More

    ಪ್ರಜಾಧ್ವನಿ-2ಕ್ಕೆ ಅಡ್ಡಿಯಾದ ಕೋಲಾರ ಬಿಕ್ಕಟ್ಟು; ವಾರಾಂತ್ಯದಲ್ಲಿ ಚಾಲನೆ ಸಾಧ್ಯತೆ

    ಬೆಂಗಳೂರು: ಲೋಕಸಭೆ ಚುನಾವಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಜಂಟಿ ಪ್ರಚಾರ ಯಾತ್ರೆ ಪ್ರಜಾಧ್ವನಿ-2ಕ್ಕೆ ಆರಂಭಕ್ಕೆ ಕೋಲಾರ ಟಿಕೆಟ್ ಹಂಚಿಕೆ ಬೆಳವಣಿಗೆ ಕಾಂಗ್ರೆಸ್‌ಗೆ ಅಡ್ಡಿಯಾಗಿದೆ.
    ಮಾರ್ಚ್ 29ರಂದು ಕೋಲಾರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಜಾಧ್ವನಿ-2ಕ್ಕೆ ಚಾಲನೆ ಕೊಡುವುದೆಂದು ಪಕ್ಷ ನಿರ್ಧರಿಸಿತ್ತು. ಆದರೆ ಆ ದೇವಸ್ಥಾನ ವ್ಯಾಪ್ತಿಯ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಬಿಕ್ಕಟ್ಟು ಉಲ್ಬಣವಾಗಿದ್ದರಿಂದ ಪ್ರಚಾರ ಯಾತ್ರೆಯನ್ನೇ ಮುಂದೂಡುವ ಸ್ಥಿತಿ ನಿರ್ಮಾಣವಾಯಿತು.
    ಪೂರ್ವ ನಿಗದಿತ ವೇಳಾಪಟ್ಟಿ ಪ್ರಕಾರ ಮಾ.29ರಂದು ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಮುನ್ನುಡಿ ಇಟ್ಟು, 30ರಂದು ಹಾಸನ ಜಿಲ್ಲೆ ಹೊಳೆನರಸೀಪುರ, ಏಪ್ರಿಲ್ 3ರಂದು ಚಾಮರಾಜನಗರ, ಮೈಸೂರು, 4ರಂದು ಚಿತ್ರದುರ್ಗ, 6ರಂದು ಉಡುಪಿ, ಚಿಕ್ಕಬಳ್ಳಾಪುರ, 7ರಂದು ಮಂಡ್ಯ, ಬೆಂಗಳೂರು ದಕ್ಷಿಣ, 8ರಂದು ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವುದೆಂದು ನಿಶ್ಚಯವಾಗಿತ್ತು.
    ಇದೀಗ ಕಾರ್ಯಕ್ರಮದಲ್ಲಿ ವ್ಯತ್ಯಯವಾಗಿದ್ದು, ಮುಖ್ಯಮಂತ್ರಿಯವರು ಏಪ್ರಿಲ್ 1ರಂದು ಮೈಸೂರು ಹಾಗೂ 2ರಂದು ಚಾಮರಾಜನಗರ ಜಿಲ್ಲೆಗೆ ಭೇಟಿಕೊಟ್ಟು ವಿವಿಧ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
    ಪಕ್ಷದ ಮಾಹಿತಿಗಳ ಪ್ರಕಾರ ಏಪ್ರಿಲ್ ವಾರಾಂತ್ಯದಲ್ಲಿ ಪ್ರಜಾಧ್ವನಿ-2ಕ್ಕೆ ಕುರುಡುಮಲೆಯಲ್ಲಿ ಚಾಲನೆ ಸಿಗಲಿದೆ. ಏಪ್ರಿಲ್ 5 ಅಥವಾ 6ರಂದು ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆಗಳಾಗಿದ್ದು, ಸೋಮವಾರ ದಿನಾಂಕ ಅಂತಿಮಗೊಳ್ಳಲಿದೆ.
    ಪ್ರಸ್ತುತ ಕೋಲಾರದಲ್ಲಿ ಈ ವರೆಗೆ ಬಣಗಳ ಬಿಕ್ಕಟ್ಟು ಬಗೆಹರಿದಂತೆ ಕಾಣಿಸುತ್ತಿಲ್ಲ. ಒಂದೊಮ್ಮೆ ಪ್ರಚಾರ ಸಭೆಯಲ್ಲಿ ಒಡಕು ಮೂಡಿದರೂ ನಾಡಿಗೆ ಬೇರೆ ಸಂದೇಶ ಹೋಗುವ ಅಂದಾಜಿನಲ್ಲಿ ಜಂಟಿ ಪ್ರಚಾರ ಯಾತ್ರೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts