More

    ಜಿಲ್ಲೆಗೆ ಬಿಡದ ಮುಂಬೈ ನಂಜು; ಮತ್ತೋರ್ವ ಯುವಕನಲ್ಲಿ ಸೋಂಕು ದೃಢ

    ಕೊಪ್ಪಳ: ಮುಂಬೈನಿಂದ ಬಂದಿದ್ದ ಕನಕಗಿರಿಯ 28 ವರ್ಷದ ಯುವಕನಲ್ಲಿ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 6ಕ್ಕೇರಿದೆ.

    ತಂದೆ-ತಾಯಿಯೊಂದಿಗೆ ಮುಂಬೈನ ದಿವಾ ಏರಿಯಾದಲ್ಲಿ ಯುವಕ 15 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದ. ಅಲ್ಲಿಂದ ಮೇ 30ರಂದು ಪಾಲಕರೊಂದಿಗೆ ಖಾಸಗಿ ವಾಹನ ಮಾಡಿಕೊಂಡು ಕನಕಗಿರಿಗೆ ಆಗಮಿಸಿದ್ದಾನೆ. ಅಂತಾರಾಜ್ಯದಿಂದ ಬಂದವರಾಗಿದ್ದರಿಂದ ಕನಕಗಿರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಿಸಲಾಗಿದೆ. ಜೂ.2ರಂದು ಗಂಗಾವತಿಯಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಮೂವರ ಪೈಕಿ ಯುವಕನ ಪಾಲಕರ ವರದಿ ನೆಗೆಟಿವ್ ಬಂದಿದ್ದು, ಯುವಕನಿಗೆ ಸೋಂಕಿರುವುದು ದೃಢಪಟ್ಟಿದೆ. ಕ್ವಾರಂಟೈನ್ ಕೇಂದ್ರದಿಂದ ಯುವಕನನ್ನು ಶುಕ್ರವಾರ ರಾತ್ರಿಯೇ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಲಕನ ಮೇಲೆ ನಿಗಾವಹಿಸಲು ಪತ್ರ: ಸೋಂಕಿತ ಯುವಕನ ಪಾಲಕರು ಮತ್ತು ವಾಹನ ಚಾಲಕನಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಕ್ವಾರಂಟೈನ್ ಸಮಯದಲ್ಲಿ ಪಕ್ಕದ ಕೋಣೆಯಲ್ಲಿದ್ದ ವ್ಯಕ್ತಿಯೊಬ್ಬ ಬಂದು ಯುವಕನನ್ನು ಮಾತನಾಡಿಸಿದ್ದಾನೆ. ಪರಿಚಯಸ್ಥ ಅಜ್ಜಿಯೊಬ್ಬರೂ ಬಂದು ಮಾತನಾಡಿಸಿಕೊಂಡು ಹೋಗಿದ್ದು, ಅವರೆಲ್ಲರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಲಾಗಿದೆ. ಪಕ್ಕದ ಕೋಣೆ ಯುವಕನಿಗೆ ಊಟ ನೀಡಲು ಬರುತ್ತಿದ್ದ ಅವರ ಸಹೋದರ ಮತ್ತು ಅಜ್ಜಿಯ ಕುಟುಂಬದ ನಾಲ್ವರು ಸೇರಿ ಒಟ್ಟು 5 ಜನರನ್ನು ಸದ್ಯ ದ್ವಿತೀಯ ಸಂಪರ್ಕಿತರೆಂದು ಗುರುತಿಸಿದ್ದು, ಕ್ವಾರಂಟೈನ್ ಮಾಡಿಸಲಾಗಿದೆ. ಯುವಕ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ಕಾರಣ ಆತಂಕ ಹೆಚ್ಚಾಗಿಲ್ಲ. ಇವರನ್ನು ಕಾರ್‌ನಲ್ಲಿ ಕರೆತಂದ ಚಾಲಕನ ಮೇಲೆ ನಿಗಾವಹಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆದು ಮಾಹಿತಿ ನೀಡಿದೆ. ಈ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6ಕ್ಕೇರಿದೆ. ಈಗಾಗಲೇ ಮೂವರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಮತ್ತೂರ್ವ ವ್ಯಕ್ತಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಅವರೂ ಬಿಡುಗಡೆ ಹೊಂದಿದ್ದಾರೆ. ಇನ್ನೋರ್ವ ಪಿ-2254 ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇನ್ನು ಪತ್ತೆಯಾಗದ ವಾಹನ: ಪಿ-1173ಯುವಕನಿಗೆ ಮೇ 18ರಂದು ಕರೊನಾ ಸೋಂಕು ದೃಢಪಟ್ಟಿತ್ತು. 17 ದಿನಗಳ ಕಾಲ ಆತ ಚಿಕಿತ್ಸೆ ಪಡೆದು ಗುಣವಾಗಿದ್ದಾನೆ. ಆದರೆ, ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬಂದ ಎನ್ನಲಾದ ಟಾಟಾ ಏಸ್ ವಾಹನ ಮಾತ್ರ ಈವರೆಗೂ ಪತ್ತೆಯಾಗಿಲ್ಲ. ವಾಹನ ಪತ್ತೆಗೆ ಜಿಲ್ಲಾಡಳಿತ ನಡೆಸಿದ ಎಲ್ಲ ಪ್ರಯತ್ನಗಳು ಮುಗಿದಿವೆ. ಚೇತರಿಸಿಕೊಂಡಿರುವ ಯುವಕ ಈಗ ಟಾಟಾ ಏಸ್‌ನಲ್ಲಿ ಬಂದಿಲ್ಲವೆಂದು ಭಿನ್ನ ಹೇಳಿಕೆ ನೀಡಿದ ಕಾರಣ ಪೊಲೀಸರ ಮೂಲಕ ಮಾಹಿತಿ ಕಲೆಹಾಕಲಾಗುತ್ತಿದೆ. ಜೂ.7ರೊಳಗೆ ಯುವಕನಿಂದ ನಿಖರ ಮಾಹಿತಿ ಪಡೆಯುವಂತೆ ಡಿಸಿ ಸೂಚಿಸಿದ್ದು ಮಾಹಿತಿ ದೊರೆಯದಿದ್ದಲ್ಲಿ ಆತನ ವಿರುದ್ಧ ದೂರು ದಾಖಲಿಸಲು ಸೂಚಿಸಿದ್ದಾರೆ. ಇನ್ನು ವಿವಿವಿಧೆಡೆಯಿಂದ ಆಗಮಿಸಿದ 505 ಜನ ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇವರಲ್ಲಿ 392 ಜನ ವಿವಿಧ ಜಿಲ್ಲೆಯಿಂದ ಬಂದವರು. 67 ಜನ ಪ್ರಾಥಮಿಕ ಮತ್ತು 46 ಜನ ದ್ವಿತೀಯ ಸಂಪರ್ಕಿತರಾಗಿದ್ದಾರೆ. ಮಹಾರಾಷ್ಟ್ರ-62, ತಮಿಳುನಾಡು-20, ಗುಜರಾತ್-9 ಮತ್ತು ಇತರ ರಾಜ್ಯದ 28 ಸೇರಿ ಒಟ್ಟು 119 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ.

    ಮುಂಬೈನಿಂದ ಆಗಮಿಸಿದ್ದ ಯುವಕನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಆತನನ್ನು ಶುಕ್ರವಾರವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಸದ್ಯ ಆತನ ಪಾಲಕರು ಸೇರಿ ನಾಲ್ವರು ಪ್ರಾಥಮಿಕ ಮತ್ತು ಐವರು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಿಸಲಾಗಿದೆ. ಸೋಂಕಿತನಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಯಾರ‌್ಯಾರು ಸಂಪರ್ಕಕ್ಕೆ ಬಂದಿದ್ದಾರೆಂದು ಪತ್ತೆ ಹಚ್ಚಲಾಗುವುದು. ಕ್ವಾರಂಟೈನ್ ಸೆಂಟರ್‌ನಲ್ಲಿದ್ದಿದ್ದರಿಂದ ಹೆಚ್ಚಿನ ಆತಂಕ ಸೃಷ್ಟಿಯಾಗಿಲ್ಲ.
    | ಪಿ.ಸುನಿಲ್ ಕುಮಾರ್. ಡಿಸಿ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts