More

    ರುಚಿ ಪಾನೀಯ ನೀರಾಕ್ಕೆ ಹೆಚ್ಚಿದ ಬೇಡಿಕೆ

    ಟಿ.ರಾಮಚಂದ್ರಪ್ಪ ಕೊಂಡ್ಲಹಳ್ಳಿ: ಕರೊನಾ ವೈರಸ್ ಮಹಾಮಾರಿಯಿಂದ ಆರೋಗ್ಯ ಜಾಗೃತಿ ಜನರಲ್ಲಿ ಹೆಚ್ಚಾಗುತ್ತಿದ್ದು, ವಿವಿಧ ರೋಗಗಳಿಗೆ ಮದ್ದು ಎಂಬ ಕಾರಣಕ್ಕೆ ನೀರಾಕ್ಕೆ ಬಯಲುಸೀಮೆಯಲ್ಲಿ ಬೇಡಿಕೆ ತೀವ್ರ ಹೆಚ್ಚಿದೆ.

    ಕಲ್ಪವೃಕ್ಷದಿಂದ ದೊರೆವ ರುಚಿಯಾದ ಪಾನೀಯ, ಕಲ್ಪರಸ ಎಂತಲೂ ಕರೆಸಿಕೊಳ್ಳುವ ನೀರಾಕ್ಕೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

    ಬಿ.ಜಿ.ಕೆರೆಯ ಪ್ರಗತಿಪರ ರೈತರಾದ ವೀರಭದ್ರಪ್ಪ-ಸುಮಂಗಲಮ್ಮ ದಂಪತಿ ತಮ್ಮ ವಸುಂಧರಾ ಕೃಷಿ ಕ್ಷೇತ್ರದಲ್ಲಿ 40 ತೆಂಗಿನ ಮರದ ಹೊಂಬಾಳೆಯಿಂದ ಕಾಸರಗೋಡಿನ ತೆಂಗು ಅಭಿವೃದ್ಧಿ ಮಂಡಳಿಯ ತಂತ್ರಜ್ಞಾನದ ನೆರವಿನಿಂದ ನೀರಾ ತೆಗೆಯುತ್ತಿದ್ದಾರೆ.

    10 ದಿನಗಳಿಗೆ ಪ್ರತಿ ಮರದಿಂದ 1 ಲೀಟರ್ ವರೆಗೂ ದೊರೆಯುವ ನೀರಾವನ್ನು ಬಾಟಲಿಯಲ್ಲಿ ಸಂಗ್ರಹಿಸಿದರೆ 1-2 ಗಂಟೆಯೊಳಗೆ ಸೇವಿಸಬಹುದು. ಫ್ರಿಜ್‌ನಲ್ಲಿ ಇಟ್ಟರೆ 15ರಿಂದ ತಿಂಗಳ ವರೆಗೆ ಉಪಯೋಗಿಸಬಹುದಾಗಿದೆ.

    ಎಳನೀರಿಗಿಂತಲೂ ಆರೇಳು ತಿಂಗಳ ಮುಂಚೆಯೇ ತೆಂಗಿನ ಮರದಿಂದ ಸಿಗುವ ನೀರಾ, ಹೆಚ್ಚಿನ ಪ್ರಮಾಣದಲ್ಲಿ ಮಿನರಲ್ಸ್, ಕಾರ್ಬೊಹೈಡ್ರೇಟ್ಸ್ ಎಳನೀರಿಗಿಂತ 3 ಪಟ್ಟು ಶಕ್ತಿ ನೀಡುವ ಪೇಯವಾಗಿದ್ದು, ಇದನ್ನು ಐಸ್‌ಟ್ಯೂಬ್‌ನಲ್ಲಿಟ್ಟು ಮಾರಲಾಗುತ್ತಿದೆ.

    ಪ್ರತಿ ಲೀಟರ್‌ಗೆ 150-200 ರೂ. ಬೆಲೆ ಸಿಗುತ್ತಿದ್ದು, ರೈತರಿಗೆ ಇದು ವರದಾನವಾಗಿದೆ. ಕಾಮಾಲೆ ನಿವಾರಣೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಗೆ ಇದು ರಾಮಬಾಣವಾಗಿದೆ. ಇದರಿಂದ ಬೆಲ್ಲ, ಸಕ್ಕರೆ ಹಾಗೂ ನೀರಾ ಬಿಸಿ ಮಾಡಿ ನೀರಾಬೆಲ್ಲ (ಜೇನು) ತಯಾರಿಸಲಾಗುತ್ತದೆ.

    12 ಲೀ. ನೀರಾದಿಂದ 800-900 ಮಿ.ಲೀ. ನೀರಾಬೆಲ್ಲ (ಜೇನು) ಬರುತ್ತದೆ. ಇದು ಪ್ರತಿ ಕೆ.ಜಿ.ಗೆ 2000 ರೂ. ರಷ್ಟು ಬೇಡಿಕೆ ಇದೆ. ಲಾಕ್‌ಡೌನ್ ದಿನದಿಂದ ನೀರಾಗೆ ಬೇಡಿಕೆ ಹೆಚ್ಚಿದ್ದು, ಇಲ್ಲಿ ಸಂಗ್ರಹಗೊಳ್ಳುವ 35-40 ಲೀ. ನೀರಾ ಕೆಲವೇ ಗಂಟೆಯಲ್ಲಿ ಖಾಲಿಯಾಗುತ್ತಿದೆ.

    ಮರವೇರಿ ನೀರಾ ಇಳಿಸಲು ಕಾರ್ಮಿಕರ ಕೊರತೆ ಇದೆ. ನಾವು ಇಲ್ಲಿ ಮರಕ್ಕೆ ಟೈರ್‌ಗಳನ್ನು ಕಟ್ಟಿ ಮರವೇರಲು ವ್ಯವಸ್ಥೆ ಕಲ್ಪಿಸಿಕೊಂಡಿದ್ದೇವೆ. ಮಹಿಳೆಯರಿಗೂ ಸಹ ಉತ್ತಮ ಪೌಷ್ಟಿಕಾಂಶ ಒದಗಿಸುವ ನೀರಾದಲ್ಲಿ ರಾಸಾಯನಿಕ ಮಿಶ್ರಣ ಇರುವುದಿಲ್ಲ. ಇದು ಶುದ್ಧ, ಹಲವು ಪೋಷಕಾಂಶ ಇರುವ ಸ್ವಾದಿಷ್ಟಕರ ಪೇಯ ಎನ್ನುತ್ತಾರೆ ವಸುಂಧರಾ ಕೃಷಿ ಕ್ಷೇತ್ರದ ಎಸ್.ವಿ.ಸುಮಂಗಲಮ್ಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts