More

    ವಿರಾಟ್​ ಕೊಹ್ಲಿ ವಿರುದ್ಧ ಬಿಸಿಸಿಐ ಶಿಸ್ತುಕ್ರಮ? ಟೆಸ್ಟ್ ನಾಯಕತ್ವವೂ ಕೈಜಾರುತ್ತಾ?

    ಬೆಂಗಳೂರು: ಮಂಡಳಿ ಅಧ್ಯಕ್ಷರ ಮಾತಿಗೆ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಎಬ್ಬಿಸಿರುವ ಬಿರುಗಾಳಿಯನ್ನು ಯಾವ ರೀತಿ ಶಾಂತ ಮಾಡುವುದು ಎಂಬ ಬಗ್ಗೆ ಬಿಸಿಸಿಐ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದಿವೆ. ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಎದುರಾಗಿರುವ ಈ ವಿವಾದವನ್ನು ಯಾವ ರೀತಿ ನಿಭಾಯಿಸುವುದು ಎಂಬ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎನ್ನಲಾಗಿದೆ. ಆಂತರಿಕ ವಿಚಾರಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡು ಭಾರತೀಯ ಕ್ರಿಕೆಟ್‌ನ ವರ್ಚಸ್ಸು ಕುಗ್ಗಿಸಿರುವುದಕ್ಕೆ ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಕಾಣಿಸಿದೆ. ಆದರೆ ಯಾವುದಕ್ಕೂ ಅವಸರ ಪಡದೆ, ಸಾವಕಾಶವಾಗಿ ವಿವಾದ ಬಗೆಹರಿಸುವತ್ತ ಬಿಸಿಸಿಐ ಗಮನಹರಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕವಷ್ಟೇ ಕೊಹ್ಲಿಗೆ ಶೋಕಾಸ್ ನೋಟಿಸ್ ಜಾರಿಯಾಗಬಹುದು ಎನ್ನಲಾಗಿದೆ.

    ಕೊಹ್ಲಿ ಸ್ಫೋಟಕ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ಗುರುವಾರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಯಾವುದೇ ಪ್ರಕಟಣೆ ನೀಡುವುದಿಲ್ಲ ಅಥವಾ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂದಿದ್ದಾರೆ. ಜತೆಗೆ ಈ ವಿಚಾರವನ್ನು ಮಂಡಳಿಗೆ ಬಿಟ್ಟುಬಿಟ್ಟಿದ್ದು, ಅದುವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದಿದ್ದಾರೆ. ‘ಬಿಸಿಸಿಐ ನೋಡಿಕೊಳ್ಳುತ್ತದೆ’ ಎಂದು ಗಂಗೂಲಿ ಹೇಳಿರುವುದು, ಕೊಹ್ಲಿ ಮೇಲಿನ ಶಿಸ್ತುಕ್ರಮದ ಮುನ್ಸೂಚನೆಯೇ ಎಂಬ ಕೌತುಕವನ್ನೂ ಹುಟ್ಟಿಸಿದೆ.

    ಈ ಮುನ್ನ ಕೊಹ್ಲಿ ಹೇಳಿಕೆಗಳ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಬುಧವಾರವೇ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಲಿದ್ದಾರೆ ಎನ್ನಲಾಗಿದ್ದರೂ, ಬಳಿಕ ಅದು ರದ್ದುಗೊಂಡಿತ್ತು. ಸದ್ಯಕ್ಕೆ ಕೊಹ್ಲಿ ಮಾತಿಗೆ ಯಾವುದೇ ತಿರುಗೇಟು ನೀಡಲು ಮಂಡಳಿ ಹಿಂಜರಿದಿದೆ. ವಿವಿಧ ಆಯಾಮಗಳ ಬಗ್ಗೆ ಪರಿಶೀಲನೆಯನ್ನಷ್ಟೇ ನಡೆಸುತ್ತಿದೆ.

    ಕ್ರಿಕೆಟಿಗರ ಕೇಂದ್ರಿಯ ಗುತ್ತಿಗೆ ನಿಯಮಾವಳಿಗಳ ಪ್ರಕಾರ, ಯಾವ ಆಟಗಾರನೂ ಮಂಡಳಿ ಅಥವಾ ಅಧಿಕಾರಿಗಳ ವಿರುದ್ಧ ಟೀಕೆಗಳನ್ನು ಮಾಡುವಂತಿಲ್ಲ. ಆದರೆ ಕೊಹ್ಲಿ ಮಾತುಗಳು ಅವರ ನೇರ ಹೇಳಿಕೆಗಳಲ್ಲ. ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತುಕ್ರಮದ ಮಾನದಂಡವೂ ಗೊಂದಲಮಯವಾಗಿದೆ. ಐಸಿಸಿ ಟ್ರೋಫಿ ಗೆಲ್ಲದ ಕಾರಣ ನನ್ನನ್ನು ನಾಯಕತ್ವದಿಂದ ಕೆಳಗಿಳಿಸಿರುವುದನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದೂ ಕೊಹ್ಲಿ ಹೇಳಿದ್ದರು. ಹೀಗಾಗಿ ಬಿಸಿಸಿಐ ಸದ್ಯಕ್ಕೆ ಕ್ರಿಕೆಟ್ ಆಟದ ‘ಸಿಕ್ಸರ್-ಬೌನ್ಸರ್-ಬೀಮರ್’ಗಳಿಗೆ ಬದಲಾಗಿ ಎಚ್ಚರಿಕೆಯ ‘ಚದುರಂಗ’ದಾಟಕ್ಕೆ ಆದ್ಯತೆ ನೀಡಿದೆ.

    ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೂ ಕುತ್ತು?
    ಮಂಡಳಿಯ ವರ್ಚಸ್ಸು ಕುಂದಿಸುವಂತೆ ನಡೆದುಕೊಂಡಿರುವ ವಿರಾಟ್ ಕೊಹ್ಲಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಸಿಸಿಐ ಮುಂದಾದರೆ, ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಅವರು ಟೆಸ್ಟ್ ತಂಡದ ನಾಯಕತ್ವವನ್ನೂ ಕಳೆದುಕೊಂಡರೆ ಅಚ್ಚರಿ ಇಲ್ಲವೆನಿಸಿದೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದರೆ ಅವರನ್ನು ಕಿತ್ತೊಗೆಯುವುದು ಸ್ವಲ್ಪ ಕಷ್ಟವಾಗಲಿದೆ. ಮೂಲಗಳ ಪ್ರಕಾರ ಬಿಸಿಸಿಐ ಸದ್ಯ ಕೊಹ್ಲಿ ಸುದ್ದಿಗೋಷ್ಠಿಯ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತಿದ್ದು, ಅವರ ಯಾವ ಮಾತುಗಳನ್ನು ಆಕ್ಷೇಪಾರ್ಹವಾಗಿ ಪರಿಗಣಿಸಬಹುದು ಎಂಬುದರ ಪರಾಮರ್ಶೆ ನಡೆಸುತ್ತಿದೆ.

    ಹೌದು ಅಥವಾ ಇಲ್ಲ ಎನ್ನುವಂತಿಲ್ಲ!
    ಟಿ20 ನಾಯಕತ್ವ ತ್ಯಜಿಸದಂತೆ ನನಗೆ ಮನವಿ ಮಾಡಿರಲಿಲ್ಲ ಮತ್ತು ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಬಗ್ಗೆ ಮೊದಲೇ ಮಾಹಿತಿ ನೀಡಿರಲಿಲ್ಲ ಎಂಬ ಕೊಹ್ಲಿ ಹೇಳಿಕೆ ಬಿಸಿಸಿಐಅನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದೆ. ಕೊಹ್ಲಿ ಈ ಮಾತನ್ನು ಈಗ ಬಿಸಿಸಿಐ ಹೌದು ಎನ್ನವಂತಿಲ್ಲ. ಹಾಗೆ ಹೇಳಿದರೆ ತನ್ನ ಅಧ್ಯಕ್ಷರೇ ಸುಳ್ಳು ಹೇಳಿದ್ದಾರೆ ಎಂದಂತಾಗುತ್ತದೆ. ಇನ್ನು ಕೊಹ್ಲಿ ಹೇಳಿದ್ದು ನಿಜವಲ್ಲ ಎಂದರೆ, ತನ್ನದೇ ರಾಷ್ಟ್ರೀಯ ತಂಡದ ನಾಯಕನೊಬ್ಬ ‘ಸುಳ್ಳುಗಾರ’ ಎಂದಂತಾಗುತ್ತದೆ. ಹೀಗಾಗಿ ‘ಹಾವೂ ಸಾಯದಂತೆ, ಕೋಲೂ ಮುರಿಯದಂತೆ’ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದು ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಮಂಡಳಿ ತಕ್ಷಣಕ್ಕೆ ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ.

    ವಾಲ್‌ಗೆ ದೊಡ್ಡ ಸವಾಲ್!
    ಭಾರತ ಎ, ಕಿರಿಯರ ತಂಡಗಳ ಕೋಚ್ ಆಗಿ ಭಾರಿ ಯಶಸ್ಸು ಕಂಡಿರುವ ದಿಗ್ಗಜ ರಾಹುಲ್ ದ್ರಾವಿಡ್‌ಗೆ ಇದೀಗ ಟೀಮ್ ಇಂಡಿಯಾದ ತರಬೇತುದಾರರಾದ ಬೆನ್ನಲ್ಲೇ ದೊಡ್ಡ ಸವಾಲೊಂದು ಎದುರಾಗಿದೆ. ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ವಿವಾದ ಮೈದಾನದಲ್ಲಿ ತಂಡದ ನಿರ್ವಹಣೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ದ್ರಾವಿಡ್ ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ದ್ರಾವಿಡ್ ಅವರ ಮ್ಯಾನ್-ಮ್ಯಾನೇಜ್‌ಮೆಂಟ್ ಕೌಶಲಕ್ಕೆ ಇದೊಂದು ಸತ್ವಪರೀಕ್ಷೆಯಾಗಿದ್ದು, ಈ ಸೂಕ್ಷ್ಮ ಸನ್ನಿವೇಶವನ್ನು ಹೇಗೆ ನಿಭಾಯಿಸುವರು ಎಂಬುದನ್ನೂ ಕಾದುನೋಡಬೇಕಿದೆ. ತಂಡದ ನಾಯಕ ಮತ್ತು ಅತ್ಯುತ್ತಮ ಬ್ಯಾಟರ್ ಸಕಾರಾತ್ಮಕವಾಗಿರುವಂತೆ ಅವರು ನೋಡಿಕೊಳ್ಳಬೇಕಿದೆ ಎಂದು ವೀಕ್ಷಕವಿವರಣೆಕಾರ ಹರ್ಷ ಬೋಗ್ಲೆ ಹೇಳಿದ್ದಾರೆ.

    *ಬಿಸಿಸಿಐ ಜತೆಗಿನ ಭಿನ್ನಾಭಿಪ್ರಾಯಗಳ ಕುರಿತು ವಿರಾಟ್ ಕೊಹ್ಲಿ ಹೇಳಿಕೆ ನೀಡಿರುವ ಸಮಯ ಸರಿಯಾದುದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಮನ ಅದರತ್ತ ಇರಬೇಕಾಗಿತ್ತು. ಯಾರ ವಿರುದ್ಧವೂ ಬೆರಳೆತ್ತಿ ತೋರಿಸುವಂಥ ಸಮಯ ಇದಲ್ಲ. ಮಂಡಳಿ ಅಧ್ಯಕ್ಷರು ಮತ್ತು ತಂಡದ ನಾಯಕ ಇಬ್ಬರಿಗೂ ಅವರದೇ ಪ್ರತಿಷ್ಠೆಗಳಿವೆ. ಸಾರ್ವಜನಿಕವಾಗಿ ಪರಸ್ಪರರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಸೌರವ್ ಅಥವಾ ಕೊಹ್ಲಿ ಯಾರೇ ಆಗಿರಲಿ, ಇದು ಉತ್ತಮವಾದುದಲ್ಲ. ಈಗ ದೇಶದ ಬಗ್ಗೆ ಮಾತ್ರ ಯೋಚಿಸಿ.
    | ಕಪಿಲ್ ದೇವ್, ಮಾಜಿ ನಾಯಕ

    *ಮಂಡಳಿ ಅಧ್ಯಕ್ಷರ ಗೌರವವನ್ನೂ ಒಳಗೊಂಡ ಈ ಸೂಕ್ಷ್ಮ ವಿಚಾರವನ್ನು ಯಾವ ರೀತಿ ನಿಭಾಯಿಸುವುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯಗಳನ್ನೂ ಪಡೆಯಲಾಗಿದೆ. ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸದ ಈ ಸಮಯದಲ್ಲಿ ಯಾವುದೇ ದುಡುಕಿನ ಕ್ರಮ ತೆಗೆದುಕೊಂಡರೆ ಟೀಮ್ ಇಂಡಿಯಾದ ನೈತಿಕ ಸ್ಥೈರ್ಯಕ್ಕೆ ಹೊಡೆತ ಬೀಳಬಹುದು.
    | ಬಿಸಿಸಿಐ ಅಧಿಕಾರಿ

    *ವಿವಾದವಾಗುವಂಥದ್ದೇನೂ ನನಗೆ ಕಾಣಿಸುತ್ತಿಲ್ಲ. ಆಯ್ಕೆಗಾರರು ಏಕದಿನ ನಾಯಕತ್ವಕ್ಕೆ ನಿಮ್ಮನ್ನು ಪರಿಗಣಿಸುವುದಿಲ್ಲ ಎಂದು ಕೊಹ್ಲಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆಯ್ಕೆಗಾರರಿಗೆ ಆ ಅಧಿಕಾರವಿದೆ. ಅವರ ನಿರ್ಧಾರವನ್ನು ಅವರು ತಿಳಿಸಿದ್ದಾರೆ.
    | ಸುನೀಲ್ ಗಾವಸ್ಕರ್, ಮಾಜಿ ನಾಯಕ

    PHOTO: ಸವಾಲಿನ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ವಿರಾಟ್ ಕೊಹ್ಲಿ ಪಡೆ

    ರಾಜಕೀಯಕ್ಕೆ ಸೇರ್ತಾರಂತೆ ಕ್ರಿಕೆಟಿಗ ಹರ್ಭಜನ್ ಸಿಂಗ್; ಬಿಜೆಪಿಯೋ, ಕಾಂಗ್ರೆಸ್ಸೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts