More

    ಸರ್ಕಾರಿ ಯೋಜನೆಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲು ಸಚಿವ ಆನಂದ ಸಿಂಗ್ ಸೂಚನೆ

    ಕೊಪ್ಪಳ: ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಬ್ಯಾಂಕ್‌ಗಳು ಸಾಲ ನೀಡದೆ ಸತಾಯಿಸುತ್ತವೆ. ಸರ್ಕಾರಿ ಯೋಜನೆಗಳಿಗೆ ಕಡ್ಡಾಯವಾಗಿ ಲೋನ್ ನೀಡುವಂತೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲು ಸೂಚಿಸಲಾಗುವುದೆಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಭರವವೆ ನೀಡಿದರು.

    ನಗರದಲ್ಲಿ ಪಿಎಂ ಆವಾಸ್ ಯೋಜನೆಯಡಿ ಶುಕ್ರವಾರ ಕೊಳಗೇರಿ ನಿವಾಸಿಗಳಿಗೆ ಮಂಜೂರಾದ 402 ಮನೆಗಳ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸರ್ಕಾರ ಸರ್ವರಿಗೂ ಸೂರು ದೊರಕಿಸಲು ಯೋಜನೆ ಹಾಕಿಕೊಂಡಿದೆ. ಕೊಳಗೇರಿ ನಿವಾಸಿಗಳಿಗೆ ಮನೆಕಟ್ಟಿಕೊಳ್ಳಲು ಅನುಕೂಲವಾಗಲೆಂದು ಮನೆ ಮಂಜೂರು ಮಾಡಲಾಗಿದೆ. ಫಲಾನುಭವಿಗಳು ವಂತಿಕೆ ಕಟ್ಟಬೇಕಿದ್ದು, ಅವರು ಬಡವರು ಇರುವ ಕಾರಣ ಸಮಸ್ಯೆಯಾಗುತ್ತದೆಂದು ಹೇಳುತ್ತಿದ್ದಿರಿ. ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳೋಣ. ಆದರೆ, ಬ್ಯಾಂಕಿನಿಂದ ಸಾಲ ಪಡೆಯುವಲ್ಲಿ ಸಮಸ್ಯೆಯಾಗುತ್ತಿರುವುದು ಗಮನಕ್ಕಿದೆ. ಜಿಲ್ಲಾಧಿಕಾರಿ ಬ್ಯಾಂಕ್ ಅಧಿಕಾರಿಗಳಿಗೆ ಸರ್ಕಾರಿ ಯೋಜನೆಗಳಿಗೆ ಕಡ್ಡಾಯವಾಗಿ ಲೋನ್ ನೀಡುವಂತೆ ಸೂಚಿಸಿ. ನೀಡದ ಬ್ಯಾಂಕ್‌ಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ ಎಂದರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ದೇಶದ ಪ್ರತಿಯೊಂದು ಕುಟುಂಬಕ್ಕೆ ಸೂರು ಕಲ್ಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ಪಿಎಂ ಆವಾಸ್ ಯೋಜನೆಯಡಿ ಮನೆಗಳನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ರಾಜ್ಯ ಸರ್ಕಾರವೂ ಈ ವರ್ಷದ ಬಜೆಟ್‌ನಲ್ಲಿ ಮನೆ ಮಂಜೂರು ಮಾಡಿದೆ. ನಗರಸಭೆಯಲ್ಲಿ ಲಭ್ಯ ಅನುದಾನ ಬಳಸಿ ಫಲಾನುಭವಿಗಳ ವಂತಿಕೆ ಹಣವನ್ನು ಕಟ್ಟಿದಲ್ಲಿ ಅನುಕೂಲವಾಗಲಿದೆ ಎಂದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಎಸ್ಸೆಸ್ಟಿ ಫಲಾನುಭವಿಗಳು 68ಸಾವಿರ, ಇತರರು 90ಸಾವಿರ ರೂ. ವಂತಿಕೆ ಕಟ್ಟಬೇಕು. ಆದರೆ, ಬಡವರಿಗೆ ತೊಂದರೆಯಾಗುವ ಕಾರಣ ಬಹಳಷ್ಟು ಜನರು ಮನೆ ಕಟ್ಟಿಕೊಳ್ಳುತ್ತಿಲ್ಲ. ಸರ್ಕಾರ ವಂತಿಕೆ ಹಣ ಪಡೆಯಲು ಬೇರೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ನಗರಸಭೆ ಉಪಾಧ್ಯಕ್ಷ ಜರೀನಾ ಬೇಗಂ, ಸದಸ್ಯರಾದ ಸಿದ್ದು ಮ್ಯಾಗೇರಿ, ಅಮ್ಜದ್ ಪಟೇಲ್, ಮುತ್ತು ಕುಷ್ಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಂ.ಗಂಗಪ್ಪ, ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts