More

    ದಿ.ಸುರೇಶ ಅಂಗಡಿ ಅವರ ನಿವಾಸಕ್ಕೆ ಕಟೀಲ್ ಭೇಟಿ

    ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಟಿಪ್ಪುಜಯಂತಿ ಹೆಸರಲ್ಲಿ ಗಲಭೆ ಸೃಷ್ಟಿಸಿದರು. ಲಿಂಗಾಯತ-ವೀರಶೈವ ಎಂದು ಸಮಾಜ ಒಡೆದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ವಾಗ್ದಾಳಿ ನಡೆಸಿದರು.

    ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ದಿ.ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬ್ರಿಟಿಷರಿಗಿಂತ ಹೆಚ್ಚಾಗಿ ಸಮಾಜವನ್ನು ಒಡೆದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಆರೋಪಿಸಿದರು.
    ರೈತ ವಿರೋಧಿ: ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಗೌರವದಿಂದ ನಡೆದುಕೊಳ್ಳಬೇಕು, ಮಾತನಾಡಬೇಕು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ರೈತ ವಿಠ್ಠಲ ಅರಬಾವಿ ಸೇರಿ ವಿವಿಧ ಭಾಗಗಳಲ್ಲಿ ಮೂರು ಸಾವಿರಕ್ಕೂ ಅಧಿಕ ರೈತರು ಸಾಲಬಾಧೆ ಹಾಗೂ ಇನ್ನಿತರ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡರು. ಆದರೆ, ಅವರು ಒಬ್ಬ ರೈತನ ಮನೆಗೂ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿಲ್ಲ. ಇದೀಗ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆಲ್ಲಿದೆ ಎಂದು ಪ್ರಶ್ನಿಸಿದರು.

    ತಿರಸ್ಕೃತ ನಾಯಕ: ಸಿದ್ದರಾಮಯ್ಯನಂತಹ ಮುಖ್ಯಮಂತ್ರಿ ಮುಂದೆ ರಾಜ್ಯಕ್ಕೆ ಬೇಡ ಎಂದು ಅವರ ತವರೂರಾದ ಮೈಸೂರಿನಲ್ಲೇ ಜನರು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೂ ಎಲ್ಲೆಲ್ಲೋ ನಿಂತು ಗೆಲ್ಲುವ ಪರಿಸ್ಥಿತಿ ಬಂತು. ರಾಜ್ಯದ ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ ಎಂದು ನಳಿನ್‌ಕುಮಾರ ಕಟೀಲ್ ಟೀಕಿಸಿದರು. ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇತರರು ಇದ್ದರು.

    ಕಾಂಗ್ರೆಸ್ ನಾಯಕರಿಂದ ಕೀಳು ಮಟ್ಟದ ರಾಜಕಾರಣ: ರೈತರ ಅನುಕೂಲಕ್ಕಾಗಿ ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರಲಾಗುತ್ತಿದೆ. ಆದರೆ, ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ರೈತರನ್ನು ಎತ್ತಿಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರ, ರಾಜಕಾರಣಕ್ಕೋಸ್ಕರ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಭ್ರಷ್ಟಾಚಾರ, ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

    ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತರುವುದಾಗಿ ಹೇಳಿತ್ತು. ರೈತರಿಗೆ ನೇರವಾದ ಮಾರುಕಟ್ಟೆ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆ ಬೇಡಿಕೆ ಪ್ರಕಾರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿದೆ. ರೈತರಿಗೆ ವಸ್ತುಸ್ಥಿತಿ ಮನದಟ್ಟು ಮಾಡುವ ಕೆಲಸವನ್ನು
    ಪಕ್ಷದಿಂದ ಕೈಗೊಳ್ಳುತ್ತೇವೆ ಎಂದು ನಳಿನ್‌ಕುಮಾರ ಕಟೀಲ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts