More

    ಕೋಲಾರ-ಬೇತಮಂಗಲ ರಸ್ತೆ ಅಭಿವೃದ್ಧಿಪಡಿಸಲು ಪಟ್ಟು

    ಕೋಲಾರ: ಕೋಲಾರ-ಬೇತಮಂಗಲ ರಸ್ತೆ ಎರಡು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ನಮ್ಮ ಕೋಲಾರ ರೈತ ಸಂಘದ ಕಾರ್ಯಕರ್ತರು ತಾಲೂಕಿನ ನಡುಪಲ್ಲಿ ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ನಡುಪಲ್ಲಿ ಗ್ರಾಮದಲ್ಲಿ ಜಮಾಯಿಸಿದ ಕಾರ್ಯಕರ್ತರು ನಡುಪಲ್ಲಿ, ಹೊನ್ನೇನಹಳ್ಳಿ ಗ್ರಾಮಸ್ಥರು ರಸ್ತೆ ತಡೆದು ಲೋಕೋಪಯೋಗಿ ಇಲಾಖೆ, ಗುತ್ತಿಗೆದಾರರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ರಸ್ತೆ ತಡೆಯಿಂದ ಕೆಲ ನಿಮಿಷಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತು.

    ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಕೋಲಾರದಿಂದ ಬೇತಮಂಗಲಕ್ಕೆ ಹಾದು ಹೋಗುವ ಮುಖ್ಯ ರಸ್ತೆ ಹಾಳಾಗಿ ಎರಡು ವರ್ಷಗಳೇ ಕಳೆದಿವೆ. ಅಂದಿನಿಂದ ರಸ್ತೆಯನ್ನು ಸರಿಪಡಿಸಲು ಒತ್ತಾಯಿಸಿಕೊಂಡು ಬಂದಿದ್ದರು ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ದೂರಿದರು.
    ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಯ ಬಗ್ಗೆ ಗಮನಕ್ಕೆ ತರಲಾಗಿತ್ತು. ಆಗ ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದ್ದು ಗುತ್ತಿಗೆದಾರನಿಗೆ ಹೇಳಿ ವಾರದೊಳಗೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಪ್ರಸಂಗ ನಡೆದಿವೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಇದಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

    ಬೇತಮಂಗಲ ರಸ್ತೆಯಲ್ಲಿ ನಡುಪಲ್ಲಿ, ಹೊನ್ನೇತನಹಳ್ಳಿ, ಕೋಲಾರಮ್ಮ ಕಟ್ಟೆ ಕೆಳಗೆ, ಚಾಮರಹಳ್ಳಿ, ಪಟ್ನ ಸೇರಿದಂತೆ ವಿವಿಧೆಡೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಮಳೆ ಬಂದರೆ ರಸ್ತೆಯಲ್ಲಿ ಗುಂಡಿಗಳು ಇರುವುದು ಗೊತ್ತಾಗುವುದಿಲ್ಲ. ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಅಗ್ರಹಾರ ಸೋಮರಸನಹಳ್ಳಿ ಎಂ.ನಾಗರಾಜಪ್ಪ ಮಾತನಾಡಿ, ಕಳೆದ ವಾರ ಕೋಲಾರದಿಂದ ಊರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿ 7.30ರ ಸುಮಾರಿನಲ್ಲಿ ರಸ್ತೆ ಅಪಘಾತದಲ್ಲಿ ಕಾಲಿಗೆ ತೀವ್ರವಾಗಿ ಗಾಯವಾಗಿದೆ ಎಂದರು. ರಾತ್ರಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಗುಂಡಿ ಇರುವುದು ಗೋಚರಿಸಲಿಲ್ಲ. ರಸ್ತೆಯು ಬಹಳ ಹದಗೆಟ್ಟಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಇ ಮಂಜುನಾಥ್ ಮನವಿ ಸ್ವೀಕರಿಸಿ ಮಾತನಾಡಿ, ಹಿಂದೆ ಮನವಿ ಸಲ್ಲಿಸಿದಾಗ ಗುತ್ತಿಗೆದಾರರಿಗೆ ಸೂಚಿಸಿ ಜಲ್ಲಿಕಲ್ಲು ಹಾಕಿಸಲಾಗಿದೆ. ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸುತ್ತಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು, ವಾರದೊಳಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts