More

    12 ಜನರಿಂದ 2 ಸ್ಥಾನ ಬೋನಸ್

    ಚಿಕ್ಕಮಗಳೂರು: ಹನ್ನೆರಡು ಸಹಕಾರ ಸಂಘಗಳ ಮತದಾರ ಪ್ರತಿನಿಧಿಗಳನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅನರ್ಹಗೊಳಿಸಿದ್ದು ಒಟ್ಟಾರೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಲೆಕ್ಕಾಚಾರದಂತೆ ಬಿಜೆಪಿ ಬೆಂಬಲಿತರೇ ಅಧಿಕಾರ ಹಿಡಿಯಲು ಅಗತ್ಯ ಸಂಖ್ಯಾಬಲ ಸಾಧಿಸಿದ್ದಾರೆ.

    ಒಂದು ವೇಳೆ 12 ಸಹಕಾರ ಸಂಘಗಳ ಮತದಾರ ಪ್ರತಿನಿಧಿಗಳನ್ನು ಅನರ್ಹಗೊಳಿಸದಿದ್ದರೆ ಸಂಖ್ಯಾಬಲದಲ್ಲಿ ಏರುಪೇರಾಗುತ್ತಿತ್ತು. ಜೆಡಿಎಸ್ ಬೆಂಬಲಿತರ ಸಂಖ್ಯೆ ಎರಡರಿಂದ ನಾಲ್ಕಕ್ಕೇರಿದರೆ ಮತ್ತೊಂದು (ಕೊಪ್ಪ) ಸ್ಥಾನದಲ್ಲಿ ಸಮಬಲವಾಗಿ ಲಾಟರಿ ಎತ್ತಬೇಕಾಗುತ್ತಿತ್ತು. ಈಗ ಶೃಂಗೇರಿ ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸಮ ಮತ ಗಳಿಸಿದಂತೆ ಕೊಪ್ಪ ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲೂ ಇಬ್ಬರು ಅಭ್ಯರ್ಥಿಗಳಿಗೆ ಸಮ ಮತ ಬೀಳುವ ಸಾಧ್ಯತೆಗಳಿದ್ದವು.

    ಚಿಕ್ಕಮಗಳೂರಲ್ಲಿ 10 ಸಹಕಾರ ಸಂಘಗಳ ಮತದಾರ ಪ್ರತಿನಿಧಿಗಳನ್ನು ಅನರ್ಹಗೊಳಿಸದಿದ್ದರೆ ಜೆಡಿಎಸ್ ಬೆಂಬಲಿಗರು ಗೆಲುವು ಸಾಧಿಸುವ ಸಾಧ್ಯತೆಗಳಿದ್ದವು. ಅದೇ ರೀತಿ ಕೊಪ್ಪದಲ್ಲಿ ಇಬ್ಬರು ಮತದಾರ ಪ್ರತಿನಿಧಿಗಳು ಅನರ್ಹರಾಗದಿದ್ದರೆ ಎಸ್.ಎನ್.ರಾಮಸ್ವಾಮಿ ಮತ್ತು ಕುಕ್ಕುಡಗಿ ರವೀಂದ್ರ ಅವರಿಗೆ ಸಮ ಮತ ಬಿದ್ದು, ಲಾಟರಿ ಎತ್ತುವ ಸನ್ನಿವೇಶ ನಿರ್ವಣವಾಗುತ್ತಿತ್ತು.

    ಬೋಜೇಗೌಡರ ದುರಾದೃಷ್ಟ: ಚಿಕ್ಕಮಗಳೂರಲ್ಲಿ 10 ಮತದಾನ ಪ್ರತಿನಿಧಿಗಳು ಮತದಾನದ ಹಕ್ಕಿನಿಂದ ವಂಚಿತರಾಗದಿದ್ದರೆ ಜೆಡಿಎಸ್ ಬೆಂಬಲಿತರಲ್ಲಿ ಇನ್ನಿಬ್ಬರ ಗೆಲುವು ಸ್ಪಷ್ಟವಾಗಿತ್ತು. ಎಸ್.ಎಲ್. ಬೋಜೇಗೌಡ ಮತ್ತು ಟಿ.ಇ. ಮಂಜುನಾಥ ಅವರು ಆಯ್ಕೆಯಾಗುತ್ತಿದ್ದರು. ಈ ಬೆಳವಣಿಗೆ ಎಂ.ಎಸ್. ನಿರಂಜನ್ ಮತ್ತು ಎಚ್.ಬಿ. ಸತೀಶ್ ಅವರಿಗೆ ವರವಾಯಿತು.

    ಕುಕ್ಕುಡ ರವೀಂದ್ರರದ್ದೂ ಅದೇ ಕತೆ: ಬೋಜೇಗೌಡರಂತೆ ಕೊಪ್ಪದ ಕುಕ್ಕುಡ ರವಿಂದ್ರ ಕೂಡ ದುರಾದೃಷ್ಟವಂತರು. ಇಬ್ಬರು ಮತದಾನದ ಹಕ್ಕು ಕಳೆದುಕೊಳ್ಳದಿದ್ದರೆ ರವೀಂದ್ರ ಅವರು ರಾಮಸ್ವಾಮಿ ಅವರಷ್ಟೇ ಮತಗಳಿಸುತ್ತಿದ್ದರು. ಆಗ ಲಾಟರಿಯಲ್ಲಿ ವಿಜೇತರನ್ನು ಆಯ್ಕೆ ಮಾಡಬೇಕಿದ್ದು, ಫಲಿತಾಂಶ ಏನು ಬೇಕಾದರೂ ಆಗಬಹುದಿತ್ತು. ಇಬ್ಬರು ಮತದಾನ ಮಾಡಿದ್ದರೆ ಗೆಲುವು ರವೀಂದ್ರ ಅವರ ಅದೃಷ್ಟವನ್ನು ಅವಲಂಬಿಸಿರುತ್ತಿತ್ತು. ವಿಶೇಷ ಎಂದರೆ ಡಿಸಿಸಿ ಬ್ಯಾಂಕಿನಲ್ಲಿ ಮೊದಲ ಬಾರಿ ಬಿಜೆಪಿ ಬಹುಮತ ಪಡೆದಿದ್ದಾಗ ಎರಡು ವರ್ಷ ಅಧ್ಯಕ್ಷರಾಗಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಈ ಚುನಾವಣೆಯಲ್ಲಿ ಅವರು ಬಿಜೆಪಿ ಬೆಂಬಲಿತ ಎಸ್.ಎನ್. ರಾಮಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿದ್ದರು.

    ಎರಡನೇ ಬಾರಿ ಅಧಿಕಾರಕ್ಕೆ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಹಿಡಿಯುತ್ತಿದೆ. 2010ರಿಂದ 2015ರ ಅವಧಿಯಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ವಿಫಲವಾಗಿತ್ತು. ಜೆಡಿಎಸ್ ಕಾಂಗ್ರೆಸ್ ಬೆಂಬಲಿತರು 2015ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದರು.

    2010ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬೆಂಬಲಿತರು ಬಹುಮತ ಸಾಧಿಸಿದ್ದರು. ಆಗ ಕುಕ್ಕಡಗಿ ರವೀಂದ್ರ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡು ಅಧ್ಯಕ್ಷರಾಗಿದ್ದರು. 2010-2015ರ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಮೂವರಿಗೆ ಹಂಚಿಕೆ ಮಾಡಲಾಗಿತ್ತು. ರವೀಂದ್ರ ಅವರ ನಂತರ ರಾಜಶೇಖರ ಮತ್ತು ಜಯರಾಮ್ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು.

    ಅಧಿಕಾರ ಹಂಚಿಕೆ ಸಾಧ್ಯತೆ: ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್. ಸುರೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಆರ್. ಆನಂದಪ್ಪ, ಜಿಪಂ ಸದಸ್ಯ ಎಸ್.ಎನ್. ರಾಮಸ್ವಾಮಿ, ಎಂ.ಎಸ್. ನಿರಂಜನ್, ಎಚ್.ಬಿ. ಶಿವಣ್ಣ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಯಾರೂ ಸಹ ಬಹಿರಂಗವಾಗಿ ನಾನು ಆಕಾಂಕ್ಷಿ ಎಂದು ಹೇಳಿಕೊಂಡಿಲ್ಲ.

    ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿರುವ ಕಾರಣ ಇಬ್ಬರು ಮೂವರು ನಿರ್ದೇಶಕರಿಗೆ ಐದು ವರ್ಷದ ಅವಧಿಯನ್ನು ಹಂಚಿಕೆ ಮಾಡುವ ಸಾಧ್ಯತೆಗಳೂ ಇವೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಂಚಿಕೆ ಸೂತ್ರ ಈಗ ಸಾಮಾನ್ಯವಾಗಿದ್ದು, ಇದೇ ಸೂತ್ರವನ್ನು ಡಿಸಿಸಿ ಬ್ಯಾಂಕಿನಲ್ಲೂ ಪಾಲನೆ ಮಾಡುವ ಸಾಧ್ಯತೆಗಳಿವೆ.

    ಆಸೆ ಇದೆ, ಹೇಳಿಕೊಳ್ಳುತ್ತಿಲ್ಲ: ಬಿಜೆಪಿ ಬೆಂಬಲಿತ ಹಲವು ನಿರ್ದೇಶಕರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಬೇಕು ಎಂಬ ಆಸೆ ಇದೆ. ಆದರೆ ಬಾಯಿಬಿಟ್ಟು ಹೇಳಿಕೊಳ್ಳುತ್ತಿಲ್ಲ. ಬಹಿರಂಗವಾಗಿ ಚರ್ಚೆ ಮಾಡಿದರೆ ಎಲ್ಲಿ ಅವಕಾಶ ತಪ್ಪಿ ಹೋಗಬಹುದೋ ಎಂಬ ಆತಂಕ ಅವರಲ್ಲಿದೆ. ಹೀಗಾಗಿ ಏನಾದರೂ ಕೇಳಿದರೆ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ ಎಂಬ ಸಿದ್ಧ ಉತ್ತರ ಬರುತ್ತಿದೆ. ಬಿಜೆಪಿಗೆ ಬಲ ಸ್ಪಷ್ಟವಾಗುತ್ತಿದ್ದಂತೆ ಹಲವರು ಹೀಗಾಗಲೇ ಅಧ್ಯಕ್ಷ ಸ್ಥಾನಕ್ಕೇರಲು ಪ್ರಯತ್ನ ಆರಂಭಿಸಿದ್ದಾರೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲೇ ತೀರ್ಮಾನ ಆಗಬೇಕಿದ್ದರೂ ಈಗಷ್ಟೇ ರಾಷ್ಟ್ರಮಟ್ಟದಲ್ಲಿ ಪಕ್ಷದ ಜವಾಬ್ದಾರಿ ಪಡೆದಿರುವ ಸಿ.ಟಿ. ರವಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಆಕಾಂಕ್ಷಿಗಳು ಪಕ್ಷದ ಗಾಡ್​ಫಾದರ್​ಗಳ ಜತೆ ರವಿ ಒಲವನ್ನೂ ಗಳಿಸಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts