More

    ಸಿಎಎದಿಂದ ಮುಸ್ಲಿಮರಿಗೆ ಹಾನಿಯಿಲ್ಲ ಎಂದು ಪ್ರತಿಪಾದಿಸಿದ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್

    ಕೊಪ್ಪಳ: ನಮ್ಮನ್ನು ಟೀಕಿಸಲು ಬೇರೆ ವಿಷಯಗಳಿಲ್ಲದ ಕಾರಣ, ಕಾಂಗ್ರೆಸ್ ಸಿಎಎ ಬಗ್ಗೆ ಪ್ರಸ್ತಾಪಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಈ ಕಾಯ್ದೆ ಜಾರಿಯಿಂದ ದೇಶದಲ್ಲಿನ ಅಲ್ಪ ಸಂಖ್ಯಾತರಿಗೆ ತೊಂದರೆಯಿರದ ಕಾರಣ, ಅವರು ಭಯಪಡುವ ಅಗತ್ಯವಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದರು.

    ನಗರದ ರಾಘವೇಂದ್ರ ಮಠದಿಂದ ಭಾನುವಾರ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನನಗೆ ಹಾಗೂ ಶಾಸಕ ಪಿ.ರಾಜೀವ್ ಅವರಿಗೆ ಜವಾಬ್ದಾರಿ ನೀಡಿದ್ದು, ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿನ ಅಲ್ಪ ಸಂಖ್ಯಾತರು ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದರೆ, ಅಂಥವರಿಗೆ ಪೌರತ್ವ ನೀಡಲಾಗುವುದು. ಇದರಿಂದ ದೇಶದಲ್ಲಿ ವಾಸವಿರುವ ಮುಸ್ಲಿಮರಿಗೆ ತೊಂದರೆ ಇಲ್ಲ. ಆ ದೇಶಗಳಲ್ಲಿ ಮುಸ್ಲಿಮರು ಅಲ್ಪ ಸಂಖ್ಯಾತರಲ್ಲ. ಸಿಎಎ ಜಾರಿಗೆ ತಂದಿರುವುದು ಅಲ್ಲಿನ ಶೋಷಣೆಗೆ ಒಳಗಾದ ಅಲ್ಪ ಸಂಖ್ಯಾತರಿಗೆ ಮಾತ್ರ. ಹೀಗಾಗಿ, ಅಲ್ಲಿನ ಮುಸ್ಲಿಮರು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಕಾಂಗ್ರೆಸ್‌ನವರು ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

    ಬಳಿಕ ಮನೆ ಮನೆಗೆ ತೆರಳಿ ಪೌರತ್ವ ಕಾಯ್ದೆ ಬಗೆಗಿನ ಮಾಹಿತಿಯುಳ್ಳ ಕರಪತ್ರ ಹಂಚಲಾಯಿತು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಪಿ.ರಾಜೀವ್, ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮುಖಂಡರಾದ ಸಿ.ವಿ.ಚಂದ್ರಶೇಖರ್, ಅಮರೇಶ ಕರಡಿ, ಚಂದ್ರು ಹಲಗೇರಿ, ಚಂದ್ರು ಕವಲೂರು ಇತರರು ಪಾಲ್ಗೊಂಡಿದ್ದರು.

    ಉದ್ರೇಕಕಾರಿ ಹೇಳಿಕೆ ಜನಪ್ರತಿನಿಧಿಗಳಿಗೆ ಸಲ್ಲ : ಬಳ್ಳಾರಿಯಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಉದ್ರೇಕಕಾರಿ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಸಾರ್ವಜನಿಕ ಜೀವನದಲ್ಲಿ ಇರುವವರು ಈ ರೀತಿ ಉದ್ರೇಕಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

    ಸಿಂಧನೂರಿನ ಆರ್.ಎಚ್ ಕ್ಯಾಂಪ್‌ನಲ್ಲಿ ಸುಮಾರು 20-25 ಸಾವಿರ ಜನರ ಬಾಂಗ್ಲಾ ನಿರಾಶ್ರಿತರಿದ್ದಾರೆ. ಅವರಿಗೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಕ್ಷಣೆ ನೀಡಿದ್ದರು. ಅದರಂತೆ ಅವರಿಗೆ ಪೌರತ್ವ ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾರನ್ನು ಆಹ್ವಾನಿಸಿ, ಪತ್ರ ಬರೆಯಲಾಗಿದೆ.
    | ಸಂಗಣ್ಣ ಕರಡಿ ಕೊಪ್ಪಳ ಸಂಸದ

    ಸಂಕ್ರಾಂತಿ ಬಳಿಕ ನೂತನ ಮರಳು ನೀತಿ ಜಾರಿ ಮಾಡಲಾಗುವುದು. ತೆಲಂಗಾಣ ಮಾದರಿಯಲ್ಲಿ ಮರಳು ನೀತಿ ರೂಪಿಸುವ ಯೋಜನೆಯಿದೆ. ಗಣಿಗಾರಿಕೆ ಮಾಡುವುದಕ್ಕೆ ಸರ್ಕಾರದಿಂದ ಯಾವುದೇ ಆಕ್ಷೇಪವಿಲ್ಲ. ಆದರೆ, ಅಕ್ರಮ ಎಸಗಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.
    | ಸಿ.ಸಿ.ಪಾಟೀಲ್ ಗಣಿ ಮತ್ತು ಭೂವಿಜ್ಞಾನ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts