More

    ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ಖೋ-ಖೋ ಪಂದ್ಯಾವಳಿಗೆ ಚಾಲನೆ

    ಮೈಸೂರು: ಉತ್ತಮ ಪ್ರದರ್ಶನ ನೀಡಿದ ನಗರದ ಕೆ.ಪುಟ್ಟಸ್ವಾಮಿ ಪ್ರೌಢಶಾಲಾ ತಂಡವು ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ ಖೋ-ಖೋ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.


    ದಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪೆವಿಲಿಯನ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯಾವಳಿಯಲ್ಲಿ ಸುತ್ತೂರಿನ ಜೆಎಸ್‌ಎಸ್ ಪ್ರೌಢಶಾಲೆ ವಿರುದ್ಧ 5 ಅಂಕಗಳಿಂದ ಭರ್ಜರಿ ಜಯ ಸಾಧಿಸಿತು.


    ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 15-9 ಅಂಕಗಳ ಅಂತರದ ಮುನ್ನಡೆ ಕಾಯ್ದುಕೊಂಡ ಪುಟ್ಟಸ್ವಾಮಿ ತಂಡ ಎರಡನೇ ಇನಿಂಗ್ಸ್‌ನಲ್ಲೂ ಅದೇ ಲಯದ ಆಟ ಮುಂದುವರೆಸಿ 20-11 ಅಂಕ ಗೆಲುವಿನ ನಗೆ ಬೀರಿತು.


    ಮತ್ತೊಂದು ಪಂದ್ಯದಲ್ಲಿ ಕೊತ್ತೆಗಾಲದ ಸರ್ಕಾರಿ ಪ್ರೌಢಶಾಲೆ ವಿರುದ್ಧ 7 ಅಂಕಗಳಿಂದ ದೊಡ್ಡಹುಂಡಿಯ ಮೊರಾರ್ಜಿ ಶಾಲಾ ತಂಡ ಭರ್ಜರಿ ಜಯ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 4-2 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡ ಮೊರಾರ್ಜಿ ತಂಡ ಎರಡನೇ ಇನಿಂಗ್ಸ್ ಮುಗಿದಾಗ 15-8 ಅಂಗಳಿಂದ ಜಯ ಸಾಧಿಸಿತು.


    ರೋಚಕತೆಯಿಂದ ಕೂಡಿದ ಮತ್ತೊಂದು ಪಂದ್ಯದಲ್ಲಿ ಕುರುಬೂರಿನ ನಿರ್ವಾಹಣ ಸ್ವಾಮಿ ಪ್ರೌಢಶಾಲಾ ತಂಡವು ಕ್ಯಾಪಿಟಲ್ ಪ್ರೌಢಶಾಲೆ ವಿರುದ್ಧ ಜಯ ಸಾಧಿಸಿತು. ಬಾಲಕಿಯರ ವಿಭಾಗದ ಪಂದ್ಯದಲ್ಲಿ ಸಿಕೆಸಿ ತಂಡ 1 ಅಂಕದಿಂದ ಸರ್ಕಾರಿ ಪ್ರೌಢಶಾಲೆ ಕುಂಬಾರ ಕೊಪ್ಪಲು ವಿರುದ್ಧ ಜಯ ಸಾಧಿಸಿತು.


    ಪಂದ್ಯಾವಳಿಯು 31ರ ವರೆಗೆ ನಡೆಯಲಿದ್ದು, ಬಾಲಕ ಹಾಗೂ ಬಾಲಕಿಯರ ವಿಭಾಗದಿಂದ ತಲಾ 11 ತಂಡಗಳು ಭಾಗಿಯಾಗಿವೆ. ದಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವಿಜೇತ ತಂಡಗಳಿಗೆ ಮೊದಲ ಬಹುಮಾನವಾಗಿ 25 ಸಾವಿರ ರೂ., ಎರಡನೇ ಬಹುಮಾನವಾಗಿ 15 ಸಾವಿರ ರೂ., 3ನೇ ಬಹುಮಾನವಾಗಿ 10 ಸಾವಿರ ರೂ. ನಗದು ಮತ್ತು ಆಕರ್ಷಕ ಪಾರಿತೋಷಕ ನೀಡಲಿದೆ.


    ಉದ್ಘಾಟನೆ: ಪಂದ್ಯಾವಳಿಗೆ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭಾ ಕೋರಿದರು. ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ, ಮಹದೇವಪ್ಪ, ಸಚ್ಚಿದಾನಂದ, ಗುರುದತ್, ವಿಶ್ವನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts