More

    ಮನೆ ಮನೆಗೆ ಪಡಿತರ ವಿತರಣೆ

    ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿಕೆ | ಅಧಿಕಾರಿಗಳೊಂದಿಗೆ ಸಭೆ

    ಕೊಪ್ಪಳ: ಜಿಲ್ಲೆಯಲ್ಲಿ ನಗರ ಪ್ರದೇಶದ ಪಡಿತರ ಚೀಟಿದಾರರಿಗೆ ಮನೆ ಮನೆಗೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೊನಾ ಅಂಗವಾಗಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಸಭೆ ನಡೆಸಿದ ಬಳಿಕ ಮಾಧ್ಯದವರಿಗೆ ಮಾಹಿತಿ ನೀಡಿ ಮಂಗಳವಾರ ಮಾತನಾಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಸಮಸ್ಯೆ ಆಗದಂತೆ ಕೇಂದ್ರ ಸರ್ಕಾರ ಮೂರು ತಿಂಗಳ ಯೋಜನೆ ಘೋಷಿಸಿದೆ. ಸದ್ಯ ಪಡಿತರ ವಿತರಣೆ ನಡೆದಿದ್ದು, ಅಲ್ಲೆಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ನಗರ ಪ್ರದೇಶದಲ್ಲಿನ ಪಡಿತರ ಚೀಟಿದಾರರಿಗೆ ಮನೆ ಮನೆಗೆ ಪಡಿತರ ಹಂಚಿಕೆ ಮಾಡಲು ನಿರ್ಧರಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ನ್ಯಾಯ ಬೆಲೆ ಅಂಗಡಿಗಳನ್ನು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ತೆರೆದು ವಿತರಿಸಲಾಗುವುದು. ಇದರಿಂದ ಜನ ಮುಗಿಬಿದ್ದು ಕೊಳ್ಳುವುದು ತಪ್ಪಲಿದೆ. ಬಡವರು, ನಿರ್ಗತಿಕರು, ಕಾರ್ಮಿಕ ವರ್ಗದವರಲ್ಲಿ ಪಡಿತರ ಚೀಟಿ ಇಲ್ಲದಿದ್ದರೂ ಅವರಿಗೆ ಕರೊನಾ ತುರ್ತು ಪರಿಸ್ಥಿತಿ ಮುಗಿಯುವವರೆಗೂ ಉಚಿತವಾಗಿ ಪಡಿತರ ನೀಡಲಾಗುವುದು ಎಂದು ಭರವಸೆ ನೀಡಿದರು.

    ನಮ್ಮ ಜಿಲ್ಲೆಯಲ್ಲಿ ಕರೊನಾ ಖಚಿತ ಪ್ರಕರಗಳು ಪತ್ತೆಯಾಗಿಲ್ಲ. ಆದರೆ, ನೆರೆಯ ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ನಾವು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಅಂತ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಕೇಂದ್ರ, ರಾಜ್ಯ ಸರ್ಕಾರಗಳು ನೀಡುವ ಸೂಚನೆ ತಪ್ಪದೇ ಪಾಲಿಸಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿ ಇತರರು ನಮಗಾಗಿ ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಿ, ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಜನಪ್ರತಿನಿಧಿಗಳು ಎಲ್ಲರೂ ಪಕ್ಷಾತೀತವಾಗಿ ಕರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

    ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಢೇಸುಗೂರು, ಜಿಪಂ ಅಧ್ಯಕ್ಷ ಎಚ್.ವಿಶ್ವನಾಥರಡ್ಡಿ, ಡಿಸಿ ಪಿ.ಸುನಿಲ್ ಕುಮಾರ್, ಜಿಪಂ ಸಿಇಒ ರಘುನಂದನ್‌ಮೂರ್ತಿ, ಎಡಿಸಿ ಎಂ.ಪಿ.ಮಾರುತಿ, ಎಸ್ಪಿ ಜಿ.ಸಂಗೀತಾ ಇತರರು ಇದ್ದರು.

    ಹಣ ಸುಲಿಗೆ ಮಾಡಿದರೆ ಕ್ರಮ : ಕರೊನಾ ಅಂಗವಾಗಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬೇರೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇದನ್ನೇ ನೆಪ ಮಾಡಿ ಅಧಿಕ ಸುಲಿಗೆ ಮಾಡಬಾರದು. ದಿನಸಿ, ತರಕಾರಿ, ಹಣ್ಣುಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಂಡಿದ್ದು, ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಡಿಸಿಎಂ ಸವದಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts