More

    ಹೈಟೆಕ್ ಕಡೆ ಕುಲುಮೆಗಾರರ ನಡೆ

    ಟಿ.ರಾಮಚಂದ್ರ ಕೊಂಡ್ಲಹಳ್ಳಿ: ಗ್ರಾಮೀಣ ಭಾಗದ ಕುಲಕಸುಬುಗಳು ಸಾಂಪ್ರದಾಯಿಕ ಪದ್ಧತಿಗಳಿಂದ ಆಧುನಿಕ ಸ್ಪರ್ಶ ಪಡೆಯುತ್ತಿದ್ದು, ಕುಲುಮೆಯಲ್ಲಿ ಅಗ್ನಿ ಬೆಳಗಿಸಲು ಸೌರಶಕ್ತಿ ಬಳಸಲಾಗುತ್ತಿದೆ.

    ಕೃಷಿ ಉಪಕರಣಗಳಾದ ಕುಡ, ಕುಂಟೆ, ಕುಡುಗೋಲು, ಕುರ್ಜಿಗೆ, ಗುದ್ದಲಿ, ಸಲಕಿ ಇತರೆ ಕಬ್ಬಿಣದ ವಸ್ತುಗಳು ಹಳ್ಳಿಗಳ ಕುಲುಮೆಗಳಲ್ಲಿ ತಯಾರಾಗುತ್ತವೆ. ತಂತ್ರಜ್ಞಾನವು ಇಂದು ಗ್ರಾಮೀಣ ಪ್ರದೇಶಗಳಲ್ಲಿನ ಗೃಹ ಕೈಗಾರಿಕೆಗಳು, ಕುಲಕಸುಬುಗಳಲ್ಲಿಯೂ ತನ್ನದೇ ಆದ ಪ್ರಭಾವ ಬೀರುತ್ತಿದ್ದು, ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಡುತ್ತಿವೆ.
    ಕಬ್ಬಿಣದ ಕೃಷಿ ಪರಿಕರಗಳ ತಯಾರಿಕೆಯ ಕುಲುಮೆಯಲ್ಲಿ ಬೆಂಕಿ ಉರಿಯಲು ಗಾಳಿಗಾಗಿ ಮೊದಲು ಚರ್ಮದಿಂದ ತಯಾರಾದ ತಿದಿ ಎಂಬ ಚರ್ಮದ ವಸ್ತುವಿನಿಂದ ಗಾಳಿಯನ್ನು ಪಡೆದು ಬೆಂಕಿ ಉರಿಸಿಕೊಂಡು ಕೆಲಸ ಮಾಡಲಾಗುತ್ತಿತ್ತು. ನಂತರದ ದಿನಮಾನದಲ್ಲಿ ಕುಲುಮೆಗೆ ಗಾಳಿ ಪಡೆಯಲು ಕೈಯಿಂದ ತಿರುಗಿಸುವ ಬ್ಲೋಯರ್ ಬಳಸಲಾರಂಭಿಸಲಾಯಿತು.

    ಈ ಎರಡೂ ರೀತಿ ವಿಧಾನಗಳಲ್ಲಿ ಬೆಂಕಿ ಕುಲುಮೆಯಲ್ಲಿ ವಸ್ತುಗಳ ಕಾಯಿಸುವ ವೇಳೆ ಬೆಂಕಿ ನಿರಂತರವಾಗಿ ಉರಿಯಲು ತಿದಿಯನ್ನು ಎಳೆಯಲು ಹಾಗೂ ಬ್ಲೋಯರ್ ಅನ್ನು ರಾಟೆಯಂತೆ ಕೈಯಿಂದ ತಿರುಗಿಸಲು ಒಬ್ಬ ಕೆಲಸಗಾರರು ಕಡ್ಡಾಯ ಬೇಕಿತ್ತು.

    ಆದರೆ, ಈಗ ಈ ಎರಡೂ ವ್ಯವಸ್ಥೆಗೆ ಪರ್ಯಾಯವಾಗಿ ಸೌರಶಕ್ತಿಯ ಕುಲುಮೆಯ ಬ್ಲೋಯರ್ ಕೆಲಸಕ್ಕೆ ಸಾಥ್ ಕೊಡುತ್ತಿದೆ. ಇದರಿಂದ ಕುಲುಮೆ ಕೆಲಸದಲ್ಲಿ ಬೆಂಕಿ ಸದಾ ಉರಿಯಲು ಕೈಯಿಂದ ತಿರುಗಿಸುವ ವ್ಯಕ್ತಿ ಅವಶ್ಯಕತೆ ಇಲ್ಲ. ಮೊದಲು ಕರೆಂಟ್ ಇಲ್ಲದಿದ್ದರೆ, ಮಳೆ ಬಂದರೆ ರೈತರಿಗೆ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಸಿದ್ಧಗೊಳಿಸಿ ಕೊಡುವುದಕ್ಕೆ ಕಷ್ಟಾಗುತ್ತಿತ್ತು. ಈಗ ಸೋಲಾರ್ ಬ್ಲೋಯರ್‌ನಿಂದ ಕುಲುಮೆಗೆ ಅವಶ್ಯಕ ಗಾಳಿ ಪಡೆದು ಕುಲುಮೆ ಕೆಲಸ ಮಾಡಬಹುದು.

    ಹಣ-ಸಮಯ ಉಳಿತಾಯ: ತುರ್ತು ಸಮಯದಲ್ಲಾದರೂ ರೈತರಿಗೆ ಅಗತ್ಯ ಕಬ್ಬಿಣದ ಕೃಷಿ ಉಪಕರಣಗಳನ್ನು ತಯಾರಿಸಿ ಕೊಡಲು ಸಾಧ್ಯವಾಗಿದೆ. ಇದರಿಂದ ಕನಿಷ್ಠ 12 ತಾಸು ಕೆಲಸ ಮಾಡಲು ಅನುಕೂಲ ಆಗುತ್ತಿದೆ. ಕರೆಂಟ್ ಬಿಲ್ ಕಟ್ಟುವ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ಒಟ್ಟಾರೆ ಇದರಿಂದ ನಮಗೆ ಅನುಕೂಲ ಆಗುತ್ತಿದೆ ಎನ್ನುತ್ತಾರೆ. ಕುಲಕಸುಬುಗಳಲ್ಲಿ ಆಧುನಿಕತೆ ಅಳವಡಿಸಿಕೊಂಡು ಅಸ್ತಿತ್ವ ಉಳಿಸಿಕೊಂಡು ಮುಂದುವರಿಯುತ್ತಿರುವುದು ಆಶಾದಾಯಕ ಸಂಗತಿ ಕುಲುಮೆ ಕಸುಬುಗಾರ ಕುಮಾರ್ ಆಚಾರ್ ಎನ್ನುತ್ತಾರೆ.

    ಧರ್ಮಸ್ಥಳ ಸಂಸ್ಥೆಯಿಂದ ನಮ್ಮ ಕುಲುಮೆ ಕೆಲಸಕ್ಕೆ ಗಾಳಿ ಕೊಡುವ ಸೋಲಾರ್ ಬ್ಲೋಯರ್ ಅನ್ನು 18 ಸಾವಿರ ರೂ. ಗಳ ಸಾಲದ ಮೂಲಕ ನೆರವು ಪಡೆದಿದ್ದೇವೆ. ಇದರಿಂದ ಈ ಹಿಂದೆ ಕೈಯಿಂದ ಚರ್ಮದ ತಿದಿಯನ್ನು ಎಳೆಯುವ, ಕೈ ತಿರುಗುವ ಸಂಕಷ್ಟ ತಪ್ಪಿದೆ.
    ಕುಮಾರ್ ಆಚಾರ್ ಕುಲುಮೆ ಕಸುಬುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts