More

    ಖಾಸಗಿ ಶಾಲೆಗಳ ಮೇಲೆ ಕರೊನಾ ಆತಂಕ: ಶಿಕ್ಷಕರಿಗೆ ಉದ್ಯೋಗದ್ದೇ ಚಿಂತೆ

    ರಾಮನಗರ: ಖಾಸಗಿ ಶಾಲೆಗಳ ಮೇಲೆ ಕರೊನಾ ಕರಿನೆರಳು ಆವರಿಸಿದ್ದು, ಶಾಲೆಗಳಿಗೀಗ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದರೆ ಮತ್ತೊಂದೆಡೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕೆಲಸ ಉಳಿಯುವುದೋ ಎಂಬ ಆತಂಕ ಕಾಡತೊಡಗಿದೆ.

    ಸಾಮಾನ್ಯವಾಗಿ ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಖಾಸಗಿ ಶಾಲೆಗಳು ಲಿತಾಂಶದ ನಿರೀಕ್ಷೆಯಲ್ಲಿದ್ದು, ಮುಂದಿನ ವರ್ಷದ ದಾಖಲಾತಿಗಾಗಿ ಕಸರತ್ತು ನಡೆಸುತ್ತಿದ್ದವು. ಆದರೆ ಈ ಬಾರಿ ಕರೊನಾ ಹೊಡೆತ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಿದ್ದು, ಸರ್ಕಾರ ಏನು ನಿರ್ಧಾರ ಕೈಗೊಳ್ಳುವುದೋ ಎನ್ನುವ ಆತಂಕದ ನಡುವೆ ಕೆಲಸ ಮಾಡುವಂತಾಗಿದೆ.

    ಇನ್ನೂ ಕೊಟ್ಟಿಲ್ಲ ಸಂಬಳ: ಲಭ್ಯ ಮಾಹಿತಿ ಪ್ರಕಾರ ಕೆಲ ಖಾಸಗಿ ಶಾಲೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸಿಬ್ಬಂದಿಗೆ ಸಂಬಳ ನೀಡಿಲ್ಲ. ಕೆಲ ಶಾಲೆಗಳು ಮಾರ್ಚ್‌ನ ಅರ್ಧ ವೇತನವನ್ನಷ್ಟೇ ನೀಡಿದ್ದು, ಏಪ್ರಿಲ್ ಸಂಬಳ ಸಿಗುವುದು ಅನುಮಾನ ಎನ್ನುವಂತಾಗಿದೆ. ಇದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬದುಕಿನ ಮೇಲೆ ಬರೆ ಎಳೆದಿದೆ.

    ಶಾಲೆಗಳಿಗೆ ಅಸ್ತಿತ್ವದ ಪ್ರಶ್ನೆ?: ಖಾಸಗಿ ಶಾಲೆಗಳು ಆಘಾತಕ್ಕೆ ಒಳಗಾಗಿದ್ದು ಮುಂದೇನು ಎನ್ನುವ ಪ್ರಶ್ನೆ ಕಾಡತೊಡಗಿದೆ. ಆರ್ಥಿಕವಾಗಿ ಪ್ರಬಲವಾಗಿರುವ ಸಂಸ್ಥೆಗಳು ಹಾಗೋ ಹೀಗೋ ಎಲ್ಲವನ್ನೂ ನಿಭಾಯಿಸುವ ಶಕ್ತಿ ಹೊಂದಿದ್ದರೆ, ಸಣ್ಣಪುಟ್ಟ ಶಾಲೆಗಳ ಗತಿ ಏನು ಎನ್ನುವಂತಾಗಿದೆ. ಒಂದು ವೇಳೆ ಸರ್ಕಾರ ಕರೊನಾ ಭೀತಿಯಲ್ಲಿ ನಿಯಮಗಳನ್ನು ಕಠಿಣಗೊಳಿಸಿದರೆ, ಖಂಡಿತವಾಗಿ ಮೂಲಸೌಕರ್ಯಗಳಿಲ್ಲದ ಶಾಲೆಗಳ ಬಾಗಿಲು ಬಂದ್ ಆಗುವುದು ನಿಶ್ಚಿತ ಎನ್ನುತ್ತವೆ ಮೂಲಗಳು.

    ಉದ್ಯೋಗದ ಚಿಂತೆ: ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಶಿಕ್ಷಕ ಸಮುದಾಯಕ್ಕೆ ಮುಂದೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಶಿಕ್ಷಕರ ಕೆಲಸ ಶಾಲೆಗಳ ದಾಖಲಾತಿ ಮತ್ತು ಆರಂಭದ ಮೇಲೆ ನಿರ್ಧಾರವಾಗಿದ್ದು, ಒಂದು ವೇಳೆ ಸರ್ಕಾರ ಕಠಿಣ ನಿಲುವು ತಳೆದಿದ್ದೇ ಆದರೆ ಜಿಲ್ಲೆಯಲ್ಲಿ ನೂರಾರು ಮಂದಿಯ ಉದ್ಯೋಗಕ್ಕೆ ಕತ್ತರಿ ಬೀಳಲಿದೆ.

    ಸೆಳೆಯಲು ತಂತ್ರ: ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈಗಾಗಲೇ ಆನ್‌ಲೈನ್ ತರಗತಿ ಆರಂಭಿಸಿವೆ. ಇದರ ಜತೆಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಮಾಡಿಕೊಂಡು ಈ ಮೂಲಕವೂ ಪಠ್ಯಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳುತ್ತಿವೆ.

    ಮನೆ ಮನೆ ಪ್ರಚಾರ: ಕೆಲ ಖಾಸಗಿ ಶಾಲೆಗಳು ಸದ್ದಿಲ್ಲದೆ ಮನೆ ಪ್ರಚಾರ ಮಾಡುತ್ತಿವೆ ಎನ್ನುವ ಮಾಹಿತಿಯೂ ಇದೆ. ಈಗಾಗಲೇ ತಮ್ಮದೇ ಶಾಲೆಯಲ್ಲಿ 7ನೇ ತರಗತಿ, 10ನೇ ತರಗತಿ ಓದಿರುವ ಮಕ್ಕಳನ್ನು ಗುರಿಯಾಗಿಸಿಕೊಂಡು ಅವರನ್ನು ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಪ್ರವೇಶ ಪಡೆದುಕೊಳ್ಳುವಂತೆ ದುಂಬಾಲು ಬಿದ್ದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳ ಬಳಿ ತೆರಳಿದರೆ ಸಮಸ್ಯೆ ಎದುರಾಗುತ್ತದೆ ಎನ್ನುವ ಕಾರಣಕ್ಕೆ ಶಿಕ್ಷಕರಿಗೆ ಏರಿಯಾಗಳು ಮತ್ತು ಅವರಿಗೆ ಪರಿಚಿತ ಮನೆಗಳಿಗೆ ಕಳುಹಿಸಿ ಮನವಿ ಮಾಡುವ ಕೆಲಸವೂ ನಡೆಯುತ್ತಿದೆ.

    ಖಾಸಗಿ ಶಾಲೆಗಳು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಕರಿಗೆ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ. ಬಾಕಿ ಶುಲ್ಕವೂ ಬಂದಿಲ್ಲ. ಅವರಿಂದ ಬಲವಂತವಾಗಿ ಕಟ್ಟಿಸಿಕೊಳ್ಳುವ ಪರಿಸ್ಥಿತಿಯೂ ಇದಲ್ಲ. ಖಾಸಗಿ ಶಾಲೆಗಳ ಜತೆಗೆ, ಇದನ್ನೇ ನಂಬಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಉದ್ಯೋಗ ಭದ್ರತೆಯನ್ನು ಸರ್ಕಾರ ಮಾಡಬೇಕಿದೆ.
    ಪಟೇಲ್ ಸಿ.ರಾಜು ಅಧ್ಯಕ್ಷರು, ಖಾಸಗಿ ಶಾಲೆಗಳ ಒಕ್ಕೂಟ

    ಈಗಾಗಲೇ ಮಾರ್ಚ್‌ನ ಅರ್ಧ ಸಂಬಳ ನೀಡಿದ್ದಾರೆ. ಏಪ್ರಿಲ್ ಸಂಬಳ ದೊರೆಯುವುದು ಅನುಮಾನ. ಕೆಲಸ ಉಳಿಯುತ್ತದೋ ಇಲ್ಲವೋ ಎನ್ನುವ ಆತಂಕವೂ ಎದುರಾಗಿದೆ.
    ಹೆಸರು ಹೇಳಲಿಚ್ಚಿಸದ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts