More

    ಸಿಎಂ ಆಗಲು ಜನಾಶೀರ್ವಾದ ಬೇಕು: ಎಚ್.ಡಿ.ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್

    ಕೊಪ್ಪಳ: ಮುಂದಿನ ಸಿಎಂ ನಾನೇ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗೆಂದ ಮಾತ್ರಕ್ಕೆ ಆಗಲು ಸಾಧ್ಯನಾ ? ಸಿಎಂ ಆಗಲು ಜನಾಶೀರ್ವಾದ ಬೇಕು. ನಾವೇ ಹೋಗಿ ಖುರ್ಚಿ ಮೇಲೆ ಕೂರಲು ಆಗಲ್ಲ. ಶಿಕ್ಷಕರ ಮತ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನದಲ್ಲಿದೆ ? ಅಂಥ ಪಾರ್ಟಿ ಅಧಿಕಾರಕ್ಕೆ ಬರುತ್ತಾ ? ಸದ್ಯ ಜೆಡಿಎಸ್ ಪರಿಸ್ಥಿತಿ ನೋಡಿದರೆ ಯಾರು ಸಿಎಂ ಆಗುತ್ತಾರೆಂದು ನೀವೇ ಯೋಚಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ತಾಲೂಕಿನ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರನ್ನುದ್ದೇಶಿಸಿ ಹೇಳಿದರು. ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿಲ್ಲ. ಬಿಜೆಪಿ ಆಪರೇಷನ್ ಕಮಲ ನಡೆಸಿ ಸರ್ಕಾರ ಬೀಳಿಸುತ್ತಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದರೆಂದು ಹೇಳುವ ಇವರು ಮಾಡುತ್ತಿರುವುದೇನು ? ಕರ್ನಾಟಕ, ಮಧ್ಯಪ್ರದೇಶದಲ್ಲಿನ ಸರ್ಕಾರ ಪತನವಾಗಿದ್ದು ಹೇಗೆ ? ಪಾಪದ ಹಣದಲ್ಲಿ ಶಾಸಕರನ್ನು ಖರೀದಿಸುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರವಿದೆ. ಸಿಬಿಐ, ಇಡಿ ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೇರುತ್ತಿದೆ ಎಂದು ಟೀಕಿಸಿದರು.

    ಯಾರಿಂದ ತನಗೆ ತೊಂದರೆ ಇದೆಯೋ ಅಂಥವರನ್ನು ಬಿಜೆಪಿ ಟಾರ್ಗೆಟ್ ಮಾಡಿ, ತನಿಖಾಸ್ತ್ರ ಪ್ರಯೋಗಿಸುತ್ತಿದೆ. ಚಿದಂಬರಂ, ರಾಹುಲ್ ಗಾಂಧಿ, ಸೋನಿಯಾ ಹಾಗೂ ನನ್ನ ಮೇಲೆ ಇಡಿ ಅಸ್ತ್ರ ಪ್ರಯೋಗಿಸಲಾಗಿದೆ. ನಿರಂತರ ನೋಟಿಸ್ ನೀಡಿ ಬಿಜೆಪಿಗರು ಕಿರುಕುಳ ಕೊಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಸರ್ಕಾರ ಪತನ ಮಾಡುತ್ತಿದೆ. ಈ ಹಿಂದೆ ಮುರುಗೇಶ ನಿರಾಣಿ ಸರ್ಕಾರ ರಚಿಸುತ್ತೇವೆಂದು ಹೇಳಿದ್ದರು. ಅದಂತೆ ಈಗ ನಡೆಯುತ್ತಿದೆ. ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ವರ್ಗಾವಣೆ ದಂಧೆ ನಡೆಯುತ್ತಿದ್ದು, ಖಾನಾವಳಿಯಲ್ಲಿ ಖಾದ್ಯಗಳಿಗೆ ದರ ನಿಗದಿಪಡಿಸಿದಂತೆ ಹುದ್ದೆಗಳ ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಅಗ್ನಿಪಥ ಯೋಜನೆ ಮೂಲಕ ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳಲು ಆ ಪಕ್ಷ ಸಂಚು ಮಾಡಿದೆ. ಮೊದಲು ಬಿಜೆಪಿ ನಾಯಕರು ತಮ ಮಕ್ಕಳನ್ನು ಅಗ್ನಿಪಥ ಯೋಜನೆಯಡಿ ಕೆಲಸಕ್ಕೆ ಸೇರಿಸಲಿ.
    | ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

    ಮುನಿಸು ಬಹಿರಂಗ
    ಖಾಸಗಿಯಾಗಿ ಒಂದೇ ಕಾರ್ಯಕ್ರಮಕ್ಕೆ ತೆರಳಿದರೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪ್ರತ್ಯೇಕ ವಿಮಾನಗಳಲ್ಲಿ ಆಗಮಿಸುವ ಮೂಲಕ ಇಬ್ಬರ ನಡುವಿನ ಮುನಿಸು ಬಹಿರಂಗವಾಯಿತು. ಸುದ್ದಿಗಾರರೊಂದಿಗೆ ಮಾತನಾಡುವಾಗ ಡಿಕೆಶಿ ಆಗಮಿಸುತ್ತಲೇ ಸಿದ್ದರಾಮಯ್ಯ ನಿಲ್ದಾಣದಿಂದ ಕಾಲ್ಕಿತ್ತರು. ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಂಗಡಿಗರು ಅವರೊಟ್ಟಿಗೆ ತೆರಳಿದರು. ನಂತರ ಬಂದ ಶಿವಕುಮಾರ್ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜತೆ ಕೆಲ ಹೊತ್ತು ಚರ್ಚೆ ನಡೆಸಿ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts