More

    2 ವರ್ಷಗಳ ಬಳಿಕ ಲಖನೌ ಜೈಲಿನಿಂದ ಬಿಡುಗಡೆಯಾದ ಕೇರಳ ಪತ್ರಕರ್ತ ಸಿದ್ದಿಖ್​ ಕಪ್ಪನ್​

    ಲಖನೌ: ಎರಡು ವರ್ಷಗಳ ಹಿಂದೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾದ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣದ ವರದಿ ಮಾಡುವಾಗ ರಾಜದ್ರೋಹ ಅಥವಾ ದೇಶದ್ರೋಹ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಖ್​ ಕಪ್ಪನ್​ ಅವರು ಇಂದು (ಫೆ.2) ಲಖನೌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಬಿಡುಗಡೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕಠಿಣ ಕಾನೂನುಗಳ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ಜಾಮೀನು ಪಡೆದ ನಂತರವೂ ನನ್ನನ್ನು ಜೈಲಿನಲ್ಲಿಟ್ಟರು. ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆ ಎಂದು ನನಗೆ ತಿಳಿದಿಲ್ಲ. ಈ ಎರಡು ವರ್ಷಗಳು ತುಂಬಾ ಕಠಿಣವಾಗಿತ್ತು, ಆದರೆ ನಾನು ಎಂದಿಗೂ ಹೆದರಲಿಲ್ಲ ಎಂದರು.

    ಮೃತ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್​ಗೆ ತೆರಳುವಾಗ ಸಿದ್ದಿಖ್​ರನ್ನು ಬಂಧಿಸಲಾಗಿತ್ತು. ಪ್ರಸ್ತುತ ನಿಷೇಧವಾಗಿರುವ ಪಾಪುಲರ್​ ಫ್ರಂಟ್​ ಇಂಡಿಯಾ ಸಂಘಟನೆಯೊಂದಿಗೆ ಸಿದ್ದಿಖ್​ ಮತ್ತು ಇತರೆ ಮೂವರು ಸಂಪರ್ಕ ಹೊಂದಿದ್ದರು ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಸಂಚಿನ ಭಾಗವಾಗಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಸಿದ್ದಿಖ್​ ಅವರನ್ನು ಬಂಧಿಸಲಾಗಿತ್ತು.

    ಹತ್ರಾಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್​ನಲ್ಲಿ ಸುಪ್ರೀಂಕೋರ್ಟ್​, ಸಿದ್ದಿಖ್​ ಅವರಿಗೆ ಜಾಮೀನು ನೀಡಿತ್ತು. ಆದರೆ, ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಾಕಿ ಉಳಿದಿದ್ದರಿಂದ ಸಿದ್ದಿಖ್​ ಅವರು ಲಖನೌ ಜೈಲಿನಲ್ಲೇ ಉಳಿಯಬೇಕಾಯಿತು. ಇದೀಗ ಈ ಪ್ರಕರಣದಿಂದಲೂ ಸಿದ್ದಿಖ್​ ಅವರಿಗೆ ಜಾಮೀನು ಸಿಕ್ಕಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಆರಂಭದಲ್ಲಿ ಕಪ್ಪನ್ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು ಮತ್ತು ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ 2022ರ ಫೆಬ್ರವರಿಯಲ್ಲಿ ನಿಷೇಧಿತ ಪಿಎಫ್‌ಐನಿಂದ ಹಣವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಇಡಿ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತು.

    ಡಿಸೆಂಬರ್​ 23ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್​ ಹೈಕೋರ್ಟ್​ ಸಿದ್ದಿಖ್​ ಅವರಿಗೆ ಜಾಮೀನು ನೀಡಿತು. ಆದರೆ, ಜಾಮೀನಿನ ಮೇಲೆ ಕಪ್ಪನ್ ಬಿಡುಗಡೆಗೆ ಅಗತ್ಯವಾದ ಶ್ಯೂರಿಟಿಗಳನ್ನು ಬುಧವಾರ (ಫೆ.1) ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಇಂದು ಅವರನ್ನು ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್​)

    ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ರೆಡಿಯಾದ ಸಂಸದೆ ಸುಮಲತಾ ಅಂಬರೀಷ್​ಗೆ ಬಿಗ್ ಶಾಕ್!

    ಉತ್ತರ ಪ್ರದೇಶ ಮೂಲದ ಯುವ ವೈದ್ಯೆ ಸಾವಿಗೆ ಶರಣು: ಪಾಗಲ್​ ಪ್ರೇಮಿ ಕೊಟ್ಟ ಕಾಟಕ್ಕೆ ಬೇಸತ್ತು ಬದುಕಿಗೆ ಅಂತ್ಯ

    ದೂರು ದಾಖಲಿಸದಿರಲು 1 ಲಕ್ಷ ರೂ. ಲಂಚ! ಲೋಕಾಯುಕ್ತ ಬಲೆಗೆ ಬಿದ್ದ ದೇವದುರ್ಗ-ಮಾನ್ವಿ ಠಾಣೆಯ ಇನ್ಸ್​ಪೆಕ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts