More

    ಸಹಸ್ರಾರು ಭಕ್ತರ ನಡುವೆ ವಿಜೃಂಭಿಸಿದ ಕಿಕ್ಕೇರಮ್ಮ ಬ್ರಹ್ಮರಥೋತ್ಸವ

    ಕಿಕ್ಕೇರಿ: ಬಿರು ಬಿಸಿಲಿನ ಬೇಸಿಗೆಯನ್ನು ಲೆಕ್ಕಿಸದೆ ಕಿಕ್ಕೇರಿ-ಲಕ್ಷ್ಮೀಪುರ ಅವಳಿ ಗ್ರಾಮದ ಕಿಕ್ಕೇರಮ್ಮನವರ ರಥೋತ್ಸವಕ್ಕೆ ಈ ಬಾರಿ ಎತ್ತ ನೋಡಿದರೂ ಭಕ್ತರ ದಂಡು.

    ಕಿಕ್ಕೇರಿಗೆ ಕಿಕ್ಕೇರಮ್ಮ, ಲಕ್ಷ್ಮೀಪುರಕ್ಕೆ ಲಕ್ಷ್ಮೀದೇವಿ, ಸಹಸ್ರಾರು ಭಕ್ತರಿಗೆ ಮಹಾಲಕ್ಷ್ಮೀಯಾಗಿರುವ ಅಮ್ಮನವರ ರಥೋತ್ಸವ ಸೋಮವಾರ ಸಂಜೆಯ ಗೋಧೂಳಿ ಲಗ್ನದಲ್ಲಿ 4.30ಕ್ಕೆ ಭಕ್ತಗಣದೊಂದಿಗೆ ಚಾಲನೆ ದೊರೆಯಿತು.

    ಭಕ್ತರು ದೇವಿಗೆ ಜೈಕಾರ ಹಾಕಿ ಭಕ್ತಿಯ ಪರಾಕಾಷ್ಠೆ ಮೆರೆದರು. ರಥ ಬೀದಿಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿನ ಊರ ಹೊರಗಿನ ಅಮ್ಮನವರ ಗುಡಿಯವರೆಗೆ ರಥವನ್ನು ಭಕ್ತಗಣ ಎಳೆದು ಸ್ವಸ್ಥಾನಕ್ಕೆ ಸೇರಿಸಿದರು. ಭಕ್ತಿಯಿಂದ ನಮಿಸಿ ಹಣ್ಣು ಧವನ ಎಸೆದು ಕೃತಾರ್ಥರಾದರು.

    ರಥೋತ್ಸವಕ್ಕೂ ಮುನ್ನ ಕಳಶ ಪೂಜೆ, ಬಲಿಅನ್ನ, ಧೂಪ ಪೂಜೆ ನಡೆಯಿತು. ಗುಡಿಯಿಂದ ಅಮ್ಮನವರನ್ನು ಚಾಮರ, ದೀವಟಿಕೆ ಮೆರವಣಿಗೆ ಮೂಲಕ ಪಟ್ಟಣದಲ್ಲೆಲ್ಲ ಮೆರವಣಿಗೆ ಮಾಡಿ ಅಂತಿಮವಾಗಿ ರಥದಲ್ಲಿ ಪ್ರತಿಷ್ಠಾಪಿಸಿ ದೇವಿಗೆ ಮಹಾ ಪೂಜೆ, ದೃಷ್ಟಿ ಪೂಜೆ ಸಲ್ಲಿಸಲಾಯಿತು.

    ಜಾತ್ರೆಯ ಅಂಗವಾಗಿ ತಳಿರು ತೋರಣ, ಹೊಸ ಬೀದಿ, ನರಸಿಂಹಸ್ವಾಮಿ ಬೀದಿಯಲ್ಲಿ ಬಿಡಿಸಿದ ರಂಗೋಲಿಗಳು ಹಬ್ಬಕ್ಕೆ ಹೊಸ ಕಳೆ ನೀಡಿತು. ಉತ್ಸವ ಮೂರ್ತಿಗೆ ಭಕ್ತರು ಹಣ್ಣು, ಕಾಯಿ ಬೆಲ್ಲದ ರಸಾಯನ ನೈವೇದ್ಯ ಅರ್ಪಿಸಿ, ಆರತಿ ಎತ್ತಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

    ನವ ಜೋಡಿಗಳು, ವಿವಿಧ ಊರುಗಳಲ್ಲಿ ನೆಲೆಸಿರುವ ತವರೂರಿನ ಮಕ್ಕಳು, ನೆಂಟರಿಷ್ಟರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪುಟಾಣಿ ಮಕ್ಕಳು ಹೊಸ ಬಟ್ಟೆ ತೊಟ್ಟು ಕುಣಿದಾಡಿದರು. ರಾಮನಹಳ್ಳಿಯ ಕೆಂಪಣ್ಣ ಮಕ್ಕಳಿಂದ ಕೋಲಾಟ ಪ್ರದರ್ಶನ ನೀಡಿ ಜಾತ್ರೆಗೆ ಕಳೆತುಂಬಿದರು.
    ಸುಡು ಬಿಸಿಲಿನ ದಾಹವನ್ನು ತಣಿಸಲು ಅಲ್ಲಲ್ಲಿ ವಿವಿಧ ಯುವಕ ಸಂಘಗಳು, ಗ್ರಾಮಸ್ಥರು ನೀರು ಮಜ್ಜಿಗೆ, ಕೋಸಂಬರಿ, ಪಾನಕ, ಚಿತ್ರಾನ್ನ, ಪೊಂಗಲ್, ಪುಳಿಯೊಗರೆ, ಫ್ರೂಟ್ ಸಲಾಡ್, ಸಿಹಿ ತಿನಿಸು, ಮೊಸರನ್ನದಂತಹ ದಾಸೋಹ ಏರ್ಪಡಿಸಲಾಗಿತ್ತು.

    ಲಕ್ಷ್ಮೀಪುರ ಗ್ರಾಮದ ದೇವಿಯ ಕೆಂಚಮ್ಮ, ದೊಡ್ಡಹಟ್ಟಿ, ಬೂನಾಸಿ, ಮಾರಮ್ಮ ವಠಾರದ ಮುಖಂಡರು, ದೇಗುಲ ಸಮಿತಿಯವರು, ಕಿಕ್ಕೇರಿ ಗ್ರಾಮ ಪ್ರಮುಖರು, ಹೊರ ಪ್ರದೇಶಗಳ ಸಹಸ್ರಾರು ದೇವಿಯ ಒಕ್ಕಲಿನ ಭಕ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts