್ಯನಗರ ಪಟ್ಟಣ ಭಾಗದಲ್ಲಿಯೇ ಬರುವುದರಿಂದ ಭಾರಿ ಗಾತ್ರದ ವಾಹನಗಳು ಮೇಲ್ಸೇತುವೆಯನ್ನು ಬಳಸಿ ಸಂಚರಿಸುತ್ತಿವೆ. ಇದರಿಂದ ಆ ಭಾಗದ ನಿವಾಸಿಗಳಿಗೆ ಧೂಳು ಹಾಗೂ ಶಬ್ದ ಮಾಲಿನ್ಯದಿಂದ ಕಿರಿಕಿರಿ ಉಂಟಾಗುತ್ತಿದೆ.
ಪ್ರಯಾಣಿಕರಿಗೆ ತೊಂದರೆ
ಕೊಪ್ಪಳ ಭಾಗದಲ್ಲಿ ನಿಲ್ದಾಣ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರಂತೆ ಭಾಗ್ಯನಗರ ಭಾಗದಲ್ಲಿ ರೈಲ್ವೆ ಇಲಾಖೆಗೆ ಸೇರಿದ ಭೂಮಿಯಿದ್ದು, ಅಭಿವೃದ್ದಿ ಪಡಿಸದೆ ಹಾಗೆಯೆ ಬಿಡಲಾಗಿದೆ. ಜಾಲಿ ಬೆಳೆದು ಕ್ರಿಮಿ-ಕೀಟಗಳ ಕಾಟ ಹೆಚ್ಚಳವಾಗಿದೆ. ಮೇಲ್ಸೇತುವೆಗೆ ಸೇವಾ ರಸ್ತೆ ನಿರ್ಮಿಸಿದ್ದರೂ ಬೀದಿದೀಪ ಅಳವಡಿಸಿಲ್ಲ. ಹೀಗಾಗಿ ರಾತ್ರಿ ಸಮಯದಲ್ಲಿ ಪ್ರಯಾಣಿಕರು ಓಡಾಡುವುದು ಕಷ್ಟವಾಗುತ್ತಿದೆ. ಹತ್ತಾರು ಹೆಜ್ಜೆಗಳಲ್ಲಿ ಪಟ್ಟಣವಿದ್ದರೂ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಕೊಪ್ಪಳಕ್ಕೆ ತೆರಳಿ ಮೇಲ್ಸೇತುವೆ ಮಾರ್ಗವಾಗಿ ಪಟ್ಟಣಕ್ಕೆ ತೆರಳಬೇಕಾದ ದುಸ್ಥಿತಿ ಎದುರಾಗಿದೆ.
ಅಭಿವೃದ್ಧಿಗಿದೆ ಅವಕಾಶ: ಭಾಗ್ಯನಗರ ಭಾಗದಲ್ಲಿ ಇಲಾಖೆಗೆ ಸೇರಿದ ಜಾಗವಿದ್ದು, ಈ ಭಾಗದಲ್ಲಿ ಪ್ರತ್ಯೇಕ ಪ್ಲಾಟ್‌ಫಾರ್ಮ್ ನಿರ್ಮಿಸಬೇಕಿದೆ. ಟಿಕೆಟ್ ಕೌಂಟರ್, ವಾಹನಗಳ ಪಾರ್ಕಿಂಗ್, ಸೇವಾ ರಸ್ತೆ ಅಭಿವೃದ್ಧಿಪಡಿಸಬೇಕೆಂಬುದು ಪ್ರಯಾಣಿಕರ ಬೇಡಿಕೆಯಾಗಿದೆ. ಇದರಿಂದ ಉಭಯ ಪಟ್ಟಣಗಳ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದ್ದು, ರೈಲ್ವೆ ನಿಲ್ದಾಣವೂ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಯೋಚಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಭಾಗ್ಯನಗರ ಭಾಗದಲ್ಲಿ ಪ್ಲಾಟ್‌ಫಾರ್ಮ್, ಟಿಕೆಟ್ ಕೌಂಟರ್ ಸೇರಿ ಇತರ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಶೀಘ್ರವೇ ರೈಲ್ವೆ ಅಧಿಕಾರಿಗಳ ಸಭೆ ನಡೆಯಲಿದೆ. ಬೇಡಿಕೆಗಳ ಕುರಿತು ಪ್ರಸ್ತಾವನೆ ಸಲ್ಲಿಸಿ ಅನುಷ್ಠಾನಕ್ಕೆ ಯತ್ನಿಸಲಾಗುವುದು.
| ಸಂಗಣ್ಣ ಕರಡಿ ಕೊಪ್ಪಳ ಸಂಸದ
ಕೊಪ್ಪಳ-ಭಾಗ್ಯನಗರ ಹೊಂದಿಕೊಂಡಿದ್ದು, ರೈಲ್ವೆ ನಿಲ್ದಾಣ ವಿಭಾಗಿಸುತ್ತದೆ. ಭಾಗ್ಯನಗರ ಭಾಗದಲ್ಲಿ ಇಲಾಖೆಗೆ ಸೇರಿದ ಜಾಗವಿದೆ. ಇಲ್ಲಿಯೇ ಪ್ಲಾಟ್‌ಫಾರ್ಮ್, ಟಿಕೆಟ್ ಕೌಂಟರ್, ವಾಹನಗಳ ಪಾರ್ಕಿಂಗ್, ಸೇವಾ ರಸ್ತೆ ಅಭಿವೃದ್ಧಿಪಡಿಸಬೇಕಿದೆ. ಇದರಿಂದ ಎರಡೂ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
| ಕೆ.ಎಸ್.ಗುಪ್ತಾ ಭಾಗ್ಯನಗರ ನಿವಾಸಿ