More

    ಬಂದ್​ಗಿಲ್ಲ ಕೋಲಾರ ಜನತೆಯ ಸ್ಪಂದನೆ: ಸಂಘಟನೆಗಳ ಪ್ರತಿಭಟನೆಗೆ ಸೀಮಿತ, ಜನ ಜೀವನ ಯಥಾಸ್ಥಿತಿ

    ಕೋಲಾರ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಕೋಲಾರದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಜನ ಜೀವನ ಯಥಾಸ್ಥಿತಿಯಲ್ಲಿತ್ತು. ಅಂಗಡಿ ಮುಂಗಟ್ಟುಗಳು, ಹೋಟೆಲ್​ಗಳು ತೆರೆದಿದ್ದವು. ಎಪಿಎಂಸಿ, ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ಅಬಾಧಿತವಾಗಿತ್ತು. ಕೆಎಸ್​ಆರ್​ಟಿಸಿ ಹಾಗೂ ಖಾಸಗಿ ಬಸ್, ಆಟೋಗಳ ಸಂಚಾರಕ್ಕೆ ಎಂದಿನಂತಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್​ಗಳು, ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

    ಜಯಕರ್ನಾಟಕ ಸಂಘಟನೆ, ಕರವೇ ನಾರಾಯಣಗೌಡ ಹಾಗೂ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೊಷಣೆ ಕೂಗಿದರಲ್ಲದೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಗಾಂಧಿವನದಿಂದ ಬೈಕ್ ರ‍್ಯಾಲಿ ನಡೆಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿ ಎಡಿಸಿ ಡಾ.ವಿ.ಸಿ.ಸ್ನೇಹಾಗೆ ಮನವಿ ಸಲ್ಲಿಸಿದರು.

    ಮರಾಠ ಸಮುದಾಯದಲ್ಲಿರುವ 32 ಪಂಗಡಗಳಲ್ಲಿ ಅತಿ ಹಿಂದುಳಿದ ವರ್ಗಕ್ಕೆ ಪ್ರಾಧಿಕಾರದಿಂದ ಉಪಯೋಗವಾಗುವಂತೆ ಸರ್ಕಾರ ಕ್ರಮ ವಹಿಸಬೇಕು. ಬೆಳಗಾವಿ-ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು. ಇಂತಹ ಸಂಘಟನೆಗಳಿಗೆ ಬೆಳಗಾವಿಯಲ್ಲಿ ಸಮಾವೇಶ ನಡೆಸಲು ಸರ್ಕಾರ ಅನುಮತಿ ನೀಡಬಾರದೆಂದು ಜಿಲ್ಲಾಧ್ಯಕ್ಷ ಚಂಬೆರಾಜೇಶ್ ಒತ್ತಾಯಿಸಿದರು.

    ಜಿಲ್ಲಾ ಗೌರವಾಧ್ಯಕ್ಷ ಶಾಂತಿಸಾಗರ ಮರೇಗೌಡ ತಾಲೂಕು ಅಧ್ಯಕ್ಷ ದಿಂಬ ಡಿ.ಎಂ.ನಾಗರಾಜಗೌಡ, ಕಾರ್ಯಾಧ್ಯಕ್ಷ ಮತ್ತಿಕುಂಟೆ ಶ್ರೀನಿವಾಸಗೌಡ, ಕ್ರಾಂತಿಸೇನೆ ಜಿಲ್ಲಾಧ್ಯಕ್ಷ ಮಂಗಸಂದ್ರ ನಾಗೇಶ್, ಪದಾಧಿಕಾರಿಗಳಾದ ಸಂಪತ್​ಕುಮಾರ್, ಅರಿನಾಗನಹಳ್ಳಿ ಹರೀಶ್, ಅವಿನಾಶ್​ನಾರಾಯಣ್, ಮುದುವತ್ತಿ ರಮೇಶ್, ಅಗರ ಮುನಿಸ್ವಾಮಿ, ಲೋಕೇಶ್, ರಮೇಶ್​ಬಾಬು, ಸುಬ್ರಮಣಿಗೌಡ, ಕೀಲುಕೋಟೆ ಪುನೀತ್, ಮುದುವಾಡಿ ಮುರಳಿ, ತಲಗುಂದ ತೌಸೀಪ್, ಅರಿನಾಗನಹಳ್ಳಿ ಶ್ರೀನಿವಾಸ, ದಶರಥ್, ಸಂತೋಷ್, ರಾಜೇಶ್, ಅಶೋಕ್, ಯಲ್ಲಪ್ಪ ಉಪಸ್ಥಿತರಿದ್ದರು.

    ಕರವೇ ಸಮರ ಸೇನೆ: ಕರವೇ ಸಮರ ಸೇನೆ ಕಾರ್ಯಕರ್ತರು ಕೆಎಸ್​ಆರ್​ಟಿಸಿಬಸ್ ನಿಲ್ದಾಣದ ಬಳಿ ಪ್ರತಿಭಟಿಸಿದರಲ್ಲದೆ ಕನ್ನಡ ಸಂಘಟನೆಗಳ ಬಗ್ಗೆ ತುಚ್ಛ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಘೊಷಣೆ ಕೂಗಿದರು. ತಮಿಳು ತೆಲುಗು ಅಭಿವೃದ್ಧಿ ನಿಗಮ ಮಾಡುವುದಾಗಿ ಹೇಳಿಕೆ ನೀಡಿರುವ ಡಿಸಿಎಂ ಅಶ್ವತ್ಥನಾರಾಯಣ ಅವರ ಹೇಳಿಕೆ ಖಂಡಿಸಿದರು. ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಅಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಅನಿಲ್, ಮುಖಂಡರಾದ ಶ್ರೀಕಾಂತ್, ಆರ್ಯ, ರಾಜ್​ಶೇಖರ್, ಗಣೇಶ್, ಸಂಘರ್ಷ, ವಿನಯ್ ಉಪಸ್ಥಿತರಿದ್ದರು.

    ರೈತ ಸಂಘದಿಂದ ಸಗಣಿ ಮತ್ತು ಮೊಟ್ಟೆ ಚಳುವಳಿ: ಕೋಲಾರ: ಜಾತಿಗೊಂದು ನಿಗಮ ಸ್ಥಾಪನೆ ಕೈಬಿಟ್ಟು, ಹೋರಾಟಗಾರರನ್ನು ಅವವೇಳವಾಗಿ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮವಹಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮೆಕ್ಕೆ ವೃತ್ತದಲ್ಲಿ ಸಗಣಿ ಮತ್ತು ಮೊಟ್ಟೆ ಚಳವಳಿ ನಡೆಸಿತು.

    ಸರ್ಕಾರದ ಪ್ರತಿಕೃತಿಗೆ ಸಗಣಿ ನೀರು ಸುರಿದು ಮೊಟ್ಟೆ ಒಡೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ ರೈತ ಸಂಘದ ಮುಖಂಡರು, ರಾಜ್ಯದಲ್ಲಿ ಸುಮಾರು 2800 ಜಾತಿಗಳಿವೆೆ. ಜಾತಿಗೊಂದು ಪ್ರಾಧಿಕಾರ, ನಿಗಮ ಮಾಡುತ್ತಾ ಹೋದರೆ ಸರ್ಕಾರದ ಅವಶ್ಯಕತೆ ಇಲ್ಲ ಎಂದು ಮೂದಲಿಸಿದರು.

    ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದು ಬಿಟ್ಟು, ಜಾತಿಗೊಂದು ನಿಗಮ, ಭಾಷೆಗೊಂದು ಪ್ರಾಧಿಕಾರ ಮಾಡಿ ಕನ್ನಡಿಗರನ್ನು ಒಡೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಕೂಡಲೆ ನಿಗಮ ಸ್ಥಾಪನೆ ಆದೇಶ ಕೈ ಬಿಡಬೇಕು ಎಂದು ಆಗ್ರಹಿಸಿದರು.

    ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ಯತ್ನಾಳ ಅವರು ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕೆಂದು ತಿಳಿಯದೆ ನೀಡಿರುವ ಹೇಳಿಕೆ ಖಂಡನೀಯ ಎಂದರು.

    ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರುಸೇನೆ ಅಧ್ಯಕ್ಷ ಚಾಂದ್​ಪಾಷಾ, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಕಿರಣ್, ಸುಪ್ರೀಂ ಚಲ, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ನಾರಾಯಣಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts