More

    ಸರಣಿ ಕೊಲೆಗಳಿಂದ ಕೋಲಾರ ತಲ್ಲಣ

    ಹದಿಹರೆಯದ ಯುವಕರಿಂದಲೇ ಕೃತ್ಯ : ಮಾದಕ ವಸ್ತುಗಳ ಸೇವನೆಯೇ ಕಾರಣ ಎಂಬುದು ನಾಗರಿಕರ ಆರೋಪ

    ಕೋಲಾರ: ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಅಪರಾಧಗಳಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನತೆ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಅಪರಾಧ ಕೃತ್ಯದ ಮಾದರಿಗಳನ್ನು ಅವಲೋಕಿಸಿದರೆ ರಾಜಧಾನಿ ಬೆಂಗಳೂರಿನ ಕೆಂ ಲೋಕವನ್ನೇ ಮೀರಿಸುವಂತಿದೆ.
    ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಸರಣಿ ಕೊಲೆ ಪ್ರಕರಣಗಳಲ್ಲಿ ಹದಿಹರೆಯದ ಯುವಕರೇ ಹೆಚ್ಚು ಭಾಗಿಯಾಗಿರುವುದು ಕಂಡುಬರುತ್ತಿದೆ. ಪಾತಕಲೋಕ ಪ್ರವೇಶಿಸುವ ಉತ್ಸಾಹ, ಸಮಾಜದಲ್ಲಿ ಅತಿ ಬೇಗ ಹೆಸರು ಮಾಡುವ ಭ್ರಮೆಯಲ್ಲಿ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಗಳು ಪಾಲಕರ ನಿದ್ದೆಗೆಡೆಸಿದೆ.
    ಶ್ರೀನಿವಾಸಪುರದ ರಾಜಕೀಯ ಮುಖಂಡ ಶ್ರೀನಿವಾಸನ್​, ಮಾಲೂರಿನ ಜಯಮಂಗಲ ಗ್ರಾಪಂ ಸದಸ್ಯ ಅನಿಲ್​ಕುಮಾರ್​ ಹಾಗೂ ಕೋಲಾರದಲ್ಲಿ ಶುಕ್ರವಾರ ರಾತ್ರಿ ನಡೆದಿರುವ ಕಾರ್ತಿಕ್​ಸಿಂಗ್​ ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿಗಳು 17ರಿಂದ -20 ವರ್ಷದೊಳಗಿನ ಯುವಕರೇ ಆಗಿದ್ದಾರೆ. ಆರೋಪಿಗಳು ಮಾದಕ ದ್ರವ್ಯಗಳ ವ್ಯಸನಕ್ಕೊಳಗಾಗಿ ಕೊಲೆ ಯತ್ನ, ಸುಫಾರಿ ಹತ್ಯೆಗಳಲ್ಲಿ ಯುವಕರು ಭಾಗಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸಾಗಾಟ, ಮಾರಾಟ ಅವ್ಯಾಹತವಾಗಿದ್ದು ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದರಿಂದಾಗಿ ಸುಫಾರಿ ಹತ್ಯೆಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಹದಿಹರೆಯವದರ ಕೈಗೆ ಗಾಂಜಾ ಮತ್ತು ತರಿಸುವಂತಹ ಚುಚ್ಚುಮದ್ದುಗಳು ಸಿಗುತ್ತಿರುವುದರಿಂದ ಯುವಕರು ಇಂತಹ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
    ಕೋಲಾರ ನಗರದ ಕಾರ್ತಿಕ್​ ಸಿಂಗ್​ (17) ಕೊಲೆ ನಡೆದ ಶಾಲೆಯ ಬಳಿಯ ಮತ್ತೊಂದು ಬಾಪೂಜಿ ಶಾಲೆಯ ಆವರಣದಲ್ಲಿಯೂ ಕಳೆದ ಫೆಬ್ರವರಿಯಲ್ಲಿ ಇದೇ ರೀತಿ ಯುವಕನೊಬ್ಬನನ್ನು ಕೊಲೆ ಮಾಡಲಾಗಿತ್ತು. ಇದಕ್ಕೂ ಮುನ್ನ 19 ವರ್ಷದ ಮುಸ್ಲಿಂ ಯುವಕನನ್ನು ಹೋಟೆಲ್​ಗೆ ನುಗ್ಗಿ ಕೊಚ್ಚಿಹಾಕಲಾಗಿತ್ತು. ಕನ್ನಡ ಭವನದ ಬಳಿ ಯುವಕನೋರ್ವನ ಕತ್ತು ಸೀಳಿ ಕೊಲ್ಲಲಾಗಿತ್ತು. ಈ ರೀತಿಯಲ್ಲಿ ನಗರ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಜಿಲ್ಲೆ ಮತ್ತು ನಗರದ ಜನತೆಯನ್ನು ತಲ್ಲಣಗೊಳಿಸಿವೆ.
    ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೊಲೆ ಪ್ರಕರಣ ಹಾಗೂ ಅಪರಾಧಗಳನ್ನು ಭೇದಿಸುವುದೇ ಪೊಲೀಸರಿಗೆ ಸವಾಲಾಗಿದೆ. ಆದರೂ ಪೊಲೀಸರು ಧೈರ್ಯದಿಂದ ನುಗ್ಗಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಕೊಲೆ ಮತ್ತು ಅಪರಾಧ ಪ್ರಕರಣಗಳಲ್ಲಿ ಯುವಕರೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದರಿಂದ ಯುವಕರನ್ನು ಹತೋಟಿಗೆ ತಂದು ನಶೆ ಮತ್ತು ವ್ಯಸನಮುಕ್ತ ಕೋಲಾರ ಮಾಡಲು ಪೊಲೀಸ್​ ಇಲಾಖೆಗೆ ಜಿಲ್ಲಾಡಳಿತ ಕೈಜೋಡಿಸುವ ಅವಶ್ಯಕತೆ ಇದೆ.
    ಇತ್ತೀಚೆಗೆ ಕಾಲೇಜು ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಕಾಲೇಜಿನಲ್ಲಿ ಅಂತಹ ಯುವಕರನ್ನು ಮಾತನಾಡಿಸಲು ಉಪನ್ಯಾಸಕರೇ ಭಯಬೀಳುವಂತಾಗಿದೆ. ಈ ಮಧ್ಯೆ ಅವರ ಮನಪರಿವರ್ತನೆ ಮಾಡುವ ಸಾಹಸಕ್ಕೆ ಕೈಹಾಕುವುದಕ್ಕೆ ಹಿಂಜರಿಯುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕರು ತಿಳಿಸಿದ್ದಾರೆ.

    ಅಂತಾರಾಜ್ಯ ಕಳ್ಳರ ಬಂಧನ

    ಸರಣಿ ಕೊಲೆಗಳಿಂದ ಕೋಲಾರ ತಲ್ಲಣ

    ಕೋಲಾರ: ಎಟಿಎಂ ಸೆಂಟರ್​ಗಳ ಬಳಿ ಹಣ ಡ್ರಾ ಮಾಡಲು ಬರುತ್ತಿದ್ದ ಸಾರ್ವಜನಿಕರಿಗೆ ವಂಚಿಸಿ ಎಟಿಎಂ ಮತ್ತು ಪಿನ್​ ನಂಬರ್​ ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್​ ನೀಡಿ, ಬಳಿಕ ಅವರ ಕಾರ್ಡ್​ನಲ್ಲಿದ್ದ ಹಣ ಡ್ರಾ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಕೋಲಾರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
    ತಮಿಳುನಾಡಿನ ಹೊಸೂರು ತಾಲೂಕಿನ ಎನ್​. ಮಂಜುನಾಥ (33), ಮಂಜುನಾಥ (48), ಚಿನ್ನದೊರೈ (26) ಆರೋಪಿಗಳು.
    ಸೆ.3ರಂದು ಬೆಳಗ್ಗೆ ಸುಮಾರು 11.30ಕ್ಕೆ ಹೊಸಕೋಟೆ ಮೂಲದ ರ್ವೀನ್​ ತಾಜ್​ ಮುಳಬಾಗಿಲು ನಗರದ ಕೆನರಾ ಬ್ಯಾಂಕ್​ನಲ್ಲಿ 16 ಸಾವಿರ ರೂ. ಡ್ರಾ ಮಾಡಿಕೊಂಡು ಬ್ಯಾಂಕಿನಿಂದ ಹೊರಗಡೆ ಬಂದು ಹಣ ಎಣಿಕೆ ಮಾಡಿಕೊಳ್ಳುತ್ತಿದ್ದಾಗ ಮೂವರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ರ್ವೀನ್​ ತಾಜ್​ ಬಳಿ ಇದ್ದ ಹಣ ಎಣಿಕೆ ಮಾಡಿಕೊಡುವ ನೆಪದಲ್ಲಿ ತೆಗೆದುಕೊಂಡು ಪರಾರಿಯಾಗಿದ್ದರು, ಈ ಬಗ್ಗೆ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಪ್ರಕರಣದ ಸಂಬಂಧ ಎಸ್​ಪಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್​ಪಿ ವಿ.ಬಿ.ಭಾಸ್ಕರ್​, ಮುಳಬಾಗಿಲು ಡಿವೈಎಸ್​ಪಿ ಡಿ.ಸಿ.ನಂದಕುಮಾರ್​ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಕೆ.ಜಿ.ಸತೀಶ್​, ಎಲ್​.ಮಮತಾ ಮತ್ತು ಗಂಗಾಧರ್​ ಹಾಗೂ ಸಿಬ್ಬಂದಿ ಚಲಪತಿ, ರವಿನಾಯ್ಕ ತಂಡದ ಪ್ರಯತ್ನದಿಂದ ಈ ಪ್ರಕರಣದಲ್ಲಿ ಆರೋಪಿಗಳಿಂದ 13 ಸಾವಿರ ರೂ., 4 ಎಟಿಎಂ ಕಾರ್ಡ್​ ಹಾಗೂ ದ್ವಿಚಕ್ರ ವಾಹನ ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮತ್ತಿಕೆರೆ ಠಾಣಾ ಸರಹದ್ದಿನಲ್ಲಿ 2019ನೇ ಸಾಲಿನಲ್ಲಿ ಹಣಕಾಸಿನ ವಿಚಾರಕ್ಕೆ ವಿಜಯ್​ ಕುಮಾರ್​ (38) ಎಂಬುವವರುನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
    2022ರಲ್ಲಿ ಆಂಧ್ರಪ್ರದೇಶದ ಚಿತ್ತೂರಿನ ಒನ್​ ಟೌನ್​ ಪೊಲೀಸ್​ ಠಾಣೆಯ ಮುನಿಸ್ವಾಮಿ ಎಂಬುವರಿಂದ ಎಟಿಎಂ ಕಾರ್ಡ್​ ಮತ್ತು ಪಿನ್​ ಪಡೆದುಕೊಂಡು ಅವರಿಗೆ ನಕಲಿ ಕಾರ್ಡ್​ ನೀಡಿ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದೂ ಪತ್ತೆಯಾಗಿದೆ.
    ಇದೇ ರೀತಿ ಕೋಲಾರ, ಕೆಜಿಎಫ್​, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಯ ವಿವಿಧ ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಂದ ಎಟಿಎಂ ಕಾರ್ಡ್​ ಪಡೆದು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚಿಸಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆ ಆರೋಪಿ ಕಾಲಿಗೆ ಗುಂಡು

    ಕೋಲಾರ: ಕೊಲೆ ಆರೋಪಿಯನ್ನು ಬಂಧಿಸುವ ವೇಳೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮಾಲೂರು ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮಾಲೂರು ತಾಲೂಕಿನ ಜಯಮಂಗಲ ಗ್ರಾಪಂ ಸದಸ್ಯ ಅನಿಲ್​ ಕುಮಾರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಶೋಕ್​ ಮಾಲೂರು ಕೈಗಾರಿಕೆ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಗ್ಗೆ ಪೊಲೀಸರು ಬಂಧಿಸಲು ಮುಂದಾದಾಗ ಇನ್​ಸ್ಪೆಕ್ಟರ್​ ವಸಂತಕುಮಾರ್​ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
    ಆರೋಪಿ ನಡೆಸಿದ ಹಲ್ಲೆಯಿಂದ ಪೊಲೀಸ್​ ಸಿಬ್ಬಂದಿ ಕೋದಂಡಪಾಣಿ, ಅಶೋಕ್​ ಗಾಯಗೊಂಡಿದ್ದಾರೆ. ಪೊಲೀಸ್​ ಸಿಬ್ಬಂದಿ ಹಾಗೂ ಆರೋಪಿ ಅಶೋಕ್​ಗೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    6 ಮಂದಿ ಪೊಲೀಸರ ಅಮಾನತು

    ಕೋಲಾರ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಸಬ್​ಇನ್ಸ್​ಪೆಕ್ಟರ್​ ಈಶ್ವರಪ್ಪ ಹಾಗೂ ಮಾಲೂರಿನ ಎ.ಎಸ್​.ಐ. ಪ್ರಕಾಶ್​ ಸೇರಿದಂತೆ 6 ಜನ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್​.ಪಿ.ನಾರಾಯಣ್​ ಆದೇಶಿಸಿದ್ದಾರೆ.
    ಶ್ರೀನಿವಾಸಪುರ ಕಾಂಗ್ರೆಸ್​ ಮುಖಂಡ ಎಂ.ಶ್ರೀನಿವಾಸನ್​ ಕೊಲೆ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಸಬ್​ ಇನ್​ಸ್ಪೆಕ್ಟರ್​ ಈಶ್ವರಪ್ಪ ಮತ್ತು ಮುಖ್ಯಪೇದೆ ದೇವರಾಜ್​ರೆಡ್ಡಿ ಹಾಗೂ ಮಂಜುನಾಥ್​ ಅವರನ್ನು ಅಮಾನತುಗೊಳಿಸಲಾಗಿದೆ. ಮಾಲೂರಿನ ಜಯಮಂಗಲ ಗ್ರಾಪಂ ಸದಸ್ಯ ಅನಿಲ್​ಕುಮಾರ್​ ಕೊಲೆ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿರುವ ಎ.ಎಸ್​.ಐ. ಪ್ರಕಾಶ್​ ಮತ್ತು ಮುಖ್ಯಪೇದೆ ರಾಮಪ್ಪ, ಪೇದೆ ಅನಂತಮೂರ್ತಿ ಹಾಗೂ ಕೋಲಾರದ ಡಿ.ಎ.ಆರ್​. ಪೊಲೀಸ್​ ಅನಿಲ್​ ಕುಮಾರ್​ ಅವರನ್ನು ಅಮಾನತುಗೊಳಿಸಲಾಗಿದೆ.

    ಕೊಲೆ ಪ್ರಕರಣ ಮತ್ತು ಅಪರಾಧಗಳಲ್ಲಿ ಯುವಕರೇ ಹೆಚ್ಚಾಗಿ ಭಾಗಿಯಾಗುತ್ತಿರುವುದಕ್ಕೆ ಫೇಸ್​ಬುಕ್​, ಇನ್​ಸ್ಟ್ರಾಗ್ರಾಂ, ಮದ್ಯದ ಅಂಗಡಿಗಳಲ್ಲಿ ಹದಿಹರೆಯದವರಿಗೆ ಮದ್ಯ ನೀಡುವುದು, ಮನೆಗಳಲ್ಲಿ ಮಕ್ಕಳನ್ನು ಹತೋಟಿಗೆ ತೆಗೆದುಕೊಳ್ಳದೇ ಇರುವುದು ಕಾರಣವಾಗಿದೆ. ಆದರೂ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಅಪರಾಧ ಪ್ರಕರಣಗಳು ನಡೆದ ತಕ್ಷಣ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಲಾಗುತ್ತಿದೆ.
    |ಎಂ.ನಾರಾಯಣ್​, ಎಸ್ಪಿ, ಕೋಲಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts