More

    ಉತ್ತಮ ಮಳೆಯಾಗಿ ಬರಗಾಲ ದೂರ

    ಸೊರಬ: ಭಾರತೀಯ ಪರಂಪರೆಯಲ್ಲಿ ಸಂವತ್ಸರಗಳಿಗೆ ವಿಶೇಷ ಮಹತ್ವವಿದೆ. ನಾಡಿನಲ್ಲಿ ಮಳೆ ಹೆಚ್ಚಾಗಲಿದ್ದು ಯಾರೂ ಅತಂಕಪಡುವ ಅಗತ್ಯವಿಲ್ಲ ಎಂದು ಕೋಡಿಮಠ ಮಹಾ ಸಂಸ್ಥಾನದ ಜಗದ್ಗುರು ಡಾ. ಶ್ರೀ ಶಿವಾನಂದ ರಾಜಯೋಗೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ತಾಲೂಕಿನ ಜಡೆ ಸಂಸ್ಥಾನ ಮಠದ ಶ್ರೀ ಸಿದ್ಧವೃಷಬೇಂದ್ರ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧ ವೃಷಭೇಂದ್ರ ಸ್ವಾಮಿಗಳ ರಾಜಬೀದಿ ಉತ್ಸವ, 48 ದಿನದ ಅನುಷ್ಠಾನ ಸಮಾರೋಪ ಮತ್ತು ಧರ್ಮ ಸಭೆಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
    ಪ್ರಾಕೃತಿಕ ವಿಕೋಪಗಳು, ಮತೀಯ ಗಲಭೆಗಳು ಉಂಟಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ಈ ವರ್ಷದಲ್ಲಿ ಅತಿಯಾದ ಮಳೆಯಾಗಿ ಬರಗಾಲ ದೂರವಾಗಲಿದೆ. ಕೀಳು ಮೇಲಾಗುತ್ತದೆ, ಮೇಲು ಕೀಳಾಗುತ್ತದೆ. ಹೆಣ್ಣು ಮಕ್ಕಳ ಪ್ರಭಾವ ಹೆಚ್ಚಾಗುತ್ತದೆ ಎಂದರು.
    ಆನಂದಪುರದ ಮುರಾಘಮಠ ಮತ್ತು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಜೀವನದಲ್ಲಿ ತನ್ನೊಳಗಿನ ದುರ್ಗುಣ ಸುಟ್ಟು ಒಳ್ಳೆಯ ಸದ್ಗುಣಗಳನ್ನು ರೂಢಿಸಿಕೊಳ್ಳುವುದೆ ನಿಜವಾದ ತಪಸ್ಸು. ಒಳ್ಳೆಯ ಮನುಷ್ಯನನ್ನಾಗಿ ಪರಿವರ್ತನೆ ಮಾಡುವುದೇ ತಪಸ್ಸಿನ ಹಾದಿಯಾಗಿದೆ. ಇದನ್ನು ಅನುಷ್ಠಾನದಿಂದ ಮಾತ್ರ ಪಡೆಯಲು ಸಾಧ್ಯ ಎಂದರು.
    ಸ್ವಾಮೀಜಿಯಾಗಲು ಬಯಸುವವರು ಭಕ್ತರ ಕಲ್ಯಾಣವೇ ಮುಖ್ಯಯಾಗಿರಬೇಕೇ ಹೊರತು ಸ್ವಾಮಿ ಎಂಬ ಭ್ರಮೆಯಲ್ಲಿ ಇರಬಾರದು. ಮನುಷ್ಯ ಇಂದಿನ ಆಧುನಿಕ ಯುಗದಲ್ಲಿ ಇಂದ್ರಿಯಗಳ ದಾಸ್ಯಕ್ಕೆ ಒಳಗಾಗುತ್ತಿದ್ದಾನೆ. ಅದನ್ನು ಸಂಯಮದಿಂದ ಮಾತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯ. ಇಂದು ಉಪವಾಸಗಳು ಮಹತ್ವ ಕಳೆದುಕೊಳ್ಳುತ್ತಿವೆ. ಸಂಯಮದಿಂದ ಇವುಗಳ ಅನುಷ್ಠಾನ ಸಾಧ್ಯ ಎಂದು ಹೇಳಿದರು.
    ಅಥಣಿಯ ಶೆಗುಣಿಸಿ ವಿರಕ್ತ ಮಠದ ಶ್ರೀ ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಗುರುಗಳು, ಸ್ವಾಮೀಜಿಗಳು ತಮ್ಮ ಅಂತಃಕರಣದಲ್ಲಿ ಮೊದಲು ಸಂಸ್ಕಾರ ಹೊಂದಿರಬೇಕು. ಮೇಣದ ಬತ್ತಿ ತನ್ನನ್ನು ಹೊತ್ತಿಸಿಕೊಂಡು ಬೆಳಕು ನೀಡುವಂತೆ ಸ್ವಾಮೀಜಿಗಳು ಮೇಣದ ಬತ್ತಿಯ ಹಾಗೆ ಸೇವೆ ನೀಡಬೇಕು ಎಂದರು.
    ಜಡೆ ಸಂಸ್ಥಾನ ಮಠದ ಕಿರಿಯ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿ, ರೈತರ ಹಿತಕಾಪಾಡಲು ಉತ್ತಮ ಮಳೆ, ಬೆಳೆ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಗುರು ಮಹಾಂತ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಠದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತೇನೆ. ಈ ಮಠದಲ್ಲಿ ಕಿರಿಯ ಗುರುವಾಗಿ ನೇಮಕಗೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
    ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗದಗಯ್ಯ ದೇವರು, ಶಿವಪುತ್ರ ಸ್ವಾಮೀಜಿ, ಹುಬ್ಬಳಿಯ ಷಡಾಕ್ಷರಿ ಸ್ವಾಮೀಜಿ, ಸಿ.ಪಿ. ಜೈಶೀಲಪ್ಪಗೌಡ, ಈರೇಗೌಡ, ಗಂಗಾಧರಪ್ಪ, ನಾಗರಾಜ ಗೌಡ, ವಕೀಲ ಶಿವಕುಮಾರ ಗೌಡ, ರಾಜುಗೌಡ, ವೀರೇಂದ್ರ ಪಾಟೀಲ್, ಮಹಾಂತೇಶ್ ಕಳ್ಳಿಕೊನೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts