More

    ಅವರಿಗೆ ಕೌಂಟರ್ ಮಾಡಿ… ನಾ ಕಾರಿನಲ್ಲಿ ಬರುತ್ತೇನೆ

    ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
    ಕೊಡಗಿನ ಗಡಿ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಇದರಿಂದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶಿತರಾಗಿದ್ದರು. ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಸಂಘ ಪರಿವಾರದವರು ಪ್ರತಿಭಟನೆ ಮಾಡಲು ಸೇರಿರುವ ಮಾಹಿತಿ ಸಿಕ್ಕಾಗ… ಅವರಿಗೆ ಕೌಂಟರ್ ಮಾಡಿ… ನಾ ಅಲ್ಲಿಗೆ ಕಾರಿನಲ್ಲಿ ಬರುತ್ತೇನೆಂದು ಸೂಚನೆ ನೀಡಿದರು.

    ಕರ್ತೋಜಿ, ೨ನೇ ಮೊಣ್ಣಂಗೇರಿ, ಕೊಯನಾಡಿನಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ವೀಕ್ಷಿಸಿದ ಬಳಿಕ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಭವನ ಎದುರು ನಿರ್ಮಿಸಿರುವ ತಡೆಗೋಡೆ ಕಾಮಗಾರಿ ವೀಕ್ಷಿಸಿದರು. ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಮತ್ತು ಕಳಪೆ ಕಾಮಗಾರಿ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಮಾಹಿತಿ ನೀಡಿದರು.

    ಮಡಿಕೇರಿ ನಗರದತ್ತ ತೆರಳುವ ವೇಳೆ ಅವರಿಗೆ ಕೌಂಟರ್ ಮಾಡಿ… ನಾ ಅಲ್ಲಿಗೆ ಕಾರಿನಲ್ಲಿ ಬರುತ್ತೇನೆಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ ಅವರಿಗೆ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು. ತದನಂತರ ಮಿಥುನ್ ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ಘೋಷಣೆಗಳೊಂದಿಗೆ ತಡೆಗೋಡೆ ಸ್ಥಳದಿಂದ ತಿಮ್ಮಯ್ಯ ವೃತ್ತದತ್ತ ಪಾದಯಾತ್ರೆಯಲ್ಲಿ ಸಾಗಿದರು.

    ಕಾಂಗ್ರೆಸ್ ಕಾರ್ಯಕರ್ತರ ಅಬ್ಬರಕ್ಕೆ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಸಂಘ ಪರಿವಾರದ ಕಾರ್ಯಕರ್ತರು ಭಯಭೀತರಾದ್ದಂತೆ ಕಂಡು ಬಂತು. ಈ ಸಂದರ್ಭ ಸಂಘ ಪರಿವಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೇರ ಸಂಘರ್ಷ ಆಗುವುದನ್ನು ಪೊಲೀಸರು ತಡೆದರು.

    ಸಿದ್ದರಾಮಯ್ಯ ಇದ್ದ ಕಾರು ಜನರಲ್ ತಿಮ್ಮಯ್ಯ ವೃತ್ತದಿಂದ ಸುದರ್ಶನ ಅತಿಥಿಗೃಹದತ್ತ ತೆರಳುವ ವೇಳೆ ಪರಿವಾರದ ಕಾರ್ಯಕರ್ತರು ಕಾರಿನತ್ತ ಮೊಟ್ಟೆ ಎಸೆಯಲಾರಂಭಿಸಿದರು. ಇದರೊಂದಿಗೆ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದಗಳೊಂದಿಗೆ ಘೋಷಣೆ ಕೂಗಲಾರಂಭಿಸಿ ದರು.
    ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನತ್ತ ಮೊಟ್ಟೆ ಎಸೆದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ ಮರಳಿದರು. ಕಾಂಗ್ರೆಸ್ ಬಾವುಟ ಹಿಡಿದು ಬಿಜೆಪಿಯವರು ಸೇರಿದ್ದ ಸ್ಥಳದತ್ತ ಧಾವಿಸಲು ಪೊನ್ನಣ್ಣ ಮುಂದಾದರು. ಇವರಿಗೆ ಕಾಂಗ್ರೆಸ್ ಮುಖಂಡರು- ಕಾರ್ಯಕರ್ತರು ಜೋಶ್‌ನಿಂದ ಸಾಥ್ ನೀಡಿದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅಡ್ಡಗಟ್ಟಿ ನಿಲ್ಲುವುದರ ಮೂಲಕ ಅಹಿತಕರ ಘಟನೆ ತಪ್ಪಿಸಿದರು.

    ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದವರ ಮೇಲೆ ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬರಬೇಕೆಂದು ಆಗ್ರಹಿಸುತ್ತಾ ಪೊನ್ನಣ್ಣ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂತು ಪ್ರತಿಭಟನೆ ನಡೆಸಲಾರಂಭಿಸಿದರು. ಈ ವೇಳೆ ಕಾಂಗ್ರೆಸ್ಸಿಗರತ್ತ ಧಾವಿಸ ಲು ಪರಿವಾರದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಲಾರಂಭಿಸಿದರು.

    ಸಂಘ ಪರಿವಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದ ಸ್ಥಳದಲ್ಲಿ ಪೊಲೀಸರನ್ನು ತಳ್ಳಿ ದಾಳಿ ನಡೆಸುವ ಪ್ರಯತ್ನ ನಿರಂತರವಾಗಿ ನಡೆಯಿತು. ಅರ್ಧ ಗಂಟೆ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಹೈಡ್ರಾಮ ನಡೆಯಿತು. ಈ ಹೊತ್ತಿನಲ್ಲಿ ಮಂಗಳೂರು, ಮೈಸೂರು, ವಿರಾಜಪೇಟೆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

    ತಿತಿಮತಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿರುವುದು ಹಾಗೂ ಮಡಿಕೇರಿಯಲ್ಲಿ ಮೊಟ್ಟೆ ಎಸೆದಿರುವುದಕ್ಕೆ ಸಂಬಂಧಿಸಿದ್ದಂತೆ ಪ್ರಕರಣ ದಾಖಲಿಸ ಬೇಕು. ತಪ್ಪುತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರನ್ನು ಎ.ಎಸ್. ಪೊನ್ನಣ್ಣ ಆಗ್ರಹಿಸಿದರು. ಇದಕ್ಕೆ ಎಸ್ಪಿ ಸಮ್ಮತ್ತಿ ವ್ಯಕ್ತ ಪಡಿಸಿದ ಬಳಿಕ ಕಾಂಗ್ರೆಸ್ಸಿಗರು ಸ್ಥಳದಿಂದ ನಿರ್ಗಮಿಸಿದರು.

    ಸಂಘ ಪರಿವಾರದ ಕಾರ್ಯಕರ್ತರು ಸೇರಿದ್ದ ಸ್ಥಳಕ್ಕೆ ತೆರಳಿದ ಪೊಲೀಸ್ ವರಿಷ್ಠಾಧಿಕಾರಿ, ಪ್ರತಿಯೊಬ್ಬರು ಸ್ಥಳದಿಂದ ತೆರಳುವಂತೆ ಸೂಚನೆ ನೀಡಿದರು. ಕಾಂಗ್ರೆಸ್ಸಿಗರನ್ನು ಮೊದಲು ಕಳುಹಿಸಿ ಎಂದು ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು. ಅವರು ತೆರಳಿದ್ದಾರೆ, ನೀವು ತೆರಳಿ ಎಂದು ಎಸ್ಪಿ ಸೂಚನೆ ನೀಡಿದರು.

    **
    ನನ್ನ ಕಾರಿಗೆ ಮಡಿಕೇರಿಯಲ್ಲಿ ಮೊಟ್ಟೆ ಎಸೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ನೀವು ನೋಡಿದ್ರೆ (ಪತ್ರಕರ್ತರಿಗೆ) ಬರೆಯಿರಿ. ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ, ವಿಧಾನಸಭೆ.

    **
    ಕೊಡಗಿನಲ್ಲ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಲು ಆಗಮಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ತೆರಳುತ್ತಿದ್ದ ಕಾರಿನತ್ತ ಬಿಜೆಪಿಯವರು ಮೊಟ್ಟೆ ಎಸೆದಿರುವುದು ಖಂಡನೀಯ. ತಪ್ಪಿತಸ್ಥರ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಎ.ಎಸ್. ಪೊನ್ನಪ್ಪ, ಕೆಪಿಸಿಸಿ ವಕ್ತಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts