More

    ಕೆಎಫ್‌ಡಿ ಪ್ರಕರಣ ಶೀಘ್ರ ಪರೀಕ್ಷೆಗೆ ಒಳಪಡಿಸಿ: ಡಿಸಿ ಸೂಚನೆ

    ಶಿವಮೊಗ್ಗ: ಜಾನುವಾರುಗಳ ಮೇಲಿನ ಉಣ್ಣಿ (ಉಣುಗು) ಸಂಖ್ಯೆ ನಿಯಂತ್ರಣ ಮತ್ತು ಪರೀಕ್ಷೆಗಳಿಂದ ಶೀಘ್ರ ರೋಗ ಪತ್ತೆ ಮಾಡುವ ಮೂಲಕ ಮಂಗನ ಕಾಯಿಲೆ (ಕೆಎಫ್‌ಡಿ) ಪರಿಣಾಮಕಾರಿಯಾಗಿ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಶನಿವಾರ ಕೆಎಫ್‌ಡಿ ಮತ್ತು ರೇಬಿಸ್ ಕುರಿತಾದ ಅಂತರ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲೆನಾಡಿನ ಅತಿ ಹೆಚ್ಚು ಉಣುಗುಗಳಿರುವ ಪ್ರದೇಶಗಳನ್ನು ಗುರುತಿಸಿ, ಜಾನುವಾರುಗಳು ಅಂತಹ ಪ್ರದೇಶದಲ್ಲಿ ಮೇಯದಂತೆ ಕ್ರಮ ವಹಿಸಬೇಕು. ಕಾಲಕಾಲಕ್ಕೆ ಜಾನುವಾರುಗಳಿಗೆ ಐವರ್‌ಮೆಕ್ಟಿನ್/ಡೊರಾಮೆಕ್ಟಿನ್ ಲಸಿಕೆ ನೀಡಬೇಕು. ಜಾನುವಾರುಗಳ ಬೆನ್ನಿನ ಮೇಲೆ ಪೊರಾನ್ ದ್ರಾವಣ ಸಿಂಪಡಿಸಬೇಕು. ರೈತರು ಜಾನುವಾರುಗಳು ಮತ್ತು ಕೊಟ್ಟಿಗೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಬೇಕು ಎಂದರು.
    ಉಣುಗುಗಳ ಹಾಟ್‌ಸ್ಪಾಟ್ ಕಡಿಮೆ ಮಾಡಬೇಕು. ರೈತರಿಗೆ ಉಣುಗು ನಿಯಂತ್ರಣ ಮತ್ತು ಕೆಎಫ್‌ಡಿ ಕುರಿತು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯವರು ಉಣುಗು ಮಾದರಿ ಪರೀಕ್ಷೆ, ಉಣುಗು ಸರ್ವೇಕ್ಷಣೆ ಕೈಗೊಳ್ಳಬೇಕು. ಸಂಶಯಾಸ್ಪದ ಕೆಎಫ್‌ಡಿ ಪ್ರಕರಣಗಳನ್ನು ಶೀಘ್ರ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯ ಶಿಕ್ಷಣವನ್ನು ಹೆಚ್ಚಿಸಬೇಕು ಎಂದು ಹೇಳಿದರು.
    ಕೆಎಫ್‌ಡಿ ನಿಯಂತ್ರಣದಲ್ಲಿ ಪಶುಪಾಲನಾ ಇಲಾಖೆಯ ಜವಾಬ್ದಾರಿ ಹೆಚ್ಚಿರುತ್ತದೆ. ತರಬೇತಿ ಹೊಂದಿದ ಸಿಬ್ಬಂದಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಸಾಕುಪ್ರಾಣಿಗಳಲ್ಲಿ ಉಣುಗು ನಿಯಂತ್ರಕಗಳನ್ನು ಬಳಸಬೇಕು. ಮಂಗ ಸತ್ತರೆ ಅರಣ್ಯ, ಪಶುಪಾಲನೆ, ಆರೋಗ್ಯ ಇಲಾಖೆಯವರು ಮತ್ತು ಸಂಬಂಧಿಸಿದ ಪಿಡಿಒ ಅದನ್ನು ವರದಿ ಮಾಡಬೇಕು. ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ 60 ಮೀಟರ್ ಒಳಗೆ ರಾಸಾಯನಿಕ ಸಿಂಪಡಿಸಿ ಅಲ್ಲಿ ಮಾನವರ, ಇತರ ಪ್ರಾಣಿಗಳ ಪ್ರವೇಶವನ್ನು ತಡೆಯಬೇಕು ಎಂದರು.
    ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts