More

    ಮೂರು ತಿಂಗಳ ವೇತನ ಪಾವತಿಸುವಂತೆ ಬಿಸಿಯೂಟ ನೌಕರರ ಒಕ್ಕೂಟ ಒತ್ತಾಯ

    ಕೊಪ್ಪಳ: ಮೂರು ತಿಂಗಳ ವೇತನ ಪಾವತಿಗೆ ಒತ್ತಾಯಿಸಿ ಜಿಲ್ಲಾ ಬಿಸಿಯೂಟ ನೌಕರರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಕರೊನಾದಿಂದ ಎಲ್ಲ ವರ್ಗದವರು ಕಷ್ಟಕ್ಕೀಡಾಗಿದ್ದು, ನಾವು ಅದಕ್ಕೆ ಹೊರತಾಗಿಲ್ಲ. ನಮಗೆ ತಿಂಗಳಿಗೆ 2-3ಸಾವಿರ ರೂ. ವೇತನ ನೀಡಲಾಗುತ್ತಿದೆ. ಶಾಲೆಗಳು ಬಂದ್ ಆಗಿದ್ದರಿಂದ ಕೆಲಸ, ಸಂಬಳ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ಆದರೂ, ಸರ್ಕಾರ ಈವರೆಗೆ ಪರಿಹಾರ ನೀಡಿಲ್ಲ. ಕನಿಷ್ಠ ವೇತನವನ್ನೂ ಜಾರಿ ಮಾಡುತ್ತಿಲ್ಲ. ಸದ್ಯ ಮೂರು ತಿಂಗಳ ವೇತನ ಬಿಡುಗಡೆ ಮಾಡಿದ್ದು, ಅದು ಸಹ ನಮ್ಮ ಕೈ ಸೇರಿಲ್ಲವೆಂದು ನೌಕರರು ಆರೋಪಿಸಿದರು.

    ಬಾಕಿ ವೇತನ ಬಿಡುಗಡೆ ಮಾಡಬೇಕು. ಲಾಕ್‌ಡೌನ್ ಪರಿಹಾರವಾಗಿ ಪ್ರತಿಯೊಬ್ಬರಿಗೆ 5 ಸಾವಿರ ರೂ. ನೀಡಬೇಕು. ಸಮವಸ್ತ್ರ, ಅಡುಗೆ ತಯಾರಿಕೆ ವೇಳೆ ರಕ್ಷಣಾ ಸಾಮಗ್ರಿ ವಿತರಿಸಬೇಕು. ಕನಿಷ್ಠ ವೇತನ ಜಾರಿ ಮಾಡಬೇಕು. ನಿವೃತ್ತಿ ನಂತರ 2 ಲಕ್ಷ ರೂ. ಇಡಿಗಂಟು, ಪಿಂಚಣಿ ಸೌಲಭ್ಯ ಒದಗಿಸಬೇಕು. ಸೇವಾ ಭದ್ರತೆ, ವಿಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಉಮೇಶ ಪೂಜಾರ್‌ಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಬಸವರಾಜ ಶೀಲವಂತರ್,ಶಿವಪ್ಪ ಹಡಪದ, ಅವರಗೆರೆ ಚಂದ್ರು, ಬಿಸಿಯೂಟ ತಯಾರಕರಾದ ಪುಷ್ಪಾ, ನಿರ್ಮಲಾ, ಸುನಿತಾ, ಪ್ರೇಮಾ, ನೀಲಮ್ಮ, ರೇಣುಕಾ, ಸರೋಜಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts